ಯುವ ಕವಿ–ಕಥೆಗಾರ ಗ್ಲ್ಯಾನಿಶ್ ಜ್ಯೂಡ್ ಮಾರ್ಟಿಸ್ ಅವರಿಗೆ 2026ರ ಕಿಟಾಳ್ ಯುವ ಪುರಸ್ಕಾರ
ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ನೀಡಲಾಗುವ 2026ನೇ ಸಾಲಿನ ಲಿಯೋ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರಕ್ಕೆ ಯುವ ಕವಿ, ಕಥೆಗಾರ ಹಾಗೂ ಸಂಶೋಧಕ ಗ್ಲ್ಯಾನಿಶ್ ಜ್ಯೂಡ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೊಂಕಣಿ ಸಾಹಿತಿ ಹಾಗೂ ವಿಮರ್ಶಕ ಎಚ್.ಎಂ. ಪೆರ್ನಾಲ್ ಸಂಪಾದಿಸಿ ಪ್ರಕಟಿಸುತ್ತಿರುವ ಕಿಟಾಳ್ ಅಂತರ್ಜಾಲ ಸಾಹಿತ್ಯ ಪತ್ರಿಕೆ 2012ರಿಂದ ಲಿಯೋ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರವನ್ನು ನೀಡುತ್ತಾ ಬಂದಿದೆ. ಅಬುಧಾಬಿಯ ಅನಿವಾಸಿ ಉದ್ಯಮಿ ಹಾಗೂ ಕೊಂಕಣಿ ಸಾಹಿತ್ಯದ ಪ್ರೋತ್ಸಾಹಕರಾದ ಲಿಯೋ ರೊಡ್ರಿಗಸ್ ಅವರ ಕುಟುಂಬ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಿದೆ.
ಪ್ರಶಸ್ತಿಯು ₹25,000 ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಈ ಹಿಂದೆ ವಿಲ್ಸನ್ ಕಟೀಲ್, ವಿಲ್ಮಾ ಬಂಟ್ವಾಳ್, ಸ್ಟ್ಯಾನಿ ಬೇಳಾ, ರೋಶು ಬಜ್ಪೆ, ಜೊ.ಸಿ. ಸಿದ್ದಕಟ್ಟೆ ಹಾಗೂ ಕಿರಣ್ ನಿರ್ಕಾಣ್ ಸೇರಿದಂತೆ ಹಲವರು ಕಿಟಾಳ್ ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಸಾಹಿತ್ಯದ ಜೊತೆಗೆ ವಿಜ್ಞಾನ ಕ್ಷೇತ್ರದಲ್ಲೂ ಸಾಧನೆ:
ಕಳೆದ ಒಂದು ದಶಕದಿಂದ ಕೊಂಕಣಿ ಭಾಷೆಯಲ್ಲಿ ನಿರಂತರವಾಗಿ ಬರೆಯುತ್ತಿರುವ ಗ್ಲ್ಯಾನಿಶ್ ಜ್ಯೂಡ್ ಮಾರ್ಟಿಸ್ ಅವರು ಯುವ ಲೇಖಕ ಹಾಗೂ ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ. 2024ರಲ್ಲಿ ಅವರ ಚೊಚ್ಚಲ ಕಥಾಸಂಕಲನ ‘ಹೆರಿಡಿಟಿ’ ಪ್ರಕಟಗೊಂಡಿದ್ದು, ಇದುವರೆಗೆ ಕೊಂಕಣಿಯಲ್ಲಿ ಸುಮಾರು 25 ಸಣ್ಣಕಥೆಗಳು, 60 ಕವನಗಳು ಹಾಗೂ 20 ಲೇಖನಗಳನ್ನು ರಚಿಸಿದ್ದಾರೆ.
2025ರಲ್ಲಿ ಅವರ ಗೀತ ಸಾಹಿತ್ಯಕ್ಕೆ ECW ಬೆಸ್ಟ್ ಮಲ್ಟಿಲಿಂಗ್ವಲ್ ಲಿರಿಸಿಸ್ಟ್ ಪ್ರಶಸ್ತಿ ಲಭಿಸಿದೆ. ಕೊಂಕಣಿಯ ಜೊತೆಗೆ ಇಂಗ್ಲಿಷ್, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿಯೂ ಅವರು ಬರೆಯುತ್ತಿದ್ದಾರೆ.

ಸಾಹಿತ್ಯದೊಂದಿಗೆ ವೈಜ್ಞಾನಿಕ ಸಂಶೋಧನೆಯಲ್ಲಿಯೂ ತೊಡಗಿಸಿಕೊಂಡಿರುವ ಅವರು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಡಾ. ಸಂತೋಷ್ ಎಲ್. ಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ಆರ್ಗ್ಯಾನಿಕ್ ಮತ್ತು ಮೆಡಿಸಿನಲ್ ಕೆಮಿಸ್ಟ್ರಿ ಕ್ಷೇತ್ರದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದಾರೆ. 2024ರಿಂದ ಈ ಕ್ಷೇತ್ರಕ್ಕೆ ಸಂಬಂಧಿಸಿದ 25ಕ್ಕೂ ಹೆಚ್ಚು ವೈಜ್ಞಾನಿಕ ಪ್ರಕಟಣೆಗಳನ್ನು ಅವರು ಹೊಂದಿದ್ದಾರೆ. ರಾಸಾಯನಿಕ ವಿಜ್ಞಾನ ಕ್ಷೇತ್ರದ ಕೊಡುಗೆಗಾಗಿ ಲಂಡನ್‌ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (AMRSC)ಯ ಅಸೋಸಿಯೇಟ್ ಸದಸ್ಯರಾಗಿಯೂ ಇತ್ತೀಚೆಗೆ ಸೇರ್ಪಡೆಯಾಗಿದ್ದಾರೆ.

ಮೂಡಬಿದ್ರೆಯ ಅಲಂಗಾರಿನ ಲವೀನಾ ಮತ್ತು ಗಿಲ್ಬರ್ಟ್ ಮಾರ್ಟಿಸ್ ದಂಪತಿಯ ಪುತ್ರರಾಗಿರುವ ಗ್ಲ್ಯಾನಿಶ್, ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ.
ಅಕ್ಟೋಬರ್ 3ರಂದು ಪ್ರಶಸ್ತಿ ಪ್ರದಾನ:
ಕಿಟಾಳ್ ಯುವ ಪುರಸ್ಕಾರ ಪ್ರದಾನ ಸಮಾರಂಭವು ಅಕ್ಟೋಬರ್ 3ರಂದು ಶನಿವಾರ ಸಂಜೆ 6.30ಕ್ಕೆ ಮಂಗಳೂರಿನ ಹಂಪನಕಟ್ಟೆಯ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿ ಪ್ರಾಯೋಜಕರಾದ ಲಿಯೋ ರೊಡ್ರಿಗಸ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.




