ಬೈಂದೂರಿನಲ್ಲಿ ಅಕ್ಟೋಬರ್ 11ರಂದು ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟಕ್ಕೆ ಚಾಲನೆ
ಏಕತೆ, ಸಂಘಟನೆ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹೊಸ ಹೆಜ್ಜೆ

ಅಖಿಲ ಕರ್ನಾಟಕ ಕೋಟೆಗಾರ ಸಂಘದ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಮಟ್ಟದ ರಾಮಕ್ಷತ್ರಿಯ ಒಕ್ಕೂಟದ ಸ್ಥಾಪನೆ ಹಾಗೂ ಪದಗ್ರಹಣ ಸಮಾರಂಭ ಅಕ್ಟೋಬರ್ 11ರಂದು ಭಾನುವಾರ ಬೈಂದೂರಿನ ಜೆ.ಎನ್.ಆರ್. ಕಲಾಮಂದಿರದಲ್ಲಿ ನಡೆಯಲಿದೆ.
ಕೋಟೆಗಾರ ರಾಮಕ್ಷತ್ರಿಯ ಸಮಾಜದ ಬಂಧುಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಮಾಜದ ಏಕತೆ ಹಾಗೂ ಸಂಘಟನೆಯನ್ನು ಬಲಪಡಿಸುವುದರೊಂದಿಗೆ ಮುಂದಿನ ಪೀಳಿಗೆಯ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟವನ್ನು ಸ್ಥಾಪಿಸಲಾಗುತ್ತಿದೆ.

ಸಮಾರಂಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಾಗುವುದು.
ಮಾಜಿ ಸಚಿವ ಹಾಗೂ ಸಮಾಜದ ಹಿರಿಯ ಮಾರ್ಗದರ್ಶಕ ಕೃಷ್ಣ ಜೆ. ಪಾಲೇಮಾರ್ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದು, ಅಖಿಲ ಕರ್ನಾಟಕ ಕೋಟೆಗಾರ ಸಂಘದ ಅಧ್ಯಕ್ಷ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡಲು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಶಶಿಧರ್ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟದ ಅಧ್ಯಕ್ಷರಾಗಿ ಅಶ್ವಿನಿ ಎಂಟರ್‌ಪ್ರೈಸಸ್, ಬಳ್ಳಾರಿಯ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಕೊತ್ವಾಲ್ ಅವರು ನಾಮಾಂಕಿತರಾಗಿದ್ದಾರೆ.


ಸಮಾಜದ ಏಕತೆ, ಸಂಘಟನೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶ ಹೊಂದಿರುವ ಈ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಕೋಟೆಗಾರ ರಾಮಕ್ಷತ್ರಿಯ ಸಮಾಜದ ಬಂಧು-ಭಗಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಒಕ್ಕೂಟದ ಚಟುವಟಿಕೆಗಳಿಗೆ ಸಹಕಾರ ನೀಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.



