ಕ್ರೈಸ್ತ ಸಮುದಾಯದ ಕಲ್ಯಾಣಕ್ಕೆ ₹250 ಕೋಟಿ ಬಜೆಟ್ ಅನುದಾನ ಸಂಪೂರ್ಣ ಬಿಡುಗಡೆಗೆ ಆಗ್ರಹ
ಮುಖ್ಯಮಂತ್ರಿ ಅವರಿಗೆ MLC ಐವನ್ ಡಿಸೋಜ ಮುಖಾಂತರ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ

ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕ್ರೈಸ್ತ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಘೋಷಿಸಿರುವ ₹250 ಕೋಟಿ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕೆಂದು ‘ಕರ್ನಾಟಕ ಕ್ರೈಸ್ತ ಸಂಘಟನೆ’ ಯ ಸಂಸ್ಥಾಪಕ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೋ ಬೆಂಗಳೂರು ಅವರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಸೆಪ್ಟೆಂಬರ್ 2ರಂದು ಬುಧವಾರ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರ ಮೂಲಕ ಸಲ್ಲಿಸಲಾದ ಈ ಅಭಿವೃದ್ಧಿ ಮನವಿಯಲ್ಲಿ, ಬಜೆಟ್ನಲ್ಲಿ ₹250 ಕೋಟಿ ಘೋಷಿಸಲಾಗಿದ್ದರೂ, ಪ್ರಸ್ತುತ ಕೇವಲ ₹85 ಕೋಟಿ ಮಾತ್ರ ಬಿಡುಗಡೆಯಾಗಿದೆ. ಈ ಮೊತ್ತವು ಪ್ರಸ್ತುತ ಇರುವ ಚರ್ಚ್ಗಳ ನವೀಕರಣ, ಸಮುದಾಯ ಭವನ ನಿರ್ಮಾಣ ಹಾಗೂ ಮೂಲಸೌಕರ್ಯ ಕಾಮಗಾರಿಗಳಿಗೆ ಮಾತ್ರ ಸಾಕಾಗುತ್ತದೆ. ಆದರೆ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಜನರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಯುವಜನರ ಸಮಗ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಈ ಹಣ ತೀರಾ ಅಪರ್ಯಾಪ್ತವಾಗಿದೆ ಎಂದು ತಿಳಿಸಿದ್ದಾರೆ.


ಅಲ್ಲದೆ, ಈ ಅನುದಾನವು ಕೇವಲ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗದೆ, ಕೆಳಗಿನ ಪ್ರಮುಖ ಕ್ಷೇತ್ರಗಳಿಗೆ ಪ್ರತ್ಯೇಕ ಶೀರ್ಷಿಕೆಯಡಿಯಲ್ಲಿ ಹಂಚಿಕೆಯಾಗಬೇಕು ಎಂದು ಆಗ್ರಹಿಸಲಾಗಿದೆ:
* ಆರ್ಥಿಕ ನೆರವು: ದಿನಗೂಲಿ ಹಾಗೂ ಕೂಲಿ ಕಾರ್ಮಿಕರು, ಸಣ್ಣ ಉದ್ಯಮಿಗಳಿಗೆ ಬಡ್ಡಿ ರಹಿತ/ಕಡಿಮೆ ಬಡ್ಡಿದರದ ಸಾಲ ಮತ್ತು ಆರ್ಥಿಕ ನೆರವು.
* ಶಿಕ್ಷಣ ಮತ್ತು ಸ್ಕಾಲರ್ಶಿಪ್: ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್ಗಳು ಹಾಗೂ ಐಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ವಿಶೇಷ ಪ್ರೋತ್ಸಾಹ.
* ವಿದೇಶಿ ವ್ಯಾಸಂಗ: ಅರ್ಹ ಕ್ರೈಸ್ತ ವಿದ್ಯಾರ್ಥಿಗಳಿಗೆ “ವಿದೇಶಿ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆ” ಜಾರಿ.
* ಮಹಿಳಾ ಮತ್ತು ಯುವಜನ ಸಬಲೀಕರಣ: ಸ್ಕಿಲ್ ಡೆವಲಪ್ಮೆಂಟ್, ಉದ್ಯೋಗ ಸೃಷ್ಟಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳು.

ಬಜೆಟ್ನಲ್ಲಿ ಘೋಷಿಸಿದ ಹಣವು ಕೇವಲ ಕಾಗದದ ಮೇಲಿನ ಘೋಷಣೆಯಾಗಿ ಉಳಿಯದೆ, ಬಾಕಿ ಇರುವ ಸಂಪೂರ್ಣ ಮೊತ್ತವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕ್ರೈಸ್ತ ಅಭಿವೃದ್ಧಿ ನಿಗಮದ ಮೂಲಕ ಶೀಘ್ರವಾಗಿ ಮತ್ತು ಪಾರದರ್ಶಕವಾಗಿ ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.



