ಐದು ದಶಕಗಳ ಯಕ್ಷಕಲಾ ಸೇವೆಗೆ ಸುವರ್ಣ ಸಂಭ್ರಮ – ಕಾಳಿಕಾಂಬಾ ಪ್ರತಿಷ್ಠಾನಕ್ಕೆ ಗಣ್ಯರ ಮೆಚ್ಚುಗೆ
ಪ್ರಭಾಕರ ಜೋಶಿಗೆ ‘ಸ್ವರ್ಣ ಸ್ಮೃತಿ ಗೌರವ’; ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ‘ಯಕ್ಷಕಲಾ ವಿದ್ವನ್ಮಣಿ’ ಪ್ರಶಸ್ತಿ

ಐದು ದಶಕಗಳಿಂದ ಯಕ್ಷಗಾನ ಹಾಗೂ ತಾಳಮದ್ದಳೆ ಕಲೆಯ ಉಳಿವು, ಬೆಳವಣಿಗೆ ಮತ್ತು ಹೊಸ ಪ್ರತಿಭೆಗಳ ರೂಪಿಸುವಿಕೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಸುವರ್ಣ ಮಹೋತ್ಸವ ಕಾರ್ಯಕ್ರಮವು ವೈವಿಧ್ಯಮಯ ಕಲಾ ಕಾರ್ಯಕ್ರಮಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಉಪ್ಪಿನಂಗಡಿಯ ಸಂಗಮ ಕೃಪಾ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣ ದಾಸ ಆಸ್ರಣ್ಣ ಆಶೀರ್ವಚನ ನೀಡಿ, ಯಕ್ಷಗಾನದ ಸಮಗ್ರ ಬೆಳವಣಿಗೆಯಲ್ಲಿ ಸಂಘಗಳ ಕೊಡುಗೆ ಅಪಾರ ಎಂದು ಹೇಳಿದರು.

ಕಳೆದ ಐದು ದಶಕಗಳಿಂದ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನವು ವಿವಿಧ ರೀತಿಯಲ್ಲಿ ಯಕ್ಷಕಲಾ ಸೇವೆ ಸಲ್ಲಿಸಿರುವುದು ಅಪೂರ್ವ ಸಾಧನೆಯಾಗಿದ್ದು, ಸಂಸ್ಥೆಯು ಶತಮಾನೋತ್ಸವವನ್ನು ಆಚರಿಸುವಂತಾಗಬೇಕು ಎಂದು ಆಶಿಸಿದರು. ಪ್ರತಿಫಲಾಪೇಕ್ಷೆಯಿಲ್ಲದೆ ಸಂಘದ ಬೆಳವಣಿಗೆಗೆ ದುಡಿದ ಮಹನೀಯರನ್ನು ಸ್ಮರಿಸುವುದು ಅಗತ್ಯ ಎಂದರು.
ತಾಳಮದ್ದಳೆಯು ಪ್ರತಿಯೊಬ್ಬರ ಚಿಂತನೆಗೆ ಜೀವ ತುಂಬುವ ಕಲಾ ಮಾಧ್ಯಮವಾಗಿದ್ದು, ವಾದ–ಪ್ರತಿವಾದ, ಜಿಜ್ಞಾಸೆ ಹಾಗೂ ತರ್ಕದ ಮೂಲಕ ಜ್ಞಾನವನ್ನು ವೃದ್ಧಿಸುತ್ತದೆ. ಈ ಗುಣಗಳು ಜೀವನದಲ್ಲಿಯೂ ಯಶಸ್ಸು ಸಾಧಿಸಲು ನೆರವಾಗುತ್ತವೆ ಎಂದು ಅವರು ಹೇಳಿದರು.

