ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಜಿಟಲ್ ಕ್ರಾಂತಿ – ಯು.ಟಿ. ಖಾದರ್
ಪೇಪರ್‌ಲೆಸ್ ಆಸ್ಪತ್ರೆ, ಟೆಲಿ-ಐಸಿಯು, ಕುದಿಸಿದ ನೀರು ಕಡ್ಡಾಯ

ರಾಹುಲ್ ಗಾಂಧಿ ವಿರುದ್ಧದ ಹೇಳಿಕೆಗೆ ತೀವ್ರ ವಾಗ್ದಾಳಿ

ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ತಂತ್ರಜ್ಞಾನ ಆಧಾರಿತ, ವೇಗದ ಹಾಗೂ ಜನಸ್ನೇಹಿ ಸೇವೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಶೀಘ್ರದಲ್ಲೇ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪೇಪರ್‌ಲೆಸ್ ಆರೋಗ್ಯ ಸೇವೆ, ಟೆಲಿ-ಐಸಿಯು ವ್ಯವಸ್ಥೆ, ನವಜಾತ ಶಿಶುಗಳ ವಿಶೇಷ ಆರೈಕೆ ಘಟಕಗಳು ಹಾಗೂ ಆಯುಷ್ ಸೇವೆಗಳ ಸಮಗ್ರ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ಜುಲಾಯಿ 30ರಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ರಾಜ್ಯವನ್ನು ದೇಶದಲ್ಲೇ ಮಾದರಿಯನ್ನಾಗಿಸುವ ಉದ್ದೇಶದಿಂದ ಸರ್ಕಾರ ಸಮಗ್ರ ಡಿಜಿಟಲ್ ಆರೋಗ್ಯ ಯೋಜನೆ ಜಾರಿಗೊಳಿಸುತ್ತಿದೆ ಎಂದು ಹೇಳಿದರು.

183 ಆಸ್ಪತ್ರೆಗಳಲ್ಲಿ ಪೇಪರ್‌ಲೆಸ್ ವ್ಯವಸ್ಥೆ:
ಪ್ರಾಥಮಿಕ ಆರೋಗ್ಯ ಕೇಂದ್ರ (PHC), ಸಮುದಾಯ ಆರೋಗ್ಯ ಕೇಂದ್ರ (CHC) ಹಾಗೂ ತಾಲೂಕು ಆಸ್ಪತ್ರೆಗಳಿಗೆ ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ನಾಲ್ಕು ಜಿಲ್ಲೆಗಳ 40 ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಜಾರಿಗೊಂಡಿರುವ ಡಿಜಿಟಲ್ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆಯನ್ನು ರಾಜ್ಯದ 183 ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಲಾಗುತ್ತಿದೆ.
ಈ ವ್ಯವಸ್ಥೆ ಜಾರಿಯಾದ ಬಳಿಕ ರೋಗಿಯ ವೈದ್ಯಕೀಯ ಇತಿಹಾಸ, ವೈದ್ಯರ ಸಲಹೆ, ಪ್ರಯೋಗಾಲಯ ಪರೀಕ್ಷಾ ವರದಿ, ಔಷಧ ವಿತರಣೆ, ರಕ್ತದೊತ್ತಡ, ಸಕ್ಕರೆ ಪ್ರಮಾಣ ಸೇರಿದಂತೆ ಸಂಪೂರ್ಣ ಆರೋಗ್ಯ ಮಾಹಿತಿ ಡಿಜಿಟಲ್ ರೂಪದಲ್ಲಿ ಸಂಗ್ರಹವಾಗಲಿದೆ. ಇದರಿಂದ ರೋಗಿಯ ಮುಂದಿನ ಚಿಕಿತ್ಸೆಗೆ ವೈದ್ಯರಿಗೆ ಸಮಗ್ರ ಮಾಹಿತಿ ಒಂದೇ ವೇದಿಕೆಯಲ್ಲಿ ಲಭ್ಯವಾಗಲಿದೆ. ಮುಂದಿನ ಹಂತದಲ್ಲಿ ಖಾಸಗಿ ಆಸ್ಪತ್ರೆಗಳನ್ನೂ ಈ ಡಿಜಿಟಲ್ ಆರೋಗ್ಯ ಜಾಲಕ್ಕೆ ಸಂಪರ್ಕಿಸುವ ಯೋಜನೆ ಇದೆ ಎಂದು ಸಚಿವರು ತಿಳಿಸಿದರು.

ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ-ಐಸಿಯು:
ತಜ್ಞ ವೈದ್ಯರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟೆಲಿ-ಐಸಿಯು ವ್ಯವಸ್ಥೆ ಆರಂಭಿಸಲಾಗುತ್ತಿದೆ. ಸ್ಥಳೀಯವಾಗಿ ತರಬೇತಿ ಪಡೆದ ನರ್ಸ್‌ಗಳು ರೋಗಿಗಳ ಆರೈಕೆ ನಿರ್ವಹಿಸಲಿದ್ದು, ತಜ್ಞ ವೈದ್ಯರು ದೂರದಿಂದಲೇ ರೋಗಿಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿ ತಕ್ಷಣದ ವೈದ್ಯಕೀಯ ಮಾರ್ಗದರ್ಶನ ನೀಡಲಿದ್ದಾರೆ.
ನವಜಾತ ಶಿಶುಗಳ ಆರೈಕೆಗೆ ವಿಶೇಷ ಘಟಕ:
ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ತಾಲೂಕು ಆಸ್ಪತ್ರೆಗಳು ಹಾಗೂ ಸಿಎಚ್‌ಸಿಗಳಲ್ಲಿ ಪೀಡಿಯಾಟ್ರಿಕ್ ಎಮರ್ಜೆನ್ಸಿ ಕೇರ್ ಹಾಗೂ ಸ್ಪೆಷಲ್ ನ್ಯೂಬಾರ್ನ್ ಕೇರ್ ಯುನಿಟ್ (SNCU) ಸ್ಥಾಪಿಸಲಾಗುವುದು. ಇದರಿಂದ ನವಜಾತ ಶಿಶುಗಳ ಚಿಕಿತ್ಸೆಗೆ ಜಿಲ್ಲಾ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಅವಲಂಬನೆಯ ಅಗತ್ಯ ಕಡಿಮೆಯಾಗಲಿದೆ.

₹72 ಕೋಟಿ ಅನುದಾನ:
ಡಿಜಿಟಲ್ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ₹42 ಕೋಟಿ ಹಾಗೂ ಟೆಲಿ-ಐಸಿಯು ವ್ಯವಸ್ಥೆ ಸ್ಥಾಪನೆಗೆ ₹30 ಕೋಟಿ ಸೇರಿದಂತೆ ಒಟ್ಟು ₹72 ಕೋಟಿ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ ಎಂದು ಖಾದರ್ ಮಾಹಿತಿ ನೀಡಿದರು.
ಆಯುಷ್ ಸೇವೆಗೆ ಮತ್ತಷ್ಟು ಉತ್ತೇಜನ:
ಭವಿಷ್ಯದಲ್ಲಿ ನಿರ್ಮಾಣವಾಗುವ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲೋಪತಿ ಚಿಕಿತ್ಸೆಯೊಂದಿಗೆ ಆಯುಷ್ ವಿಭಾಗವೂ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ರೂಪಿಸಲಾಗುವುದು. ಉಳ್ಳಾಲ ಆಸ್ಪತ್ರೆಯ ಮಾದರಿಯನ್ನು ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು. ರೋಗಿಗಳಿಗೆ ತಮಗೆ ಇಷ್ಟವಾದ ಚಿಕಿತ್ಸಾ ಪದ್ಧತಿ ಆಯ್ಕೆ ಮಾಡುವ ಅವಕಾಶವನ್ನು ಸರ್ಕಾರ ಖಚಿತಪಡಿಸಲಿದೆ ಎಂದರು.

