September 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತುಂಬೆಯಲ್ಲಿ ಅಕ್ರಮ ಮರಳುಗಾರಿಕೆ – ನಾಲ್ವರು ವಶಕ್ಕೆ, ₹25.24 ಲಕ್ಷ ಮೌಲ್ಯದ ವಾಹನ–ಸಾಮಗ್ರಿ ಜಪ್ತಿ

ಬಂಟ್ವಾಳ ಗ್ರಾಮಾಂತರ ಠಾಣೆ PSI ರನ್ನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ

ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಕೆಳಗಿನ ತುಂಬೆಯಲ್ಲಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ತೆಗೆದು ಲಾರಿಗಳಿಗೆ ತುಂಬಿಸುತ್ತಿದ್ದ ಸ್ಥಳದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಇಂದು ಸೆಪ್ಟೆಂಬರ್ 25ರಂದು ಶುಕ್ರವಾರ ಮುಂಜಾನೆ ದಾಳಿ ನಡೆಸಿ ಮೂರು ಟಿಪ್ಪರ್ ಲಾರಿ, ಒಂದು ಜೆಸಿಬಿ ಸೇರಿದಂತೆ ಸುಮಾರು ₹25.24 ಲಕ್ಷ ಮೌಲ್ಯದ ವಾಹನ ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಸ್ಥಳದಲ್ಲಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ರನ್ನಗೌಡ ಪಾಟೀಲ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೂರು ಟಿಪ್ಪರ್ ಲಾರಿ ಹಾಗೂ ಒಂದು ಜೆಸಿಬಿ ಮೂಲಕ ಅಕ್ರಮವಾಗಿ ಮರಳು ತುಂಬಿಸುತ್ತಿರುವುದು ಪತ್ತೆಯಾಗಿದೆ.

ದಾಳಿಯ ವೇಳೆ ಮರಳು ತುಂಬಿದ್ದ KA-06-D-8454, KA-19-AF-9094 ಹಾಗೂ KA-19-AB-1508 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಗಳು ಮತ್ತು KA-20-N-7175 ನೋಂದಣಿ ಸಂಖ್ಯೆಯ ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು ಎರಡು ಲೋಡ್ ಮರಳು ಹಾಗೂ ಮರಳು ತುಂಬಲು ಬಳಸುತ್ತಿದ್ದ ಇತರ ಸಾಮಗ್ರಿಗಳನ್ನೂ ಸ್ವಾಧೀನಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ ನದಿ ಕಿನಾರೆಯಿಂದ ಯಾವುದೇ ಅನುಮತಿ ಪಡೆಯದೆ ಮರಳನ್ನು ಸಂಗ್ರಹಿಸಿ ಲಾರಿಗಳಿಗೆ ತುಂಬಿಸಿ ಸಾಗಿಸುತ್ತಿರುವುದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ನಿಹಾನ್, ರಾಜೀಕ್, ಮೊಹಮ್ಮದ್ ಶಂಶೀರ್, ಮಹಮ್ಮದ್ ಅಶ್ರಫ್, ಸ್ಟೀವನ್ ಡಿಸೋಜ, ಕೃತ್ಯಕ್ಕೆ ಸಹಕರಿಸಿದ ರೈಟರ್ ಶಿವಪ್ರಸಾದ್ ಆಳ್ವ ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 129/2026ರಂತೆ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿರುದ್ಧ KMMC Rules-1994ರ ಕಲಂ 42, 43, 44, MMRD Actರ ಕಲಂ 4(1), 4(1A), 21(1), 21(1A) ಹಾಗೂ BNS-2023ರ ಕಲಂ 303(2)ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

News

Father Muller Celebrates World Pharmacist Day, Honouring the Dedicated Service of Pharmacists

Father Muller Medical College Hospital Celebrated World Pharmacist Day with enthusiasm and gratitude, recognising the dedicated services of pharmacists and
News

ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ

You cannot copy content of this page