November 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪೆನ್ನು ಹಿಡಿದು ಭಕ್ತಿಯ ಪಯಣ – 8 ತಿಂಗಳಲ್ಲಿ ಸಂಪೂರ್ಣ ಬೈಬಲ್ ಬರೆದು ಇತಿಹಾಸ ನಿರ್ಮಿಸಿದ ಮಡಂತ್ಯಾರ್‌ನ  ಸಾಧಕಿಯರು ಸುನೀತಾ ಮತ್ತು ಡಯಾನಾ

ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ ಚರ್ಚ್ ಧರ್ಮಗುರು ಫಾದರ್ ಸ್ಟ್ಯಾನಿ ಗೋವಿಯಸ್ ಹಾಗೂ ಸ್ತ್ರೀ ಸಂಘಟನೆಯ ಪದಾಧಿಕಾರಿಗಳು

ಮಡಂತ್ಯಾರ್: ಅಚಲ ನಂಬಿಕೆ, ಅಪಾರ ತಾಳ್ಮೆ, ನಿರಂತರ ಪರಿಶ್ರಮ ಹಾಗೂ ದೇವರ ವಾಕ್ಯದ ಮೇಲಿನ ಅಚಲ ಪ್ರೀತಿಗೆ ಸಾಕ್ಷಿಯಾಗಿ ಪವಿತ್ರ ಬೈಬಲ್‌ನ ಸಂಪೂರ್ಣ ಬರಹವನ್ನು ತಮ್ಮ ಸ್ವಹಸ್ತದಿಂದಲೇ ಬರೆದು ಪೂರ್ಣಗೊಳಿಸಿರುವ ಮಡಂತ್ಯಾರ್‌ ಚರ್ಚ್ ನ ಇಬ್ಬರು ಭಕ್ತ ಮಹಿಳೆಯರು ಅಪರೂಪದ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಡಂತ್ಯಾರ್ ಪವಿತ್ರ ಹೃದಯ ಚರ್ಚ್ ವ್ಯಾಪ್ತಿಯ ಸುನೀತಾ ಲಸ್ರಾದೊ ಹಾಗೂ ಡಯಾನಾ ಫೆರ್ನಾಂಡಿಸ್ ಅವರು ತಮ್ಮ ಭಕ್ತಿ, ಶ್ರದ್ಧೆ ಮತ್ತು ಸಂಕಲ್ಪಬಲದಿಂದ ಈ ಮಹತ್ವದ ಸಾಧನೆ ಮಾಡಿದ್ದು, ಧಾರ್ಮಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪವಿತ್ರ ಬೈಬಲ್‌ನ ಪ್ರತಿಯೊಂದು ವಾಕ್ಯವನ್ನೂ ಸ್ವಹಸ್ತದಿಂದ ಬರೆಯುವುದು ಕೇವಲ ಬರವಣಿಗೆಯ ಕೆಲಸವಲ್ಲ; ಅದಕ್ಕೆ ಅಪಾರ ತಾಳ್ಮೆ, ಏಕಾಗ್ರತೆ, ಶಿಸ್ತು ಹಾಗೂ ದೇವರ ವಚನದ ಮೇಲಿನ ಆಳವಾದ ಪ್ರೀತಿ ಅಗತ್ಯ. ಇಂತಹ ಸವಾಲಿನ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಪೂರ್ಣಗೊಳಿಸಿರುವ ಈ ಇಬ್ಬರು ಮಹಿಳೆಯರು ಭಕ್ತಿ ಮತ್ತು ಸಂಕಲ್ಪಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ.

ಸುನೀತಾ ಲಸ್ರಾದೊ – 8 ತಿಂಗಳು 17 ದಿನಗಳಲ್ಲಿ ಸಂಪೂರ್ಣ ಬೈಬಲ್ ಬರವಣಿಗೆ:

ಮೈಕಲ್ ಲಸ್ರಾದೊ ಅವರ ಧರ್ಮಪತ್ನಿ ಹಾಗೂ ಮೆಲಿಷಾ ಮತ್ತು ಮೆಲಿಕಾ ಅವರ ತಾಯಿಯಾದ ಸುನೀತಾ ಲಸ್ರಾದೊ ಅವರು ವಂದನೀಯ ಫಾದರ್ ಬಿಜು ಮ್ಯಾಥ್ಯೂ ಅವರ ಕೈಬರಹದ ಪವಿತ್ರ ಬೈಬಲ್ ಗ್ರೂಪ್‌ನಲ್ಲಿ ಭಾಗವಹಿಸಿ, ಕೇವಲ 8 ತಿಂಗಳು 17 ದಿನಗಳಲ್ಲಿ ಹಳೆಯ ಮತ್ತು ಹೊಸ ಒಡಂಬಡಿಕೆಗಳನ್ನು ಒಳಗೊಂಡ ಸಂಪೂರ್ಣ ಪವಿತ್ರ ಬೈಬಲ್ ಅನ್ನು ತಮ್ಮ ಮಾತೃಭಾಷೆ ಕೊಂಕಣಿಯಲ್ಲಿ ಸ್ವಹಸ್ತದಿಂದ ಬರೆದು ಪೂರ್ಣಗೊಳಿಸಿದ್ದಾರೆ.

