ಸಂಶೋಧನೆ, ಆವಿಷ್ಕಾರಗಳಿಂದ ದೇಶದ ಪ್ರಗತಿ ಸಾಧ್ಯ – ಡಾ. ಅರುಣಕುಮಾರ್ ಶೆಟ್ಟಿ
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ನಿರಂತರವಾಗಿ ಮುನ್ನಡೆಯುತ್ತಿದ್ದು, ಸಂಶೋಧನೆಗಳ ಮೂಲಕ ವಿಜ್ಞಾನಿಗಳು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಯುವಜನತೆ ಆವಿಷ್ಕಾರ, ಸಹಯೋಗ ಮತ್ತು ನಾಯಕತ್ವದ ಗುಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರಾಷ್ಟ್ರದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣಕುಮಾರ್ ಶೆಟ್ಟಿ ಎನ್. ಹೇಳಿದರು.


ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಹ್ಯಾಕಾಶ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದ ಕುರಿತು ಆಸಕ್ತಿ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಮೂರು ದಿನಗಳ ಕಾಲ ವಿವಿಧ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ರೆಡ್ಕ್ರಾಸ್ ಸೊಸೈಟಿಯ ನಿರ್ದೇಶಕ ಪಿ.ಬಿ. ಹರೀಶ್ ರೈ ಮಾತನಾಡಿ, ಚಂದ್ರಯಾನ-3ರ ಐತಿಹಾಸಿಕ ಸಾಧನೆಯ ಸ್ಮರಣಾರ್ಥ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಅಶೋಕ್ ಕೆ.ಆರ್. ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಗಮನಿಸುವುದರ ಜೊತೆಗೆ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಹಾಯಕಿ ಚಂಚಲಾಕ್ಷಿ ಸ್ವಾಗತಿಸಿದರು. ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಭಟ್ ವಂದಿಸಿದರು. ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮವನ್ನು ರೂಪಿಸಿದರು.

ಬಳಿಕ ನಡೆದ ಕಾರ್ಯಾಗಾರದಲ್ಲಿ ಅಮೆಚೂರ್ ರೇಡಿಯೊ ಕ್ಲಬ್ ಅಧ್ಯಕ್ಷ ರೋಹಿತ್ ಎಸ್. ರಾವ್ ಅವರು ಹ್ಯಾಮ್ ರೇಡಿಯೊ ಕುರಿತು ಹಾಗೂ ಡಾ. ಪ್ರಹಾಸ್ ಅಮೀನ್ ಅವರು ಆಸ್ಟ್ರೋ ಫೋಟೋಗ್ರಫಿ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.



