August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮನೆ ಕಾಮಗಾರಿ ವೇಳೆ 6.37 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು – 24 ಗಂಟೆಯೊಳಗೆ ಆರೋಪಿ ಬಂಧನ!

ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಪ್ರದೇಶದಲ್ಲಿ ಮನೆಯೊಂದರ ಕಾಮಗಾರಿ ವೇಳೆ ನಡೆದಿದ್ದ ಬೃಹತ್ ಚಿನ್ನಾಭರಣ ಹಾಗೂ ಬೆಲೆಬಾಳುವ ವಾಚ್ ಕಳವು ಪ್ರಕರಣವನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ಕೆಲಸಗಾರನನ್ನು ಬಂಧಿಸಿ, ಕಳುವಾಗಿದ್ದ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಬಲರಾಮ್‌ಪುರ ಜಿಲ್ಲೆಯ 24 ವರ್ಷ ಪ್ರಾಯದ ಜಹೀರುದ್ದೀನ್ ಬಂಧಿತ ಆರೋಪಿ. ಈತ ಪ್ರಸ್ತುತ ಮಂಗಳೂರಿನ ಬಂದರಿನ ಅಜಿಜುದ್ದೀನ್ ರಸ್ತೆಯಲ್ಲಿ ವಾಸವಾಗಿದ್ದನು.

ಘಟನೆಯ ವಿವರ:

ಮೇರಿಹಿಲ್ ಬಾಂದೋಟ್ಟು ಭಾಗದ ಮನೆಯೊಂದರಲ್ಲಿ ಜುಲೈ 6ರಂದು ಛಾವಣಿ ಬದಲಾವಣೆ ಹಾಗೂ ಹಾಲ್‌ನಲ್ಲಿ ಫಾಲ್ಸ್ ಸೀಲಿಂಗ್ (False Ceiling) ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮನೆಯ ಟೇಬಲ್ ಡ್ರಾವರ್‌ನಲ್ಲಿ ಪರ್ಸ್‌ನಲ್ಲಿ ಇರಿಸಲಾಗಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ಮತ್ತು 4 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು ಹಾಗೂ ಗೋಲ್ಡ್ ಕೋಟೆಡ್ ಸೊನಾಟಾ ವಾಚ್ ಸೇರಿ ಒಟ್ಟು ₹6,37,000/- ಮೌಲ್ಯದ ಸೊತ್ತುಗಳು ಕಳುವಾಗಿದ್ದವು.

ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305ರ ಅಡಿಯಲ್ಲಿ ಪ್ರಕರಣ (ಅ.ಕ್ರ 68/2026) ದಾಖಲಾಗಿತ್ತು.

24 ಗಂಟೆಯಲ್ಲಿ ಆರೋಪಿ ಸೀಜ್:

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ಕಾಮಗಾರಿಗೆ ಬಂದಿದ್ದ ಕೆಲಸಗಾರರನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದರು. ಈ ವೇಳೆ ಆರೋಪಿ ಜಹೀರುದ್ದೀನ್ ತಾನೇ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನಿಂದ ಕಳವು ಮಾಡಲಾಗಿದ್ದ ಸಂಪೂರ್ಣ ಚಿನ್ನಾಭರಣ ಹಾಗೂ ವಾಚನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸದರಿ ಸಂಕೀರ್ಣ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಭೇದಿಸುವಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ.ಆರ್. ಮಂಜಪ್ಪ, ಸಬ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಡಿ. ಹಾಗೂ ಠಾಣೆಯ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ. ಪೊಲೀಸ್ ತಂಡದ ಈ ಕಾರ್ಯಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You may also like

News

ನೀರುಮಾರ್ಗದ ಚರ್ಚ್ ನ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಸಾಂಪ್ರದಾಯಿಕ ಆಹಾರ ಹಬ್ಬದ ಸಂಭ್ರಮ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸಂತ ಜೋಸೆಫ್ ಕಾರ್ಮಿಕರ ದೇವಾಲಯದ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ‘ಸಾಂಪ್ರದಾಯಿಕ ಆಹಾರ ಹಬ್ಬ’
News

Father Muller College of Nursing Strengthens Academic Collaborations Through Two more Strategic MoUs on Palliative Care and Counselling

Reinforcing its commitment to holistic nursing education, interdisciplinary learning, and community-oriented healthcare, Father Muller School & College of Nursing (FMCON)

You cannot copy content of this page