ರಮಾನಾಥ ರೈ ಅಪಘಾತದ ಪೋಸ್ಟ್‌ಗೆ ಅವಹೇಳನಕಾರಿ ಕಾಮೆಂಟ್ ಆರೋಪ – ಪ್ರಭಾಕರ ಹೆಗ್ಡೆ ವಿರುದ್ಧ ಪ್ರಕರಣ ದಾಖಲು
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಬೆದರಿಕೆಯ ರೀತಿಯ ಸಂದೇಶ ಪ್ರಕಟಿಸಿದ ಆರೋಪದಡಿ ಪ್ರಭಾಕರ ಹೆಗ್ಡೆ ಎಂಬವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಅವರು ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 130/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 351(2), 352ರಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಅಪಘಾತದ ಪೋಸ್ಟ್‌ಗೆ ಆಕ್ಷೇಪಾರ್ಹ ಕಾಮೆಂಟ್ ಆರೋಪ:
ಸೆಪ್ಟೆಂಬರ್ 20ರಂದು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಶ್ರೀರಾಮ ಮಂದಿರದ ಡಿವೈಡರ್ ಕ್ರಾಸ್ ಬಳಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ರಮಾನಾಥ ರೈ ಸೇರಿದಂತೆ ಅವರ ಆಪ್ತ ಸಹಾಯಕ, ಅಂಗರಕ್ಷಕ ಹಾಗೂ ಕಾರು ಚಾಲಕರಿಗೆ ಗಾಯಗಳಾಗಿದ್ದು, ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪಘಾತದ ದೃಶ್ಯವನ್ನು ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಪ್ರಭಾಕರ ಹೆಗ್ಡೆ ಅವರು ಅವಹೇಳನಕಾರಿ ಹಾಗೂ ಬೆದರಿಕೆಯ ರೀತಿಯ ಕಾಮೆಂಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಮೂಲಕ ನಿಂದನಾತ್ಮಕ ಭಾಷೆ ಬಳಸಿ ಬೆದರಿಕೆ ಹಾಕಿರುವ ಆರೋಪದಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಮಾನ್ಯ ನ್ಯಾಯಾಲಯದ ಡಿಸ್. ನಂ. 845/2026ಕ್ಕೆ ಸಂಬಂಧಿಸಿದಂತೆ ಎಂ.ಪಿ.ಸಿ. 2319ರ ಮೂಲಕ ಬಂದ ದೂರನ್ನು ಸ್ವೀಕರಿಸಿದ ಬಳಿಕ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.



