ಉದ್ಯಮ ಕ್ಷೇತ್ರದ ಸಾಧನೆಗೆ ಪ್ರತಿಷ್ಠಿತ ಗೌರವ – ಪಾದೆ ಅಜಿತ್ ರೈ ಅವರಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ’ ಪ್ರಶಸ್ತಿ
ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನದ 30ನೇ ವಾರ್ಷಿಕ ಮಹಾಸಭೆ ಪ್ರತಿಷ್ಠಾನದ ಅಧ್ಯಕ್ಷ ಕುಶಲ್ ಎಸ್. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 12ರಂದು ಮಧ್ಯಾಹ್ನ 12 ಗಂಟೆಗೆ ನಗರದ ಎ.ಜೆ. ಗ್ರ್ಯಾಂಡ್‌ನ ಸಭಾಂಗಣದಲ್ಲಿ ನಡೆಯಲಿದೆ. ಮಹಾಸಭೆಯ ಬಳಿಕ ನಡೆಯಲಿರುವ ಸಮಾರಂಭದಲ್ಲಿ ಯುನೈಟೆಡ್ ರಬ್ಬರ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಹಾಗೂ ಉದ್ಯಮಿ ಪಾದೆ ಅಜಿತ್ ರೈ ಅವರಿಗೆ ವಿಶ್ವ ಬಂಟ ಪ್ರತಿಷ್ಠಾನದ ಪ್ರತಿಷ್ಠಿತ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.




ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಪ್ರತಿಷ್ಠಾನದ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಮೂಲಕ ಸನ್ಮಾನಿಸಲಾಗುವುದು. ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ ಡಾ. ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ 47ನೇ ರ‍್ಯಾಂಕ್ ಪಡೆದ ಆದಿತ್ಯ ಪೆರ್ಗಡೆ ಅವರಿಗೆ ದಿ. ಸಿಎ.ವೈ.ಆರ್. ಶೆಟ್ಟಿ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುನೀತ್ ಶೆಟ್ಟಿ ಅವರಿಗೆ ಸಿಎ ಗೋಪಾಲ್ ಬಿ. ಶೆಟ್ಟಿ ದತ್ತಿನಿಧಿ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದ ಸಾಧಕಿ ಸಾಧಮ್ಮ ಶೆಟ್ಟಿ ಅವರಿಗೆ ದಿ. ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭವು ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದರೊಂದಿಗೆ ಬಂಟ ಸಮುದಾಯದ ಪ್ರತಿಭೆ ಹಾಗೂ ಸಾಧನೆಗಳಿಗೆ ಪ್ರೋತ್ಸಾಹ ನೀಡುವ ಮಹತ್ವದ ವೇದಿಕೆಯಾಗಲಿದೆ ಎಂದು ವಿಶ್ವ ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಬಿ. ಸಚ್ಚಿದಾನಂದ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