ಕುದಿಸಿದ ನೀರು ಕಡ್ಡಾಯ – ಅಜಿನೋಮೋಟೊ ವಿರುದ್ಧ ಕ್ರಮ:
ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಒತ್ತಿ ಹೇಳಿದ ಸಚಿವರು, ಸಕ್ಕರೆ ಮಿಶ್ರಿತ ತಂಪು ಪಾನೀಯಗಳ ಬದಲು ಕುದಿಸಿದ ನೀರು ಕುಡಿಯುವ ಅಭ್ಯಾಸ ಬೆಳೆಸಬೇಕು ಎಂದು ಕರೆ ನೀಡಿದರು. ಸರ್ಕಾರಿ ಆಸ್ಪತ್ರೆಗಳು, ಹೋಟೆಲ್‌ಗಳು ಹಾಗೂ ಉಪಹಾರ ಗೃಹಗಳಲ್ಲಿ ಕುದಿಸಿದ ಕುಡಿಯುವ ನೀರು ಕಡ್ಡಾಯವಾಗಿ ನೀಡುವಂತೆ ಶೀಘ್ರದಲ್ಲೇ ಸರ್ಕಾರ ಆದೇಶ ಹೊರಡಿಸಲಿದೆ ಎಂದು ತಿಳಿಸಿದರು. ಇದೇ ವೇಳೆ ಆಹಾರದಲ್ಲಿ ಅಪಾಯಕಾರಿ ಕೃತಕ ಬಣ್ಣಗಳು ಹಾಗೂ ಅಜಿನೋಮೋಟೊ (MSG) ಬಳಸುವವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸಿರಿಧಾನ್ಯಗಳಿಗೆ ಜಾಗತಿಕ ಮಾರುಕಟ್ಟೆ:
ಇತ್ತೀಚೆಗೆ ಅಮೆರಿಕದ ಚಿಕಾಗೋದಲ್ಲಿ ನಡೆದ ಅಂತರರಾಷ್ಟ್ರೀಯ ನಾಯಕತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ ಖಾದರ್, ಭಾರತೀಯ ಸಿರಿಧಾನ್ಯಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆ ಹಾಗೂ ವಾಷಿಂಗ್ಟನ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಿಲೆಟ್ ಸಮಾವೇಶದ ಕುರಿತು ಭಾರತದ ಕಾನ್ಸುಲ್ ಜನರಲ್ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಹೇಳಿದರು.
ರಾಹುಲ್ ಗಾಂಧಿ ವಿರುದ್ಧದ ಹೇಳಿಕೆಗೆ ಖಾದರ್ ಆಕ್ರೋಶ:
ಸುದ್ದಿಗೋಷ್ಠಿಯಲ್ಲಿ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಯು.ಟಿ. ಖಾದರ್, ಬಿಜೆಪಿ ನಾಯಕರೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. “ಆ ವ್ಯಕ್ತಿ ರಾಜಕೀಯವಾಗಿ ರಾಹುಲ್ ಗಾಂಧಿಯ ಕಾಲಿನ ಕಿರುಬೆರಳಿಗೂ ಸಮನಲ್ಲ. ಇಂತಹ ಹೇಳಿಕೆಗಳು ಕರಾವಳಿಯ ಸಂಸ್ಕೃತಿ, ಘನತೆ ಮತ್ತು ರಾಜಕೀಯ ಪರಂಪರೆಗೆ ಕಪ್ಪು ಚುಕ್ಕೆಯಾಗಿದೆ,” ಎಂದು ವಾಗ್ದಾಳಿ ನಡೆಸಿದರು.

ದಕ್ಷಿಣ ಕನ್ನಡದ ರಾಜಕೀಯ ಸಂಸ್ಕೃತಿ ಸದಾ ಸಭ್ಯತೆ ಮತ್ತು ಪರಸ್ಪರ ಗೌರವವನ್ನು ಉಳಿಸಿಕೊಂಡು ಬಂದಿದೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ನಿಂದನೆ ಅಥವಾ ಪ್ರಚೋದನಕಾರಿ ಭಾಷೆ ಬಳಸುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದು ಹೇಳಿದರು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶದ ಏಕತೆ ಹಾಗೂ ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ಕೊಡುಗೆಯನ್ನು ಯಾರೂ ಅಳಿಸಿಹಾಕಲು ಸಾಧ್ಯವಿಲ್ಲ ಎಂದ ಖಾದರ್, ರಾಜಕೀಯ ಎದುರಾಳಿಗಳನ್ನು “ಧ್ವಂಸ ಮಾಡಬೇಕು” ಎನ್ನುವ ಮನೋಭಾವ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು, ಇಂತಹ ತೀವ್ರವಾದಿ ಮನಸ್ಥಿತಿಗೆ ಸಮಾಜದಲ್ಲಿ ಸ್ಥಾನವಿಲ್ಲ ಎಂದು ಕಿಡಿಕಾರಿದರು. ಸಾರ್ವಜನಿಕ ಜೀವನದಲ್ಲಿ ಎಲ್ಲ ಜನಪ್ರತಿನಿಧಿಗಳೂ ಭಾಷೆಯ ಸಂಯಮ, ಸಂಸ್ಕೃತಿ ಹಾಗೂ ಕರಾವಳಿಯ ಗೌರವವನ್ನು ಕಾಪಾಡಬೇಕು ಎಂದು ಅವರು ಕರೆ ನೀಡಿದರು.