ಈ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನುಭವಿಸಿದ ಬದಲಾವಣೆಯನ್ನೂ ಅವರು ಭಾವುಕವಾಗಿ ಹಂಚಿಕೊಂಡಿದ್ದಾರೆ. ತಮ್ಮ ಶರೀರದಲ್ಲಿದ್ದ ಸಿಸ್ಟ್ ಶಸ್ತ್ರಚಿಕಿತ್ಸೆಯಿಲ್ಲದೆ ಕರಗಿಹೋಯಿತು ಎಂಬುದನ್ನು ದೇವರ ಕೃಪೆಯ ಅನುಭವವೆಂದು ಅವರು ನಂಬಿಕೆಯಿಂದ ವಿವರಿಸಿದ್ದಾರೆ.

ಸ್ತ್ರೀ ಸಂಘಟನೆಯ ಮಡಂತ್ಯಾರ್ ಘಟಕದ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುನೀತಾ ಅವರು ವಿವಿಧ ಸಂಘ-ಸಂಸ್ಥೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ನಿಷ್ಠೆಯ ಜೊತೆಗೆ ಸೇವಾ ಮನೋಭಾವವನ್ನೂ ಮೈಗೂಡಿಸಿಕೊಂಡಿರುವ ಅವರ ಸಾಧನೆ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

ಡಯಾನಾ ಫೆರ್ನಾಂಡಿಸ್ – 8 ತಿಂಗಳು 15 ದಿನಗಳಲ್ಲಿ ಬೈಬಲ್ ಬರವಣಿಗೆ ಪೂರ್ಣ:

ಡಿಯೋನ್ ಮತ್ತು ಡಿನೋಲ್ ಫೆರ್ನಾಂಡಿಸ್ ಅವರ ತಾಯಿಯಾದ ಡಯಾನಾ ಫೆರ್ನಾಂಡಿಸ್ ಅವರು ವಂದನೀಯ ಫಾದರ್ ಬಿಜು ಮ್ಯಾಥ್ಯೂ ಅವರ ಕೈಬರಹದ ಪವಿತ್ರ ಬೈಬಲ್ ಗ್ರೂಪ್‌ನಲ್ಲಿ ಪಾಲ್ಗೊಂಡು, ಕೇವಲ 8 ತಿಂಗಳು 15 ದಿನಗಳಲ್ಲಿ ಸಂಪೂರ್ಣ ಪವಿತ್ರ ಬೈಬಲ್ ಅನ್ನು ಇಂಗ್ಲಿಷ್ ಲಿಪಿಯಲ್ಲಿ ಸ್ವಹಸ್ತದಿಂದ ಬರೆದು ಪೂರ್ಣಗೊಳಿಸಿದ್ದಾರೆ.

ಈ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅವಧಿಯಲ್ಲಿ ದೀರ್ಘಕಾಲದಿಂದ ಮಾರಾಟವಾಗದೆ ಉಳಿದಿದ್ದ ತಮ್ಮ ಆಸ್ತಿ ಯಶಸ್ವಿಯಾಗಿ ಮಾರಾಟವಾದುದನ್ನು ದೇವರ ಕೃಪೆ ಹಾಗೂ ಪ್ರಾರ್ಥನೆಗೆ ದೊರೆತ ಉತ್ತರವೆಂದು ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ಸ್ತ್ರೀ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಯಾನಾ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಸೇವಾ ಮನೋಭಾವವನ್ನು ಮೆರೆದಿದ್ದಾರೆ. ಅವರ ಧಾರ್ಮಿಕ ಶ್ರದ್ಧೆ, ಪರಿಶ್ರಮ ಹಾಗೂ ನಿಸ್ವಾರ್ಥ ಸೇವೆ ಪ್ರಶಂಸನೀಯವಾಗಿದೆ.