ಜೋಶಿಗೆ ಸ್ವರ್ಣ ಸ್ಮೃತಿ ಗೌರವ:
ಕಾಳಿಕಾಂಬಾ ಯಕ್ಷಗಾನ ಸಂಘದೊಂದಿಗೆ ನಾಲ್ಕು ದಶಕಗಳಿಂದ ಒಡನಾಟ ಹೊಂದಿರುವ ಹಿರಿಯ ಅರ್ಥಧಾರಿ ಪ್ರಭಾಕರ ಜೋಶಿ ಅವರಿಗೆ ಸುವರ್ಣ ಮಹೋತ್ಸವದ ಅಂಗವಾಗಿ ‘ಸ್ವರ್ಣ ಸ್ಮೃತಿ ಗೌರವ’ ನೀಡಿ ಸನ್ಮಾನಿಸಲಾಯಿತು. ಹಿರಿಯ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ‘ಯಕ್ಷಕಲಾ ವಿದ್ವನ್ಮಣಿ’ ಗೌರವವನ್ನು ಗೃಹ ಸನ್ಮಾನದ ಮೂಲಕ ಸಲ್ಲಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಪ್ರಭಾಕರ ಜೋಶಿ, ಉತ್ತಮ ಅರ್ಥಧಾರಿಯಾಗಲು ಸಂಘದ ಸಂಪರ್ಕ ಮತ್ತು ನಿರಂತರ ಕಲಾ ಚಟುವಟಿಕೆಗಳು ಅಗತ್ಯ ಎಂದರು. ಮಹಿಳೆಯರು ತಾಳಮದ್ದಳೆಯಲ್ಲಿ ಭಾಗವಹಿಸಲು ಇಂದು ಹೆಚ್ಚಿನ ಅವಕಾಶಗಳಿವೆ. ಪ್ರತಿಭಾವಂತ ಕಲಾವಿದರಿಗೆ ಇನ್ನಷ್ಟು ಅವಕಾಶಗಳು ದೊರೆಯಬೇಕಾಗಿದೆ ಎಂದು ಹೇಳಿದರು.
ಕರಾವಳಿಯ ಯಕ್ಷಗಾನಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಬೇಕು ಹಾಗೂ ಯಕ್ಷಗಾನ ಸಂಘಗಳಿಗೂ ಹೆಚ್ಚಿನ ಗೌರವ ದೊರೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕಾಳಿಕಾಂಬಾ ಪ್ರತಿಷ್ಠಾನ ನಡೆಸುತ್ತಿರುವ ‘ಶ್ರೀ ಮಹಾಭಾರತ’ ಸರಣಿಯ 130 ತಾಳಮದ್ದಳೆಗಳು ಐತಿಹಾಸಿಕ ದಾಖಲೆಯಾಗಿದ್ದು, ಮುಂದಿನ ಐದು ತಾಳಮದ್ದಳೆಗಳಲ್ಲಿ ಸಂಘದ ಸದಸ್ಯರೊಂದಿಗೆ ಭಾಗವಹಿಸುವುದಾಗಿ ತಿಳಿಸಿದರು.
ಕಲಾವಿದರು, ಕಲಾಪೋಷಕರಿಗೆ ಗೌರವ:
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕಲಾವಿದರು, ಕಲಾಪೋಷಕರು ಹಾಗೂ ಸಂಘಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧರ್ಮಸ್ಥಳದ ಬಿ. ಭುಜಬಲಿ ಅವರಿಗೆ ಉತ್ತಮ ಯಕ್ಷ ಸಂಘಟಕ ಪ್ರಶಸ್ತಿ, ರಾಮನಗರದ ಉಮೇಶ್ ಶೆಣೈ ಹಾಗೂ ಇಚ್ಚೂರಿನ ಸುರೇಶ್ ಪುತ್ತೂರಾಯ ಅವರಿಗೆ ಉತ್ತಮ ಕಲಾಪೋಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪುತ್ತೂರು ಬೊಳುವಾರದ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘಕ್ಕೆ ಉತ್ತಮ ಯಕ್ಷಕಲಾ ಸಂಘ ಪ್ರಶಸ್ತಿ ನೀಡಿ, ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅವರಿಗೆ ಪ್ರಶಸ್ತಿ ಹಸ್ತಾಂತರಿಸಲಾಯಿತು.

