August 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜಿಲ್ಲಾ ಕಾಂಗ್ರೆಸ್ ಸಾರಥ್ಯಕ್ಕೆ ಪಿಯುಸ್ ಎಲ್. ರೊಡ್ರಿಗಸ್ ಹೆಸರು ಮುಂಚೂಣಿಯಲ್ಲಿ

ಸರಳ ಕಾರ್ಯಕರ್ತರಿಂದ ಜನನಾಯಕನಾಗಿ ಬೆಳೆದ ಪಯಣ

ಸುಮಾರು 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆ, ಜನಸೇವೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಬಂಟ್ವಾಳದ ಪಿಯುಸ್ ಲೆವಿನ್ ರೊಡ್ರಿಗಸ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ, ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ದೂರದೃಷ್ಟಿಯ ನಾಯಕತ್ವ ಹೊಂದಿರುವ ನಾಯಕರಾಗಿದ್ದಾರೆ ಎಂಬ ವಿಶ್ವಾಸವನ್ನು ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ವ್ಯಕ್ತಪಡಿಸಿದ್ದಾರೆ.

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಆಗ್ರಾರ್ ಚರ್ಚ್‌ನ ಡೋನ್ ಬೋಸ್ಕೊ ಯುವಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅವರ ನಾಯಕತ್ವ, ಸಂಘಟನಾ ಸಾಮರ್ಥ್ಯ ಹಾಗೂ ಜನಸೇವೆಯ ಮನೋಭಾವವನ್ನು ಗುರುತಿಸಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅಂದಿನಿಂದ ಇಂದಿನವರೆಗೆ ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಜನಪರ ನಾಯಕರಾಗಿ ಹಾಗೂ ಸಮಾಜಸೇವಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಾಮಾನ್ಯ ಕಾರ್ಯಕರ್ತರಾಗಿ ಆರಂಭವಾದ ಅವರ ರಾಜಕೀಯ ಪಯಣ ಇಂದು ರಾಜ್ಯಮಟ್ಟದ ನಾಯಕತ್ವದವರೆಗೆ ಬೆಳೆದಿದೆ.

ಸಾಮಾನ್ಯ ಎಲೆಕ್ಟ್ರಿಷಿಯನ್ ವೃತ್ತಿಯನ್ನು ಪ್ರಾರಂಭಿಸಿದ ಅವರು ತಮ್ಮ ಪರಿಶ್ರಮ, ಪ್ರಾಮಾಣಿಕತೆ ಹಾಗೂ ದೃಢಸಂಕಲ್ಪದಿಂದ ಲೆವಿನ್ ಎಲೆಕ್ಟ್ರಿಕಲ್ಸ್, ಲೆವಿನ್ ಎಂಜಿನಿಯರಿಂಗ್ಸ್, ಲೆವಿನ್ ಫರ್ನಿಚರ್ಸ್ ಹಾಗೂ ಲೆವಿನ್ ಬೋರ್‌ವೆಲ್ಸ್ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಸುಮಾರು 550ಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿ ನೂರಾರು ಕುಟುಂಬಗಳ ಬದುಕಿಗೆ ಆಸರೆಯಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿಯೂ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿರುವ ಅವರು, ಅನೇಕ ಯುವಕರಿಗೆ ಉದ್ಯೋಗ, ಸ್ವಉದ್ಯೋಗ ಹಾಗೂ ಸಮಾಜಸೇವೆಯತ್ತ ಪ್ರೇರಣೆಯಾಗಿದ್ದಾರೆ.

