October 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶ್ರೀನಿವಾಸ ವಿವಿಯಲ್ಲಿ ಭೀಕರ ರ‍್ಯಾಗಿಂಗ್ ಆರೋಪ: ಜೂನಿಯರ್‌ಗಳ ಅಪಹರಣ, ಹಲ್ಲೆ; 9 ಸೀನಿಯರ್ಸ್ ವಿರುದ್ಧ ಪ್ರಕರಣ — 5 ಮಂದಿ ಬಂಧನ

ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳ ಮೇಲೆ ನಡೆದಿರುವುದಾಗಿ ಆರೋಪಿಸಲಾದ ಭೀಕರ ರ‍್ಯಾಗಿಂಗ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಜೂನಿಯರ್ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಬಂದ ವೇಳೆ ಬಲವಂತವಾಗಿ ಬೈಕ್‌ನಲ್ಲಿ ಕರೆದೊಯ್ದು, ಮನೆಯೊಂದರಲ್ಲಿ ಕೂಡಿಹಾಕಿ ಬಟ್ಟೆ ಬಿಚ್ಚಿಸಿ ಬೆಲ್ಟ್, ಹ್ಯಾಂಗರ್ ಹಾಗೂ ಕಬ್ಬಿಣದ ಪಂಚ್‌ನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ 9 ಮಂದಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ತ್ರಿಶೂರ್ ನಿವಾಸಿಗಳಾದ ಪ್ರಥಮ ವರ್ಷದ ಬಿಬಿಎ (ಪೋರ್ಟ್ ಆ್ಯಂಡ್ ಶಿಪ್ಪಿಂಗ್ ಲಾಜಿಸ್ಟಿಕ್ಸ್) ವಿದ್ಯಾರ್ಥಿಗಳಾದ 19 ವರ್ಷ ಪ್ರಾಯದ ಅಮೀರ್ ಅಲಿ ಹಾಗೂ 19 ವರ್ಷ ಪ್ರಾಯದ ಮಹಮ್ಮದ್ ಅಲ್ಪಾಜ್ ಹಲ್ಲೆಗೊಳಗಾದ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.

ಕಾಲೇಜಿನಿಂದ ಹೊರಬಂದಾಗಲೇ ಅಡ್ಡಗಟ್ಟಿ ಅಪಹರಣ ಆರೋಪ:

ಆಗಸ್ಟ್ 19ರಂದು ಮಧ್ಯಾಹ್ನ ಸುಮಾರು 3:19ರ ವೇಳೆಗೆ ಅಮೀರ್ ಅಲಿ ಹಾಗೂ ಮಹಮ್ಮದ್ ಅಲ್ಪಾಜ್ ಕಾಲೇಜು ಮುಗಿಸಿ ನಡೆದುಕೊಂಡು ಹೋಗುತ್ತಿದ್ದಾಗ ಸೀನಿಯರ್ ವಿದ್ಯಾರ್ಥಿಗಳ ಗುಂಪು ಅವರನ್ನು ಅಡ್ಡಗಟ್ಟಿದೆ ಎನ್ನಲಾಗಿದೆ. ನಾಸೀದ್ ಅಮೀರ್ ಬೈಕ್ ತಂದು ನಿಲ್ಲಿಸಿದ್ದು, ಆದಿಲ್ ಎಂ., ಅರ್ಶಕ್, ಅನೀಶ್, ಉವೈಸ್ ಹಾಗೂ ರೋಹನ್ ರೌನೂಶ್ ಇಬ್ಬರು ವಿದ್ಯಾರ್ಥಿಗಳನ್ನು ಬಲವಂತವಾಗಿ ಬೈಕ್‌ನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿದ್ದ ಮನೆಯೊಂದರಲ್ಲಿ ಕೂಡಿಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೆಲ್ಟ್, ಹ್ಯಾಂಗರ್, ಕಬ್ಬಿಣದ ಪಂಚ್‌ನಿಂದ ಹಲ್ಲೆ :

