August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸುರತ್ಕಲ್ ಕೊಲೆ ಮತ್ತು ದರೋಡೆ ಪ್ರಕರಣ – 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರಾಜಸ್ಥಾನ ಮೂಲದ ಆರೋಪಿಯ ಬಂಧನ

ಕಳೆದ ಹನ್ನೆರಡು ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟುವಿನಲ್ಲಿ ನಡೆದಿದ್ದ ವೃದ್ಧೆಯ ಭೀಕರ ಕೊಲೆ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಸುರತ್ಕಲ್ ಪೊಲೀಸರು ಹಾಸನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ:

2014 ಫೆಬ್ರವರಿ 8ರಂದು ಕುಳಾಯಿ ಹೊಸಬೆಟ್ಟುವಿನ ನಿವಾಸಿ ಸುಮತಿ ಪ್ರಭು ಎಂಬವರನ್ನು ಅವರ ನಿವಾಸದಲ್ಲೇ ಕುತ್ತಿಗೆ ಸೀಳಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಹಂತಕರು ಅವರ ಮೈಮೇಲಿದ್ದ ಸುಮಾರು 192 ಗ್ರಾಂ (24 ಪವನ್) ಬಂಗಾರದ ಆಭರಣಗಳನ್ನು (ಮೌಲ್ಯ ಸುಮಾರು ₹3,80,000/-) ದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಲೆಮರೆಸಿಕೊಂಡಿದ್ದ ಆರೋಪಿ:

ಈ ಪ್ರಕರಣದಲ್ಲಿ ರಾಜಸ್ಥಾನ ಮೂಲದ ಶಿವರಾಮ್, ಬಹುದ್ದೂರ್ ಸಿಂಗ್ ಮತ್ತು ಉತ್ತರ ಪ್ರದೇಶದ ಶಹನ್ವಾಜ್ ಎಂಬವರನ್ನು ಈ ಹಿಂದೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ಎರಡನೇ ಆರೋಪಿಯಾದ ರಾಜಸ್ಥಾನದ ಬಹುದ್ದೂರ್ ಸಿಂಗ್ @ ಬುಯ್ಯ ಕಳೆದ ಆರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರಂಟ್ ಮತ್ತು ಉದ್ಘೋಷಣೆಯನ್ನು ಹೊರಡಿಸಿತ್ತು.

 

ಪೊಲೀಸರ ಕಾರ್ಯಾಚರಣೆ:

ಆರೋಪಿಯು ತನ್ನ ಮೂಲ ವಿಳಾಸದಲ್ಲಿ ಇಲ್ಲದ ಕಾರಣ ಆತನ ಪತ್ತೆಗಾಗಿ ಸುರತ್ಕಲ್ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಂಡವು, 2026 ಮೇ 3ರಂದು ಭಾನುವಾರ ಮಧ್ಯಾಹ್ನ 1:00 ಗಂಟೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿದೆ.

ಬಂಧಿತ ಆರೋಪಿ:

* ಬಹುದ್ದೂರ್ ಸಿಂಗ್ @ ಬುಯ್ಯ (32 ವರ್ಷ), ರಾಜಸ್ಥಾನ ರಾಜ್ಯದ ಭರತ್ ಪುರ ಜಿಲ್ಲೆಯ ಭಯಾನ ತಾಲೂಕಿನ ನಿವಾಸಿ.

ತಂಡದ ಸಾಧನೆ:

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸುರತ್ಕಲ್ ಠಾಣೆಯ ಹೆಚ್.ಸಿ. ಅಜಿತ್ ಮ್ಯಾಥ್ಯು, ಸಿಪಿಸಿಗಳಾದ ಸುನೀಲ್ ಕುಸನಾಳ ಮತ್ತು ಮೋಹನ್ ಅವರು ಈ ಕಾರ್ಯಾಚರಣೆ ನಡೆಸಿದ್ದಾರೆ. ಇವರಿಗೆ ಹೆಚ್.ಸಿ. ರಾಜೇಂದ್ರ ಪ್ರಸಾದ್ ಮತ್ತು ಪಿಸಿ ಸತೀಶ್ ಸಹಕರಿಸಿದ್ದಾರೆ. ಬಂಧಿತ ಆರೋಪಿಯನ್ನು ಇಂದು ಮೇ 4ರಂದು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page