July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರಕ್ಕೆ ಐವರು ನೂತನ ಯಾಜಕರ ಸೇರ್ಪಡೆ – ಕುಲಶೇಖರ ಚರ್ಚ್‌ನಲ್ಲಿ ಭವ್ಯ ದೀಕ್ಷಾ ಪ್ರದಾನ ಸಮಾರಂಭ

ಯಾಜಕತ್ವ ಎಂಬುದು ದೈವಿಕ ಕೊಡುಗೆ: ಬಿಷಪ್  ಪೀಟರ್ ಪಾವ್ಲ್

ಮಂಗಳೂರು ಧರ್ಮಕ್ಷೇತ್ರದ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಐವರು ಯುವ ಸೇವಾದರ್ಶಿಗಳು ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ಯಾಜಕ ದೀಕ್ಷೆಯನ್ನು ಪಡೆಯುವ ಮೂಲಕ ಪ್ರಭು ಯೇಸುಕ್ರಿಸ್ತರ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡರು. ಕುಲಶೇಖರದ ಕೊರ್ಡೆಲ್ ಚರ್ಚ್‌ನಲ್ಲಿ ಇಂದು ಏಪ್ರಿಲ್ 16ರಂದು ಗುರುವಾರ ಜರುಗಿದ ಈ ಭವ್ಯ ಸಮಾರಂಭವು ಸಾವಿರಾರು ಭಕ್ತಾದಿಗಳ ಭಕ್ತಿಪರವಶತೆಗೆ ಸಾಕ್ಷಿಯಾಯಿತು.

ಆಧ್ಯಾತ್ಮಿಕ ಸಂಭ್ರಮದ ಬಲಿಪೂಜೆ:

ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಮುಖ್ಯ ಕಾರ್ಮಿಕತ್ವದಲ್ಲಿ ನಡೆದ ದಿವ್ಯ ಬಲಿಪೂಜೆಯಲ್ಲಿ ಧರ್ಮಕ್ಷೇತ್ರದ ಪ್ರಮುಖ ಧರ್ಮಗುರುಗಳು ಪಾಲ್ಗೊಂಡಿದ್ದರು. ಧರ್ಮಕ್ಷೇತ್ರದ ಶ್ರೇಷ್ಠ ಗುರು ಅತೀ ವಂದನೀಯ ಮ್ಯಾಕ್ಸಿಮ್ ಎಲ್. ನೊರೊನ್ಹಾ, ಧಾರ್ಮಿಕರ ಪಾಲನಾ ವಿಕಾರ್ ಅತೀ ವಂದನೀಯ ಡಾ. ಡೇನಿಯಲ್ ವೇಗಸ್ OP, ಜೆಪ್ಪು ಸೆಮಿನರಿಯ ರೆಕ್ಟರ್ ವಂದನೀಯ ಡಾ. ರಾಜೇಶ್ ರೊಸಾರಿಯೋ, ಜುಡಿಶಿಯಲ್ ವಿಕಾರ್ ಅತೀ ವಂದನೀಯ ಫಾದರ್ ನವೀನ್ ಪಿಂಟೊ, ಪಾಲನಾ ಕೇಂದ್ರದ ನಿರ್ದೇಶಕರಾದ ಅತೀ ವಂದನೀಯ ಫಾದರ್ ಸಂತೋಷ್ ರೊಡ್ರಿಗಸ್, ಕುಲಶೇಖರ ಚರ್ಚ್ ಪ್ರದಾನ ಧರ್ಮಗುರು ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಸೇರಿದಂತೆ ನೂರಾರು ಧರ್ಮಗುರುಗಳು, ಧರ್ಮ ಭಗಿನೀಯರು ಮತ್ತು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಈ ಭವ್ಯ ಪವಿತ್ರ ವಿಧಿಗೆ ಸಾಕ್ಷಿಯಾಗಿ ನೂತನ ಯಾಜಕರಿಗಾಗಿ ಪ್ರಾರ್ಥಿಸಿದರು.

ಯಾಜಕತ್ವ ಎಂಬುದು ದೈವಿಕ ಕೊಡುಗೆ: ಬಿಷಪ್  ಪೀಟರ್ ಪಾವ್ಲ್

ತಮ್ಮ ಪ್ರಬೋಧನೆಯಲ್ಲಿ ಬಿಷಪ್ ಅವರು ಯಾಜಕತ್ವದ ಮಹತ್ವವನ್ನು ವಿವರಿಸುತ್ತಾ, “ಯಾಜಕತ್ವ ಎಂಬುದು ದೇವರ ಅಪಾರ ಪ್ರೀತಿಯಿಂದ ಲಭಿಸುವ ಒಂದು ರಹಸ್ಯ ಮತ್ತು ದೈವಿಕ ಕೊಡುಗೆಯಾಗಿದೆ. ನೂತನ ಯಾಜಕರು ಸದಾ ಪ್ರಾರ್ಥನೆಯಲ್ಲಿ ಬೇರೂರಿ, ದೇವರ ಕೃಪೆಯೊಂದಿಗೆ ಜನಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.