ಅರ್ಥಧಾರಿ ಹಾಗೂ ವೇಷಧಾರಿ ಗಣರಾಜ ಕುಂಬ್ಳೆ, ಕಲಾವಿದ–ಲೇಖಕ ನಾ. ಕಾರಂತ ಪೆರಾಜೆ ಅವರಿಗೆ ‘ಯಕ್ಷಾಕ್ಷರ’ ಪ್ರಶಸ್ತಿ, ಯಕ್ಷಗಾನ ಡಿಪ್ಲೊಮಾ ಪದವಿ ಪಡೆದ ಕಲಾವಿದೆ ಶ್ರುತಿ ಬಲ್ನಾಡು ಅವರಿಗೆ ‘ಬಹುಮುಖ ಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಸ್ಥಾಪಕ ಸದಸ್ಯ ದುಗ್ಗಪ್ಪ ಗೌಡ ಅವರನ್ನೂ ಸನ್ಮಾನಿಸಲಾಯಿತು.
ಸ್ಮರಣ ಸಂಚಿಕೆ ಬಿಡುಗಡೆ:
ಪುತ್ತೂರಿನ ನಿಕಟಪೂರ್ವ ಶಾಸಕ ಸಂಜೀವ ಮಟಂದೂರು ಅವರು ‘ಸ್ವರ್ಣ ಕಾಯಕ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಯಕ್ಷಗಾನ ಕಲಾವಿದರು ಅಪಾರ ಶ್ರದ್ಧೆಯಿಂದ ಕಲೆಯನ್ನು ಬೆಳೆಸಿಕೊಂಡು ಬಂದಿದ್ದು, ಅವರ ಕಲಾ ಪ್ರೌಢಿಮೆ ಇಂದಿಗೂ ಜನಮಾನಸದಲ್ಲಿ ಉಳಿದಿದೆ ಎಂದು ಅವರು ಹೇಳಿದರು.

ಉಪ್ಪಿನಂಗಡಿ ಪರಿಸರವು ಅಳಿಕೆ ರಾಮಯ್ಯ ರೈ, ಪಾತಾಳ ವೆಂಕಟರಮಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಅಂಬಾ ಪ್ರಸಾದ ಪಾತಾಳ ಸೇರಿದಂತೆ ಹಲವು ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನು ಕಲಾಲೋಕಕ್ಕೆ ನೀಡಿದೆ. ಹೊಸ ಕಲಾವಿದರನ್ನು ರೂಪಿಸುವಲ್ಲಿ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನ ಮಾಡುತ್ತಿರುವ ಪ್ರಯತ್ನಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ಯಕ್ಷಗಾನ ಬದುಕನ್ನು ರೂಪಿಸುವ ಶಕ್ತಿ ಹೊಂದಿದೆ:
ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಉಪ್ಪಿನಂಗಡಿಯು ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿರುವ ಸಂಗಮ ಕ್ಷೇತ್ರವಾಗಿದೆ ಎಂದರು.
ಯಕ್ಷಗಾನ ಮತ್ತು ತಾಳಮದ್ದಳೆ ಕಾರ್ಯಕ್ರಮಗಳ ಮೂಲಕ ಶುದ್ಧ ಕನ್ನಡ ಭಾಷಾ ಪ್ರಯೋಗವನ್ನು ಕಲಿಯಬಹುದಾಗಿದೆ. ಮಂಗಳೂರಿನ ಶ್ರೀ ವಾಗೀಶ್ವರಿ ಯಕ್ಷಗಾನ ಸಂಘವು 104 ವರ್ಷಗಳಿಂದ ಕಲಾಸೇವೆ ಮಾಡುತ್ತಿದ್ದು, ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನವೂ ಶತಮಾನೋತ್ಸವ ಆಚರಿಸುವಂತಾಗಲಿ ಎಂದು ಹಾರೈಸಿದರು.
ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಹರೀಶ್ ಆಚಾರ್ ಮಾತನಾಡಿ, ಯಕ್ಷಗಾನವು ಕರಾವಳಿ ಕರ್ನಾಟಕದ ಜನಜೀವನದ ಭಾಗವಾಗಿದ್ದು, ಬೌದ್ಧಿಕ ಹಾಗೂ ನೈತಿಕ ಮೌಲ್ಯಗಳನ್ನು ವೃದ್ಧಿಸುವ ವಿಶಿಷ್ಟ ಭಾರತೀಯ ರಂಗಕಲೆಯಾಗಿದೆ ಎಂದರು.