ಸಾಧಕಿಯರಿಗೆ ಚರ್ಚ್ ಹಾಗೂ ಸ್ತ್ರೀ ಸಂಘಟನೆಯ ಅಭಿನಂದನೆ:

ಇಬ್ಬರು ಮಹಿಳೆಯರ ಈ ಅಪೂರ್ವ ಸಾಧನೆಯನ್ನು ಮಡಂತ್ಯಾರ್ ಚರ್ಚ್‌ನ ಧರ್ಮಗುರುಗಳು ಹಾಗೂ ಸ್ತ್ರೀ ಸಂಘಟನೆಯ ಪದಾಧಿಕಾರಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಮಡಂತ್ಯಾರ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಸ್ಟ್ಯಾನಿ ಗೋವಿಯಸ್, ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ಲ್ಯಾರಿ ಪಿಂಟೋ, ಸ್ತ್ರೀ ಸಂಘಟನೆಯ ಮಡಂತ್ಯಾರ್ ಘಟಕದ ಅಧ್ಯಕ್ಷೆ ಸೆಲೆಸ್ಟಿನ್ ಡಿಸೋಜ, ಕಾರ್ಯದರ್ಶಿ ಬೆನೆಡಿಕ್ಟಾ ಡಿಸೋಜ ಸೇರಿದಂತೆ ಸಂಘಟನೆಯ ಸರ್ವ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಇಬ್ಬರು ಸಾಧಕಿಯರ ಸಾಧನೆಯನ್ನು ಶ್ಲಾಘಿಸಿ ಶುಭ ಹಾರೈಸಿದ್ದಾರೆ.

ಪವಿತ್ರ ಬೈಬಲ್ ಅನ್ನು ಸ್ವಹಸ್ತದಿಂದ ಬರೆದು ಪೂರ್ಣಗೊಳಿಸಿರುವ ಈ ಸಾಧನೆ ಕೇವಲ ವೈಯಕ್ತಿಕ ಧಾರ್ಮಿಕ ಸಾಧನೆಯಲ್ಲ; ದೇವರ ವಾಕ್ಯದ ಮೇಲಿನ ಪ್ರೀತಿ, ಅಚಲ ವಿಶ್ವಾಸ, ತಾಳ್ಮೆ ಮತ್ತು ಪರಿಶ್ರಮದ ಅಪೂರ್ವ ಅಭಿವ್ಯಕ್ತಿಯಾಗಿದೆ. ನಂಬಿಕೆಯನ್ನು ಕೇವಲ ಮಾತುಗಳಲ್ಲಿ ಸೀಮಿತಗೊಳಿಸದೆ, ಕಾರ್ಯದ ಮೂಲಕ ಸಾಕ್ಷೀಕರಿಸಿರುವ ಸುನೀತಾ ಲಸ್ರದೋ ಹಾಗೂ ಡಯಾನಾ ಫೆರ್ನಾಂಡಿಸ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ಈ ಸಾಧನೆ ಇನ್ನಷ್ಟು ಜನರಲ್ಲಿ ದೇವರ ವಾಕ್ಯವನ್ನು ಓದುವ, ಅರಿಯುವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರೇರಣೆಯಾಗಲಿ ಎಂಬುದು ಎಲ್ಲರ ಹಾರೈಕೆ.

You may also like

News

ಪುತ್ತೂರಿನಲ್ಲಿ BEO ಆಗಿದ್ದ ಸಿ. ಲೋಕೇಶ್‌ ಅವರಿಗೆ ಪದೋನ್ನತಿ ಭಾಗ್ಯ

ಪ್ರಾಮಾಣಿಕ ಸೇವೆಗೆ ಬೆಂಗಳೂರಿನಲ್ಲಿ ಜಂಟಿ ನಿರ್ದೇಶಕ ಹುದ್ದೆಯ ಗೌರವ! ಶಿಕ್ಷಣ ಇಲಾಖೆಯಲ್ಲಿ ನಿಷ್ಠಾವಂತ, ಪ್ರಾಮಾಣಿಕ ಹಾಗೂ ಸೇವಾ ಮನೋಭಾವದ ಅಧಿಕಾರಿಯಾಗಿ ಗುರುತಿಸಿಕೊಂಡಿರುವ, ಈ ಹಿಂದೆ ಪುತ್ತೂರು ಕ್ಷೇತ್ರ
News

ಮಂಗಳೂರಿನ ಹಲವೆಡೆ ಗಾಂಜಾ ಮಾರಾಟ – ಆರೋಪಿ ಬಂಧನ

ಕಾರು ಹಾಗೂ ಮೊಬೈಲ್ ಸಹಿತ ₹3.94 ಲಕ್ಷದ ಸೊತ್ತು ವಶ ಮಂಗಳೂರು ನಗರದಲ್ಲಿ ಅಕ್ರಮ ಮಾದಕವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು, ಗಾಂಜಾ

You cannot copy content of this page