ನೂತನ ಯಾಜಕರ ಕಿರು ಪರಿಚಯ ಮತ್ತು ಅವರ ಧ್ಯೇಯವಾಕ್ಯ:

ಧರ್ಮಸಭೆಯ ಸೇವೆಗೆ ಮುಡಿಪಾದ ಐವರು ನೂತನ ಯಾಜಕರ ವಿವರ ಹೀಗಿದೆ:

  1. ವಂದನೀಯ ಫಾದರ್ ಅವಿಲ್ ಸಾಂತುಮಾಯೆರ್ (ಶಿರ್ತಾಡಿ): ಇವರು ಚಾರ್ಲ್ಸ್ ಮತ್ತು ಆಂಜೆಲಿನ್ ದಂಪತಿಗಳ ಪುತ್ರ. ಧ್ಯೇಯವಾಕ್ಯ: “ಹೆದರಬೇಡ, ನಾನು ನಿನ್ನೊಂದಿಗಿದ್ದೇನೆ.”
  2. ವಂದನೀಯ ಫಾದರ್ ಡೆನ್ಜಿಲ್ ರೊಡ್ರಿಗಸ್ (ನೈನಾಡ್): ಇವರು ಡೆನಿಸ್ ಮತ್ತು ಎಲಿಜಾ ರೊಡ್ರಿಗಸ್ ಅವರ ಪುತ್ರ. ಧ್ಯೇಯವಾಕ್ಯ: “ಎಲ್ಲವನ್ನೂ ಪ್ರೀತಿಯಿಂದ ಮಾಡಿ.”
  3. ವಂದನೀಯ ಫಾದರ್ ಜೀವನ್ ಡಿಸೋಜ (ಬೇಳಾ): ಜಾನ್ ಮತ್ತು ಐರಿನ್ ಡಿಸೋಜ ದಂಪತಿಗಳ ಪುತ್ರ. ಧ್ಯೇಯವಾಕ್ಯ: “ಎಲ್ಲರಿಗೂ ಜೀವವು ದೊರೆಯುವಂತಾಗಲಿ.”
  4. ವಂದನೀಯ ಫಾದರ್ ಜೋಯಲ್ ಮೊಂತೇರೊ (ಕುಲಶೇಖರ): ವಿಕ್ಟರ್ ಜಾನ್ ಮತ್ತು ಪ್ರಮಿಳಾ ಮೊಂತೇರೊ ದಂಪತಿಗಳ ಪುತ್ರ. ಧ್ಯೇಯವಾಕ್ಯ: “ನನ್ನ ಚಿತ್ತವನ್ನಲ್ಲ, ನನ್ನನ್ನು ಕಳುಹಿಸಿದವರ ಚಿತ್ತವನ್ನು ಮಾಡಲು ಬಂದಿದ್ದೇನೆ.”
  5. ವಂದನೀಯ ಫಾದರ್ ಲಾಯ್ಡ್ ರೋಹನ್ ಡಿಸೋಜ (ಮಡಂತ್ಯಾರು): ಇವರು ಲಾರೆನ್ಸ್ ಮತ್ತು ರೀಟಾ ಡಿಸೋಜ ದಂಪತಿಗಳ ಪುತ್ರ. ಧ್ಯೇಯವಾಕ್ಯ: “ನನಗೆ ಶಕ್ತಿಯನ್ನು ನೀಡುವವರಿಂದ ನಾನು ಎಲ್ಲವನ್ನೂ ಮಾಡಬಲ್ಲೆ.”

ಸನ್ಮಾನ ಮತ್ತು ಕೃತಜ್ಞತೆ:

ಬಲಿಪೂಜೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿಷಪ್ ಅವರು ನೂತನ ಯಾಜಕರನ್ನು ಮತ್ತು ಅವರ ತ್ಯಾಗಮಯಿ ಪೋಷಕರನ್ನು ಸನ್ಮಾನಿಸಿದರು. ನೂತನ ಯಾಜಕರ ಪರವಾಗಿ ವಂದನೀಯ ಫಾದರ್ ಜೀವನ್ ಡಿಸೋಜ ಅವರು ತಮಗೆ ತರಬೇತಿ ನೀಡಿದ ಗುರುಗಳಿಗೆ ಮತ್ತು ಪ್ರಾರ್ಥಿಸಿದ ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕುಲಶೇಖರ ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಮತ್ತು ಮಂಗಳ ಜ್ಯೋತಿ ಸಂಸ್ಥೆಯ ವಂದನೀಯ ಫಾದರ್ ರೋಹಿತ್ ಡಿಕೋಸ್ಟಾ ಸಮಾರಂಭದ ವ್ಯವಸ್ಥೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಈ ಐವರು ನೂತನ ಯಾಜಕರ ಸೇರ್ಪಡೆಯಿಂದ ಮಂಗಳೂರು ಧರ್ಮಕ್ಷೇತ್ರದ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.

You may also like

News

SJEC’s Nikhil A. Poojary to Represent India at International Yoga Championship

Saint Joseph Engineering College (SJEC) Vamanjoor has added another feather to its cap with the outstanding achievement of Nikhil A.
News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ

You cannot copy content of this page