September 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಣಿ ಫ್ಲೈಓವರ್ ಬಳಿ ಭೀಕರ ಅಪಘಾತ – ಮಹಿಳೆ ಮೃತ್ಯು, ಮೂವರು ಗಂಭೀರ

ಬಂಟ್ವಾಳ: ಮಾಣಿ ಫ್ಲೈಓವರ್ ಆರಂಭವಾಗುವ ರಸ್ತೆಯ ಬಳಿ ಆಲ್ಟೋ ಕಾರು ಹಾಗೂ ಟೆಂಪೋ ಪಿಕಪ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಡಿಕೇರಿ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಸೆಪ್ಟೆಂಬರ್ 28ರಂದು ಸೋಮವಾರ ಬೆಳಗ್ಗೆ ಸುಮಾರು 6 ಗಂಟೆಗೆ ನಡೆದಿದೆ.

ಮೃತರನ್ನು ಮಡಿಕೇರಿ ನಿವಾಸಿ 60 ವರ್ಷ ಪ್ರಾಯದ ನಫೀಸಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರು ಮಹಿಳೆಯರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಉಮ್ರಾ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದ ಕುಟುಂಬ:

ಅಪಘಾತಕ್ಕೀಡಾದ ಆಲ್ಟೋ ಕಾರಿನಲ್ಲಿ ಚಾಲಕ ಸೇರಿದಂತೆ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಇವರಲ್ಲಿ ನಾಲ್ವರು ಮಹಿಳೆಯರು ಹಾಗೂ ಚಾಲಕ ಇದ್ದರು ಎನ್ನಲಾಗಿದ್ದು, ಉಮ್ರಾ ತರಗತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಕುಟುಂಬದವರು ಎಂದು ತಿಳಿದುಬಂದಿದೆ.

ಮಾಣಿ ಫ್ಲೈಓವರ್ ಆರಂಭವಾಗುವ ರಸ್ತೆಯ ಬಳಿ ಕಾರು ಮತ್ತು ಟೆಂಪೋ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಹಾಗೂ ಇತರರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ಸರ್ವಿಸ್ ರಸ್ತೆ ವಿನ್ಯಾಸದ ಬಗ್ಗೆ ಸ್ಥಳೀಯರ ಅಸಮಾಧಾನ:

ಈ ಅಪಘಾತದ ಹಿನ್ನೆಲೆಯಲ್ಲಿ ಮಾಣಿ ಸಮೀಪದ ಹಳೀರದ ಸರ್ವಿಸ್ ರಸ್ತೆಯ ವಿನ್ಯಾಸ ಹಾಗೂ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರವೇಶ ಮಾರ್ಗದ ಕುರಿತು ಸ್ಥಳೀಯರು ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುತ್ತೂರು–ಮಡಿಕೇರಿ–ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಸರ್ವಿಸ್ ರಸ್ತೆಗೆ ಹೊರಗಿನಿಂದ ಬರುವ ವಾಹನ ಚಾಲಕರಿಗೆ ಸರಿಯಾದ ಮಾಹಿತಿ ದೊರೆಯದೆ ಗೊಂದಲ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಿರಿದಾದ ಪ್ರವೇಶ ರಸ್ತೆ, ಸರ್ವಿಸ್ ರಸ್ತೆಯು ಸರಿಯಾಗಿ ಗೋಚರಿಸದಿರುವುದು ಹಾಗೂ ಸೂಕ್ತ ಸೂಚನಾ ಫಲಕಗಳ ಕೊರತೆ ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಭಾಗದಲ್ಲಿ ವಾಹನ ಸವಾರರಿಗೆ ಸ್ಪಷ್ಟವಾಗಿ ಮಾರ್ಗದರ್ಶನ ನೀಡುವ ಸೂಚನಾ ಫಲಕಗಳನ್ನು ಅಳವಡಿಸಿ, ರಸ್ತೆ ವಿನ್ಯಾಸವನ್ನು ಸುರಕ್ಷಿತಗೊಳಿಸುವ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ಅಪಘಾತದ ನಿಖರ ಕಾರಣ ತನಿಖೆಯ ಬಳಿಕ ತಿಳಿದುಬರಬೇಕಿದೆ.

You may also like

News

ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟಕ್ಕೆ ಚಾಲನೆ – 123 ಭಜನಾ ಮಂಡಳಿಗಳ 204 ಶಿಬಿರಾರ್ಥಿಗಳು ಭಾಗಿ

ಭಜನೆಯಿಂದ ಜೀವನ ಪಾವನ ಹಾಗೂ ಮನಸ್ಸಿಗೆ ಶಾಂತಿ – ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಉಜಿರೆ: ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕನಿಷ್ಠ ಒಂದು ಗಂಟೆಯಾದರೂ ಪರಿಶುದ್ಧ ಮನಸ್ಸು, ದೇಹ
News

ಬಿ.ಸಿ. ರೋಡ್ ಪ್ರತಿಭಟನೆಗೆ ಬಿಗಿ ಪೊಲೀಸ್ ಬಂದೋಬಸ್ತ್

ಪೊಲೀಸ್ ಪಥಸಂಚಲನ; 8 ಪೊಲೀಸ್ ನಿರೀಕ್ಷಕರು, 23 ಪಿಎಸ್‌ಐ ಸೇರಿದಂತೆ 260ಕ್ಕೂ ಅಧಿಕ ಅಧಿಕಾರಿ-ಸಿಬ್ಬಂದಿ ನಿಯೋಜನೆ ಬಂಟ್ವಾಳ: ಸೆಪ್ಟೆಂಬರ್ 28ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ

You cannot copy content of this page