ಅಧ್ಯಕ್ಷ ದಿವಾಕರ ಆಚಾರ್ಯ ದಂಪತಿಗೆ ಗೌರವಾರ್ಪಣೆ:
ಸುವರ್ಣ ಮಹೋತ್ಸವದ ಕನಸನ್ನು ಸಾಕಾರಗೊಳಿಸಲು ಶ್ರಮಿಸಿದ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಹಾಗೂ ಅವರ ಪತ್ನಿ ಭಾರತಿ ಅವರನ್ನು ಗೌರವಿಸಲಾಯಿತು. ಬಾಲ ಕಲಾವಿದ ಸುಶಾಂತ್ ರಾವ್. ಬಿ. ಹಾಗೂ ಸಂಸ್ಕೃತದಲ್ಲಿ ಎಂ.ಎ. ಪದವಿ ಪಡೆದ ಶಿಕ್ಷಕಿ, ಅರ್ಥಧಾರಿ ಪುಷ್ಪಾ ತಿಲಕ್ ಅವರನ್ನೂ ಸನ್ಮಾನಿಸಲಾಯಿತು.
ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ, ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ತಾಳಮದ್ದಳೆಯನ್ನು ಕೇಳುವುದರಿಂದ ದೊರೆಯುವ ಪೌರಾಣಿಕ ಜ್ಞಾನ ಅಪೂರ್ವವಾಗಿದ್ದು, ಉಪ್ಪಿನಂಗಡಿ ಪರಿಸರದಲ್ಲಿ ಕಲಾವಿದರು ಗ್ರಾಮೀಣ ಮಟ್ಟದಲ್ಲಿಯೂ ಈ ಕಲೆಯನ್ನು ಉಳಿಸಿಕೊಂಡು ಬಂದಿರುವುದು ದೊಡ್ಡ ಸಾಧನೆ ಎಂದು ಅವರು ಹೇಳಿದರು.

13 ಗಂಟೆಗಳ ವೈವಿಧ್ಯಮಯ ಕಲಾ ಕಾರ್ಯಕ್ರಮ:
ಸುವರ್ಣ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಪ್ರಾರ್ಥನೆ ಹಾಗೂ ಅಬ್ಬರ ತಾಳದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಪ್ರಾಯೋಜಕತ್ವದಲ್ಲಿ ಹವ್ಯಾಸಿ ಕಲಾವಿದರಿಂದ ‘ಯಕ್ಷ ನವರಸ ಆಶು ವೈಭವ’, ಯಕ್ಷಗಾನ ವಿದ್ವಾಂಸ ತಾಳ್ತಜೆ ಕೃಷ್ಣ ಭಟ್ ಸಂಸ್ಮರಣೆ, ಪ್ರಸಿದ್ಧ ಕಲಾವಿದರಿಂದ ‘ಗೀತೋಪದೇಶ’ ಹಾಗೂ ‘ಶಲ್ಯ ಸಾರಥ್ಯ’ ತಾಳಮದ್ದಳೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ನಿರಂತರ 13 ಗಂಟೆಗಳ ಕಾಲ ನಿಗದಿತ ವೇಳಾಪಟ್ಟಿಯಂತೆ ನಡೆದ ಕಾರ್ಯಕ್ರಮವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಯಾವುದೇ ಆಡಂಬರವಿಲ್ಲದೆ ಸರಳವಾಗಿ, ಆದರೆ ವೈವಿಧ್ಯಮಯವಾಗಿ ನಡೆದ ಈ ಸುವರ್ಣ ಮಹೋತ್ಸವವು ಯಕ್ಷಗಾನ ಸಂಘವೊಂದರ ಮಾದರಿ ಕಾರ್ಯಕ್ರಮವಾಗಿ ಗಮನ ಸೆಳೆಯಿತು. ಶ್ರೀ ಮಹಾಭಾರತ ಸರಣಿಯ ರಸಪ್ರಶ್ನೆಯಲ್ಲಿ ವಿಜೇತರಾದ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯ ಹಾಗೂ ಶ್ರೀರಾಮ ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರದೀಪ ಚಾರ, ದಿವಾಕರ ಆಚಾರ್ಯ ಹಳೆನೇರೆಂಕಿ, ಕೆ. ಶ್ರೀಧರ ಭಟ್, ಪದ್ಮನಾಭ ಕುಲಾಲ್, ಪುಷ್ಪಾ ತಿಲಕ್, ರವೀಂದ್ರ ದರ್ಬೆ, ಶ್ರೀಧರ ಎಸ್.ಪಿ. ಕೃಷ್ಣಾಪುರ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಸೇರಿದಂತೆ ಹಲವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆ ಹಾಗೂ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ರವೀಂದ್ರ ದರ್ಬೆ ಮತ್ತು ಸಂಘಟನಾ ಕಾರ್ಯದರ್ಶಿ ಗೀತಾ ಕೆ.ಎ. ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ಗುಡ್ಡಪ್ಪ ಗೌಡ ಬಲ್ಯ ವಂದಿಸಿದರು.