ಕೋಣೆಯಲ್ಲಿ ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ಒಳಉಡುಪಿನಲ್ಲಿ ನಿಲ್ಲಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕೂಗಾಡದಂತೆ ಬಾಯಿಗೆ ಬಟ್ಟೆ ತುರುಕಲಾಗಿದ್ದು, ನಾಸೀದ್ ಅಮೀರ್ ಬೆಲ್ಟ್‌ನಿಂದ ಹಾಗೂ ಆದಿಲ್ ಎಂ. ಹ್ಯಾಂಗರ್‌ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ರೆಹಾನ್ ಎಂ.ಪಿ. ಕಬ್ಬಿಣದ ಪಂಚ್‌ನಿಂದ ಅಮೀರ್ ಅಲಿ ಅವರ ತಲೆ ಹಾಗೂ ಕುತ್ತಿಗೆಗೆ ಹೊಡೆದಿದ್ದು, ಹೊಡೆತದಿಂದ ತಲೆಯ ಹಿಂಭಾಗಕ್ಕೆ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಮ್ಮದ್ ಅಲ್ಪಾಜ್ ಮೇಲೂ ಪಂಚ್‌ನಿಂದ ಹಲ್ಲೆ ನಡೆದಿದ್ದು, ಹಣೆಗೆ ಹಾಗೂ ಎಡಭುಜಕ್ಕೆ ಗಾಯಗಳಾಗಿವೆ ಎನ್ನಲಾಗಿದೆ. ಹಲ್ಲೆಯ ದೃಶ್ಯಗಳನ್ನು ಅರ್ಶಕ್ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಕೊಳಕು ನೀರು ಕುಡಿಸುವ ಯತ್ನ, ಜೀವ ಬೆದರಿಕೆ ಆರೋಪ:

ಹಲ್ಲೆಯಿಂದ ನಲುಗಿ ನೀರು ಕೇಳಿದಾಗ ಕೊಳಕು ನೀರು ನೀಡಲಾಗಿದ್ದು, ಕುಡಿಯಲು ನಿರಾಕರಿಸಿದಾಗ ಅದನ್ನು ಮೈಮೇಲೆ ಚೆಲ್ಲಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಅಥವಾ ಕಾಲೇಜು ಆಡಳಿತಕ್ಕೆ ತಿಳಿಸಿದರೆ ಕ್ಯಾಂಪಸ್‌ನಲ್ಲೇ ಚಾಕುವಿನಿಂದ ಕೊಲೆ ಮಾಡುವುದಾಗಿ ಉವೈಸ್ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಸಂಜೆ 6 ಗಂಟೆಯವರೆಗೆ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಕೂಡಿಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮರುದಿನ ಕಾಲೇಜಿಗೆ ಬರುವಾಗ ಕ್ಲೀನ್ ಶೇವ್ ಮಾಡಿಕೊಂಡು ಬರಬೇಕು ಹಾಗೂ ಕಾಲಿಗೆ ಶೂ ಧರಿಸಬಾರದು ಎಂದು ನಾಸೀದ್ ಅಮೀರ್ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.

ಘಟನೆಯಿಂದ ಆತಂಕಕ್ಕೊಳಗಾದ ವಿದ್ಯಾರ್ಥಿಗಳು ಊರಿಗೆ ತೆರಳಿ ಪೋಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಪೋಷಕರೊಂದಿಗೆ ಮಂಗಳೂರಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

9 ಮಂದಿ ವಿರುದ್ಧ ಪ್ರಕರಣ; ಐವರ ಬಂಧನ:

ಪ್ರಕರಣಕ್ಕೆ ಸಂಬಂಧಿಸಿ ನಾಸೀದ್ ಅಮೀರ್, ರೆಹಾನ್ ಎಂ.ಪಿ., ಮೊಹಮ್ಮದ್ ಉವೈಸ್, ಮೊಹಮ್ಮದ್ ಆದಿಲ್ ಯು.ಪಿ. ಹಾಗೂ ರೋಹನ್ ರೌನೂಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೊಂದಿಗೆ ಅರ್ಶಕ್, ಅನೀಶ್, ಆದಿಲ್ ಎಂ. ಹಾಗೂ ಶಿನಾಸ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಬಂಧಿತರ ವಿರುದ್ಧ ಅಪಹರಣ, ಅಕ್ರಮ ಬಂಧನ, ಹಲ್ಲೆ, ಜೀವ ಬೆದರಿಕೆ, ಕೊಲೆಯತ್ನ ಹಾಗೂ ರ‍್ಯಾಗಿಂಗ್‌ಗೆ ಸಂಬಂಧಿಸಿದ BNS ಸೆಕ್ಷನ್ 140(3), 127(2), 115(2), 118(1), 351(2), 109, 190 ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 116ರಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

You may also like

News

ಕಳ್ಳತನ ಪ್ರಕರಣ – ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಟ್ಲ ಪೊಲೀಸರಿಂದ ಬಂಧನ

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
News

Father Muller Medical College Hospital Showcases Green Healthcare Initiatives at NABH National Patient Safety Conference in Delhi

Selected for a national-level presentation, FMMCH highlights sustainable environmental practices, responsible resource management and resilience in healthcare delivery Father Muller

You cannot copy content of this page