ಸ್ಥಳೀಯ ಪಂಚಾಯತ್, ಪುರಸಭೆ, ಬಂಟ್ವಾಳ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಹಗಲು–ರಾತ್ರಿ ಶ್ರಮಿಸಿ ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಪ್ರಸ್ತುತ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಸದಸ್ಯರಾಗಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರು, ಬಂಟ್ವಾಳ ಮೂಡಾದ ಅಧ್ಯಕ್ಷರು ಹಾಗೂ ಬಂಟ್ವಾಳ ಕಂಬಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಳ್ಳಿಯ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ದೆಹಲಿಯ ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ನಾಯಕರವರೆಗೆ ಉತ್ತಮ ಒಡನಾಟ ಹಾಗೂ ವಿಶ್ವಾಸಾರ್ಹ ಸಂಬಂಧ ಬೆಳೆಸಿಕೊಂಡಿರುವ ಅವರು ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಬಲವರ್ಧನೆಗೆ ನಿರಂತರ ಶ್ರಮಿಸುತ್ತಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಜನತಾ ದಳದ ಅಭ್ಯರ್ಥಿ ಜುಡಿತ್ ಮಸ್ಕರೇನ್ಹಸ್ ಅವರು ಕಾರ್ಪೊರೇಟರ್ ಸ್ಥಾನಕ್ಕೆ ಸತತವಾಗಿ ಗೆಲುವು ಸಾಧಿಸುತ್ತಿದ್ದ ಕ್ಷೇತ್ರದಲ್ಲಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನವೀನ್ ಡಿಸೋಜ ಅವರ ಗೆಲುವಿಗಾಗಿ ರಮಾನಾಥ್ ರೈ ಅವರು ಪಿಯುಸ್ ರೊಡ್ರಿಗಸ್ ಅವರಿಗೆ ಜವಾಬ್ದಾರಿಯನ್ನು ನೀಡಿದ್ದರು. ಪಿಯುಸ್ ರೊಡ್ರಿಗಸ್ ಅವರು ವಿಶೇಷ ಕಾರ್ಯತಂತ್ರ ರೂಪಿಸಿ, ಕಾರ್ಯಕರ್ತರನ್ನು ಸಂಘಟಿಸಿ ಚುನಾವಣಾ ಪ್ರಚಾರಕ್ಕೆ ಹೊಸ ಚೈತನ್ಯ ತುಂಬಿದ್ದರು. ಅವರ ಸಂಘಟನಾ ಸಾಮರ್ಥ್ಯ, ಸೂಕ್ಷ್ಮ ಚುನಾವಣಾ ನಿರ್ವಹಣೆ ಹಾಗೂ ನಿರಂತರ ಶ್ರಮದ ಫಲವಾಗಿ ಕಾಂಗ್ರೆಸ್ ಅಭ್ಯರ್ಥಿ ನವೀನ್ ಡಿಸೋಜ ಅವರು ಆ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಾರ್ಪೊರೇಟರ್ ಆಗಿ ವಿಜಯಶಾಲಿಯಾಗಲು ಸಾಧ್ಯವಾಯಿತು. ಈ ಐತಿಹಾಸಿಕ ಗೆಲುವಿನಲ್ಲಿ ಪಿಯುಸ್ ರೊಡ್ರಿಗಸ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪಕ್ಷದ ಕಾರ್ಯಕರ್ತರು ಅದನ್ನು ಇಂದಿಗೂ ಸ್ಮರಿಸುತ್ತಾರೆ.

ಇದರೊಂದಿಗೆ, ಮಂಗಳೂರು ಧರ್ಮಕ್ಷೇತ್ರದ ಆಗ್ರಾರ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಸತತ ಎರಡು ಅವಧಿಗಳ ಕಾಲ ಅವರು ಸೇವೆ ಸಲ್ಲಿಸಿದ್ದು, ಅವರ ಆಡಳಿತಾವಧಿಯಲ್ಲಿ ಬೃಹತ್ ನೂತನ ಚರ್ಚ್ ಸಭಾಂಗಣ ನಿರ್ಮಾಣಗೊಂಡಿರುವುದು ಅವರ ದೂರದೃಷ್ಟಿ, ಸಂಘಟನಾ ಸಾಮರ್ಥ್ಯ ಹಾಗೂ ಅಭಿವೃದ್ಧಿ ಚಿಂತನೆಗೆ ಸಾಕ್ಷಿಯಾಗಿದೆ. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಜನಪರ ಹೋರಾಟಗಳು, ಪಾದಯಾತ್ರೆಗಳು, ಪ್ರತಿಭಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾವಿರಾರು ಕಾರ್ಯಕರ್ತರು ಮತ್ತು ಯುವಕರನ್ನು ಸಂಘಟಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಪಕ್ಷದ ತತ್ವ–ಸಿದ್ಧಾಂತಗಳನ್ನು ತಳಮಟ್ಟಕ್ಕೆ ತಲುಪಿಸುವ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.

ಬಂಟ್ವಾಳ ಕಂಬಳದ ಅಧ್ಯಕ್ಷರಾಗಿ ಕಂಬಳ ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರುವ ಅವರು, ತಮ್ಮ ಆಹ್ವಾನದ ಮೇರೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಟ್ವಾಳ ಕಂಬಳಕ್ಕೆ ಆಗಮಿಸಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭವು ಜಿಲ್ಲೆಯ ಜನತೆ, ಕಂಬಳಾಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಮರಣೀಯ ಕ್ಷಣವಾಗಿ ಉಳಿದಿದೆ.

