October 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜಮೀನು ಒತ್ತುವರಿ ಪ್ರಕರಣದಲ್ಲಿ ವಾದಿಗೆ ಜಯ – ತಡೆಗೋಡೆ ಪುನರ್ನಿರ್ಮಿಸಲು ಪ್ರತಿವಾದಿಗೆ ಕೋರ್ಟ್ ಆದೇಶ

ಪುತ್ತೂರಿನ ಖ್ಯಾತ ಯುವ ನ್ಯಾಯವಾದಿ ರಾಜನಾರಾಯಣ ಮಳಿ ಅವರು ಮಂಡಿಸಿದ ವಾದ

ನೆರೆಹೊರೆಯವರ ಜಮೀನು ಒತ್ತುವರಿ ಹಾಗೂ ತಡೆಗೋಡೆ ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ವಾದಿಯ ಆಸ್ತಿ ಹಾನಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ಪ್ರತಿವಾದಿಯು ತನ್ನ ಸ್ವಂತ ಖರ್ಚಿನಲ್ಲಿ ತಡೆಗೋಡೆಯನ್ನು ಪುನಃಸ್ಥಾಪಿಸಬೇಕೆಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಪುತ್ತೂರು ತಾಲೂಕು ಪಡೀಲ್ ನಿವಾಸಿ ಹಾಗೂ ಕೊಟೇಚ ಹಾಲ್‌ನ ಮಾಲೀಕರಾದ ಶಶಾಂಕ್ ಕೊಟೇಚ ಅವರ ಜಮೀನಿನ ಪಕ್ಕದ ನಿವಾಸಿ ಕುಂಞ ಅಹಮದ್ ಬಿನ್ ಅಬ್ದುಲ್ ಕುಂಞ ಎಂಬುವವರು ಕೊಟೇಚರವರ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಲ್ಲದೆ, ಅದರ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ತಡೆಗೋಡೆಯನ್ನು ನಾಶಪಡಿಸಿ ನಷ್ಟ ಉಂಟುಮಾಡಿದ್ದರು. ಈ ಬಗ್ಗೆ ಪುತ್ತೂರು ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶಶಾಂಕ್ ಕೊಟೇಚ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಚಾರಣೆ ಮತ್ತು ಕೋರ್ಟ್ ಕಮಿಷನರ್ ವರದಿ:

ಪ್ರಕರಣವನ್ನು ಕೈಗೆತ್ತಿಕೊಂಡ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು, ವಾಸ್ತವಾಂಶದ ಪರಿಶೀಲನೆಗಾಗಿ ಕೋರ್ಟ್ ಕಮಿಷನರ್ ಹಾಗೂ ಗಡಿ ಗುರುತಿನ ಅಳತೆಗಾಗಿ ಸರ್ವೆಯರ್ ಅವರನ್ನು ನೇಮಿಸಿತ್ತು. ಸ್ಥಳ ಪರಿಶೀಲನೆ ನಡೆಸಿದ ಕಮಿಷನರ್, ಜಮೀನು ಒತ್ತುವರಿಯಾಗಿರುವುದು ಮತ್ತು ತಡೆಗೋಡೆ ಹಾನಿಯಾಗಿ ಮುಂದಕ್ಕೆ ಅಪಾಯಕಾರಿ ಪರಿಸ್ಥಿತಿ ಇರುವುದನ್ನು ದೃಢಪಡಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ನ್ಯಾಯಾಲಯದ ಅಂತಿಮ ತೀರ್ಪು:

ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಣ್ಣ ಅವರು ಅಂತಿಮ ಆದೇಶ ಹೊರಡಿಸಿದ್ದಾರೆ.

* ಖಾಯಂ ಪ್ರತಿಬಂಧಕಕಾಜ್ಞೆ: ಪ್ರತಿವಾದಿ ಕುಂಞ ಅಹಮದ್ ಅವರು ಇನ್ನು ಮುಂದೆ ವಾದಿಯ ಜಮೀನಿಗೆ ಅಕ್ರಮವಾಗಿ ಪ್ರವೇಶಿಸದಂತೆ ನ್ಯಾಯಾಲಯವು ‘ಖಾಯಂ ಪ್ರತಿಬಂಧಕಕಾಜ್ಞೆ’ (Permanent Injunction) ವಿಧಿಸಿದೆ.

* ತಡೆಗೋಡೆ ನಿರ್ಮಾಣಕ್ಕೆ ಆದೇಶ: ಪ್ರತಿವಾದಿಯು ತನ್ನ ಜಮೀನಿನ ಮಣ್ಣು ತೆಗೆದು ವಾದಿಯ ತಡೆಗೋಡೆ ಕುಸಿಯುವಂತೆ ಮಾಡಿರುವುದು ಸಾಬೀತಾದ ಕಾರಣ, ಮುಂದಿನ ಎರಡು ತಿಂಗಳೊಳಗೆ ತನ್ನ ಸ್ವಂತ ಖರ್ಚಿನಲ್ಲಿ ತಡೆಗೋಡೆಯನ್ನು ಮೊದಲಿನಂತೆಯೇ ಪುನಃಸ್ಥಾಪಿಸಬೇಕು ಎಂದು ನ್ಯಾಯಾಧೀಶರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಈ ಮಹತ್ವದ ಕಾನೂನು ಹೋರಾಟದಲ್ಲಿ ವಾದಿ ಶಶಾಂಕ್ ಕೊಟೇಚ ಅವರ ಪರವಾಗಿ ಪುತ್ತೂರಿನ ಖ್ಯಾತ ಯುವ ನ್ಯಾಯವಾದಿ ರಾಜನಾರಾಯಣ ಮಳಿ ಅವರು ವಾದ ಮಂಡಿಸಿದ್ದರು.

You may also like

News

ಕಳ್ಳತನ ಪ್ರಕರಣ – ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಟ್ಲ ಪೊಲೀಸರಿಂದ ಬಂಧನ

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
News

Father Muller Medical College Hospital Showcases Green Healthcare Initiatives at NABH National Patient Safety Conference in Delhi

Selected for a national-level presentation, FMMCH highlights sustainable environmental practices, responsible resource management and resilience in healthcare delivery Father Muller

You cannot copy content of this page