August 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತ್ರಿಷಾ ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ

ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ 28ನೇ ಸಂಸ್ಥಾಪನಾ ದಿನಾಚರಣೆ ಬಲ್ಮಠದ ಡಾನ್ ಬಾಸ್ಕೊ ಸಭಾಂಗಣದಲ್ಲಿ ಸಂಭ್ರಮ ಹಾಗೂ ವೈಭವದಿಂದ ನಡೆಯಿತು. ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸ್ವಾಗತ ನೃತ್ಯ ಹಾಗೂ ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ತ್ರಿಷಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ ಕಾಮತ್ ಅವರು ಸ್ವಾಗತ ಭಾಷಣ ಮಾಡಿ, ಸಂಸ್ಥೆಯ 28 ವರ್ಷಗಳ ಶೈಕ್ಷಣಿಕ ಪಯಣ, ಸಾಧನೆ ಹಾಗೂ ಸೇವೆಯನ್ನು ಸ್ಮರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಗೌರವ ಅತಿಥಿಯಾಗಿ ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ ಕಾಯರ್ಕಟ್ಟೆ ಭಾಗವಹಿಸಿ ಆಶಯ ನುಡಿಗಳನ್ನಾಡಿದರು. ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಸಂಸ್ಥಾಪನಾ ದಿನಾಚರಣೆಯ ಪ್ರಮುಖ ಆಕರ್ಷಣೆಯಾಗಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಣ, ಕೈಗಾರಿಕೆ, ಯಕ್ಷಗಾನ, ವೈದ್ಯಕೀಯ, ಕ್ರೀಡೆ, ಸಮಾಜಸೇವೆ, ರೆಡ್‌ಕ್ರಾಸ್ ಸೇವೆ, ಸೇನೆ, ಚಿತ್ರರಂಗ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಎಸ್‌ಡಿಎಂ ಕಾಲೇಜು–ಎಂಬಿಎ, ಮಂಗಳೂರಿನ ಮಾಜಿ ನಿರ್ದೇಶಕ ಡಾ. ದೇವರಾಜ್ ಕೆ., ಕೈಗಾರಿಕಾ ಕ್ಷೇತ್ರದಲ್ಲಿ ಕೆಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೈತ್ರೇಯ ಎ., ಯಕ್ಷಗಾನ ಕ್ಷೇತ್ರದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮಧುಸೂದನ್ ಇ., ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್ ಶ್ರೀಮಾ ಪ್ರಿಯದರ್ಶಿನಿ, ಸಮಾಜ ಸೇವಾ ಕ್ಷೇತ್ರದಲ್ಲಿ ಮಾರುತಿ ಜನಸೇವಾ ಸಂಘ, ಉಳ್ಳಾಲದ ಅಧ್ಯಕ್ಷ ಅನಿಲ್ ಚರಣ್, ರೆಡ್‌ಕ್ರಾಸ್ ಸೇವೆಗಾಗಿ ಸಿಎ ಶಾಂತಾರಾಮ ಶೆಟ್ಟಿ, ಸೇನಾ ಕ್ಷೇತ್ರದಲ್ಲಿ ಭಾರತೀಯ ನೌಕಾಪಡೆಯ ಮಾಜಿ ಮುಖ್ಯ ತಾಂತ್ರಿಕ ಅಧಿಕಾರಿ ವಿಕ್ರಮದತ್ತ, ಚಿತ್ರರಂಗ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ರೂಪಾ ವರ್ಕಾಡಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ಕುಡ್ಲದ ಸಿಒಒ ಕದ್ರಿ ನವನೀತ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಗೌರವ ಅತಿಥಿ ಡಾ. ನಾರಾಯಣ ಕಾಯರ್ಕಟ್ಟೆ, ಸಿದ್ಧಾಂತ್ ಫೌಂಡೇಶನ್‌ನ ಟ್ರಸ್ಟಿ ರಾಮ್ ಪ್ರಭು, ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹಾಗೂ ನಮಿತಾ ಜಿ. ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳೇ ಭವಿಷ್ಯದ ಸಾಧಕರು: ಗೋಪಾಲಕೃಷ್ಣ ಭಟ್

ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಮಾತನಾಡಿ, “ಪ್ರಪಂಚದಲ್ಲಿರುವವರಲ್ಲಿ ಕೆಲವರು ಮಾತ್ರ ಪ್ರಪಂಚದ ನಕ್ಷೆಯನ್ನೇ ಬದಲಾಯಿಸುತ್ತಾರೆ. ಒಬ್ಬ ಗೋಪಾಲ್ ಒಂದು ಸಂಸ್ಥೆಯನ್ನು ನಿರ್ಮಿಸಿದ್ದರೆ, ಇಲ್ಲಿ ನೆರೆದಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದಲ್ಲಿ ಇಂತಹ ಸಾವಿರಾರು ಸಂಸ್ಥೆಗಳನ್ನು ನಿರ್ಮಿಸಬಹುದು” ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಅವರು, ತಾವು ಸೇವಾ ಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ತಮ್ಮ ತಂದೆ-ತಾಯಿ ಕೃಷಿಕರಾಗಿದ್ದರು ಎಂದು ನೆನಪಿಸಿಕೊಂಡರು. ದೇಶದ ಬಗ್ಗೆ ತಮಗಿರುವ ಕಾಳಜಿ ಹಾಗೂ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಆಶಯವನ್ನು ಅವರು ಹಂಚಿಕೊಂಡರು. ಈ ಸಂದರ್ಭದಲ್ಲಿ ಅವರಿಗೆ ಶಿಕ್ಷಣ ನೀಡಿದ ಮುಕುಂದ್ ಮಾಸ್ಟರ್ ಉಪಸ್ಥಿತರಿದ್ದರು. ಸಂಸ್ಥೆಯ ಬೆಳವಣಿಗೆಯಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ನೀಡಿದ ಸಹಕಾರವನ್ನು ಸ್ಮರಿಸಿದ ಅವರು, ಮುಂದಿನ ದಿನಗಳಲ್ಲಿ ತ್ರಿಷಾ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯುವ ವಿಶ್ವಾಸ ವ್ಯಕ್ತಪಡಿಸಿದರು.

ತ್ರಿಷಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಪ್ರಭಾ ಎಂ. ವಂದಿಸಿದರು. ತ್ರಿಷಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಯಶಸ್ವಿನಿ ಯಶ್‌ಪಾಲ್ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಮಾರೋಪದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆಗೆ ಮತ್ತಷ್ಟು ಮೆರುಗು ನೀಡಿದವು.

You may also like

News

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ‘ನರ್ಚರ್ 2026’ – ಮಕ್ಕಳ ರಾಷ್ಟ್ರೀಯ ವೈದ್ಯಕೀಯ ವಿಚಾರ ಸಂಕಿರಣ

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ವತಿಯಿಂದ ನರ್ಚರ್ 2026 – ಮಕ್ಕಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು
News

ಮಂಗಳೂರಿನಲ್ಲಿ ಪರ್ಯಾಯ ದಿನ ನೀರು ಪೂರೈಕೆ – ಆಗಸ್ಟ್‌ 31ರವರೆಗೆ ತಾತ್ಕಾಲಿಕ ವ್ಯವಸ್ಥೆ

ತುಂಬೆ ಜಾಕ್‌ವೆಲ್‌ನ ಇನ್‌ಟೇಕ್‌ ಭಾಗದಲ್ಲಿ ಮಳೆನೀರಿನೊಂದಿಗೆ ಮರದ ದಿಮ್ಮಿಗಳು, ಕೊಂಬೆಗಳು, ಪ್ಲಾಸ್ಟಿಕ್‌ ತ್ಯಾಜ್ಯ, ಬಟ್ಟೆ, ಚೀಲಗಳು, ಹೂಳು ಸೇರಿದಂತೆ ವಿವಿಧ ತ್ಯಾಜ್ಯಗಳು ಸಂಗ್ರಹಗೊಂಡ ಪರಿಣಾಮ ನೀರು ಪಂಪಿಂಗ್‌

You cannot copy content of this page