September 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಪಾಂಡೇಶ್ವರದಲ್ಲಿ ಕಟ್ಟಡದ ಬಾಲ್ಕನಿಯ ತಡೆಗೋಡೆ ಕುಸಿತ -ಓರ್ವ ವಿದ್ಯಾರ್ಥಿ ಸಾವು; 3 ಮಂದಿಗೆ ಗಾಯ

ಶಿಥಿಲ ಕಟ್ಟಡದಲ್ಲಿ ಕಾರ್ಯಕ್ರಮ ಆಯೋಜನೆ ಆರೋಪ — ಮಾಲೀಕರ ಹಾಗೂ ಆಯೋಜಕರ ವಿರುದ್ಧ FIR

ಮಂಗಳೂರು ನಗರದ ಪಾಂಡೇಶ್ವರದ ಎಮ್ಮೆಕೆರೆಯಲ್ಲಿರುವ ‘ರಮಾ ಲಕ್ಷ್ಮೀ ನಾರಾಯಣ ಹಾಲ್’ನಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮದ ವೇಳೆ ಮೊದಲ ಮಹಡಿಯ ಬಾಲ್ಕನಿಯ ತಡೆಗೋಡೆ ಏಕಾಏಕಿ ಕುಸಿದು 16 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

ಸೆಪ್ಟೆಂಬರ್ 26ರಂದು ಶನಿವಾರ ಮಧ್ಯಾಹ್ನ ವಿದ್ಯಾರ್ಥಿಗಳ ಕಾರ್ಯಕ್ರಮದ ಅಂಗವಾಗಿ ರ‍್ಯಾಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ FIRನಲ್ಲಿ ಉಲ್ಲೇಖಿಸಲಾಗಿದೆ. ಕಟ್ಟಡದ ಕೆಳಭಾಗದಲ್ಲಿ ನಿಂತು ರ‍್ಯಾಲಿಯನ್ನು ವೀಕ್ಷಿಸುತ್ತಿದ್ದ ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ 16 ವರ್ಷ ಪ್ರಾಯದ ಮೊಹಿದೀನ್ ಶಮ್ಮಾಸ್ ಅವರ ಮೇಲೆ ಮೊದಲ ಮಹಡಿಯ ತಡೆಗೋಡೆಯ ದೊಡ್ಡ ಭಾಗ ಕುಸಿದು ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.

ತಲೆಗೆ ತೀವ್ರ ಗಾಯಗೊಂಡಿದ್ದ ಶಮ್ಮಾಸ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 26ರ ರಾತ್ರಿ ಸುಮಾರು 11.33ಕ್ಕೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮರಣ ಸೂಚನಾ ಪತ್ರದಲ್ಲಿ ದಾಖಲಾಗಿದೆ.

ಮೂವರು ವಿದ್ಯಾರ್ಥಿಗಳಿಗೂ ಗಾಯ:

ತಡೆಗೋಡೆ ಕುಸಿದ ಪರಿಣಾಮ ಮೊಹಮ್ಮದ್ ಸನಾನ್ ಅಹ್ಮದ್, ಮೊಹಮ್ಮದ್ ಹನೀಫ್ ಹಾಗೂ ದಾವೂದು ಎಂಬ ಮೂವರು ವಿದ್ಯಾರ್ಥಿಗಳಿಗೂ ಗಾಯಗಳಾಗಿದ್ದು, ಅವರನ್ನು ಕೂಡ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು FIRನಲ್ಲಿ ತಿಳಿಸಲಾಗಿದೆ.

ಶಿಥಿಲ ಕಟ್ಟಡದಲ್ಲೇ ಕಾರ್ಯಕ್ರಮ ಆಯೋಜಿಸಿದ ಆರೋಪ:

ಮೃತ ವಿದ್ಯಾರ್ಥಿಯ ತಂದೆ ಮೊಹಮ್ಮದ್ ಇಲಿಯಾಸ್ ಮೊಹಿದಿನಬ್ಬ ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ, ‘ರಮಾ ಲಕ್ಷ್ಮೀ ನಾರಾಯಣ ಹಾಲ್’ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ತಿಳಿದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಕಾರ್ಯಕ್ರಮಕ್ಕೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.

ಕಟ್ಟಡದ ಮಾಲೀಕ ಪರೀಕ್ಷಿತ್ ರೈ ಹಾಗೂ ಕಾರ್ಯಕ್ರಮ ಆಯೋಜಕರಾದ ದಿನಕರ್ ಶೆಟ್ಟಿ ಅವರು ಕಟ್ಟಡದ ಸ್ಥಿತಿಯ ಬಗ್ಗೆ ತಿಳಿದಿದ್ದರೂ ವಿದ್ಯಾರ್ಥಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ನೀಡದೆ ಕಾರ್ಯಕ್ರಮ ನಡೆಸಿದ ಕಾರಣ ಈ ದುರಂತ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.197/2026ರಂತೆ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. FIRನಲ್ಲಿ ಆರೋಪಗಳು ದಾಖಲಾಗಿರುವುದಷ್ಟೇ ಆಗಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.

You may also like

News

‘ಹಿಂದೂ ಕಾರ್ಯಕರ್ತರ ಮೇಲಿನ ದಮನ ಖಂಡನೀಯ’ – ಬಿ.ಸಿ. ರೋಡ್ ಚಲೋ ಯಶಸ್ವಿಗೊಳಿಸಲು ಸಂಸದ ಕ್ಯಾ. ಬ್ರಿಜೇಶ್ ಚೌಟ ಕರೆ

ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ನಾಳೆ ಸೆಪ್ಟೆಂಬರ್ 28ರಂದು ಸೋಮವಾರ ನಡೆಯಲಿರುವ ‘ಬಿ.ಸಿ. ರೋಡ್ ಚಲೋ’
News

ಮಂಗಳೂರು ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ – ₹24 ಲಕ್ಷ ಮೌಲ್ಯದ MDMA ವಶ!

ಮಂಗಳೂರು ನಗರದಲ್ಲಿ ನಿಷೇಧಿತ ಮಾದಕವಸ್ತು MDMAಯನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಮೂವರನ್ನು ಬಂಧಿಸಿ, ಸುಮಾರು ₹24 ಲಕ್ಷ

You cannot copy content of this page