ಇತ್ತೀಚೆಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ SIR ಫಾರ್ಮ್ ಅಭಿಯಾನ ಸೇರಿದಂತೆ ಸರ್ಕಾರದ ಜನಪರ ಯೋಜನೆಗಳನ್ನು ಗ್ರಾಮ–ಗ್ರಾಮ ಹಾಗೂ ಮನೆ–ಮನೆಗೆ ತಲುಪಿಸುವಲ್ಲಿ ಅವರು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರು, ಯುವಕರ ತಂಡಗಳು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಾವಿರಾರು ಜನರಿಗೆ ನೆರವಾಗುವ ಮೂಲಕ ಜನಸೇವೆಗೆ ಹೊಸ ಆಯಾಮ ನೀಡಿದ್ದಾರೆ.

ಸಮಾಜಸೇವೆಯನ್ನು ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡಿರುವ ಪಿಯುಸ್ ರೊಡ್ರಿಗಸ್ ಅವರು, ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು ಹಾಗೂ ಸಹಾಯಕ್ಕಾಗಿ ತಮ್ಮನ್ನು ಸಂಪರ್ಕಿಸುವವರನ್ನು ಯಾವತ್ತೂ ಬರಿಗೈಯಲ್ಲಿ ಹಿಂದಿರುಗಿಸದೆ, ತಮ್ಮ ಉದಾರ ಮನಸ್ಸಿನಿಂದ ಸಾಧ್ಯವಾದ ನೆರವು ನೀಡುತ್ತಾ ಬಂದಿದ್ದಾರೆ. ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆತು ಜನರ ಕಷ್ಟ–ಸುಖಗಳಿಗೆ ಸ್ಪಂದಿಸುವ ಅವರ ಸೇವಾ ಮನೋಭಾವದಿಂದ ಅವರು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿದ್ದಾರೆ.

ಸರಳತೆ, ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ, ಸಂಘಟನಾ ಸಾಮರ್ಥ್ಯ, ದೂರದೃಷ್ಟಿಯ ನಾಯಕತ್ವ ಹಾಗೂ ಜನಪರ ಕಾಳಜಿಯಿಂದ ಜನರ ಅಪಾರ ಪ್ರೀತಿ ಮತ್ತು ವಿಶ್ವಾಸ ಗಳಿಸಿರುವ ಪಿಯುಸ್ ಎಲ್. ರೊಡ್ರಿಗಸ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಅತ್ಯಂತ ಸೂಕ್ತ ಅಭ್ಯರ್ಥಿಯಾಗಿದ್ದಾರೆ ಎಂಬುದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಹಾಗೂ ನಾಗರಿಕರ ಆಶಯವಾಗಿದೆ.

“ಜನಸೇವೆಯೇ ನನ್ನ ಧರ್ಮ – ಜನರ ವಿಶ್ವಾಸವೇ ನನ್ನ ಶಕ್ತಿ” ಎಂಬ ಧ್ಯೇಯವಾಕ್ಯದೊಂದಿಗೆ ಅವರು ಜನಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ಮುಂದುವರಿಸುತ್ತಿರುವ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಹಾಗೂ ಶುಭ ಹಾರೈಕೆಗಳು ವ್ಯಕ್ತವಾಗುತ್ತಿವೆ.

 

You may also like

News

ಕುಂದಾಪುರ ಚರ್ಚ್ ಬಳಿಯ ಶೂಟೌಟ್ ಪ್ರಕರಣ – ಭಟ್ಕಳದಲ್ಲಿ ಆರೋಪಿ ಡೆರಿಕ್ ಬಂಧನ; 1.5 ಲಕ್ಷ ರೂಪಾಯಿಗೆ ನಡೆದಿತ್ತು ಹತ್ಯೆ!

ಕುಂದಾಪುರ ತಾಲೂಕಿನ ಚರ್ಚ್ ರಸ್ತೆಯಲ್ಲಿ ನಡೆದ ಭೀಕರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಉಡುಪಿ ಜಿಲ್ಲಾ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿ ಬಂಧಿಸಿದೆ. ಬಂಧಿತ
News

Saint Agnes PU College Holds Inspiring PTA Annual General Meeting

Saint Agnes Pre-University College conducted its Parent-Teacher Association (PTA) Annual General Meeting on Friday, July 31, at the college auditorium,

You cannot copy content of this page