August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಮಿಂಚುತ್ತಿರುವ ಬೈಂದೂರು ಯಡ್ತರೆಯ ಆಶಾ ವೀಣಾ ಡಾಯಸ್ ಅವರಿಗೆ ‘ಮಲ್ಟಿ ಟ್ಯಾಲೆಂಟ್ ಅವಾರ್ಡ್’

ಸಾಧನೆಯ ಶಿಖರಕ್ಕೇರಿದ ಬೈಂದೂರಿನಬಹುಮುಖ ಪ್ರತಿಭೆ

ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿಗೆ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ ಉಡುಪಿ ಜಿಲ್ಲೆಯ ಬೈಂದೂರು ಯಡ್ತರೆ ನಿವಾಸಿ ಹೆಮ್ಮೆಯ ಆಶಾ ವೀಣಾ ಡಾಯಸ್.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಿಂದಲೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು, ಇಂದು ಸಮಾಜಕ್ಕೆ ಪ್ರೇರಣೆಯ ಚಿಲುಮೆ. ಯಾವುದೇ ಜಾತಿ–ಧರ್ಮದ ಭೇದಭಾವವಿಲ್ಲದೆ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆತು ಬದುಕುತ್ತಿರುವ ತೆರೆಮರೆಯ ಸಾಧಕಿಯಾಗಿದ್ದಾರೆ.

ಪ್ರಶಸ್ತಿಗಳ ಸರಮಾಲೆ:

ಸತತ ಎರಡು ಬಾರಿ ಐಬಿಬಿಎಸ್ ಬೆಸ್ಟ್ ಟೀಚರ್ ಅವಾರ್ಡ್ ಮುಡಿಗೇರಿಸಿಕೊಂಡಿರುವ ಆಶಾ ಅವರು, ಇದೀಗ ಮಲ್ಟಿ ಟ್ಯಾಲೆಂಟ್ ಅವಾರ್ಡ್ 2025-26 ಗೌರವಕ್ಕೂ ಪಾತ್ರರಾದರು. ರಾಜ್ಯ ಶಿಕ್ಷಕರ ಪರಿಷತ್ತು ಮೈಸೂರು ಇವರು ಆಯೋಜಿಸಿದ್ದ ಆಶುಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟದ TOP – 10 ರಲ್ಲಿ ವಿಜೇತೆಯಾಗಿ ಆಯ್ಕೆಯಾಗಿರುವುದು ಇವರ ವಾಗ್ವೈಖರಿಗೆ ಸಾಕ್ಷಿ. ಸುಮಾರು 120ಕ್ಕೂ ಅಧಿಕ ಭಾಷಣ, 40ಕ್ಕೂ ಹೆಚ್ಚು ಆಶುಭಾಷಣ ಹಾಗೂ 30ಕ್ಕೂ ಹೆಚ್ಚು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ಇವರು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬೈಂದೂರಿನ ಕೀರ್ತಿಯನ್ನು ಬೆಳಗಿದ್ದಾರೆ.

ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿ:

ಕಳೆದ 18 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೇವಲ ಪಾಠಕ್ಕಷ್ಟೇ ಸೀಮಿತವಾಗದೆ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಮಾತೆಯಾಗಿದ್ದಾರೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಗುವ ಸರಕಾರಿ ಸೌಲಭ್ಯಗಳು ಹಾಗೂ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿ ಅನೇಕ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಸರೆಯಾಗಿದ್ದಾರೆ. ಗ್ರಾಮದ ಸಾಮಾನ್ಯ ಜನರಿಗೆ ಸರಕಾರಿ ಸೌಲಭ್ಯಗಳನ್ನು ಕೊಡಿಸುವಲ್ಲಿ ಇವರ ಸಹಾಯ ಹಸ್ತ ಸದಾ ಚಾಚಿಯೇ ಇರುತ್ತದೆ.

ಸಾಹಿತ್ಯ ಮತ್ತು ಕಲೆ:

ಬರವಣಿಗೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಆಶಾ ಅವರು ಮಮತೆಯ ಮಂದಾರ ಹಾಗೂ ಬರಿದಾಗದ ಚೆಲುವೆ ಎಂಬ ಅದ್ಭುತ ಕೃತಿಗಳನ್ನು ರಚಿಸಿದ್ದಾರೆ. ಇವರ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ ಗೆದ್ದಿವೆ. 15 ವರ್ಷಗಳಿಂದ ಕಾರ್ಯಕ್ರಮ ನಿರೂಪಕಿಯಾಗಿ ಕೂಡ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ಇವರು ಪತ್ರಿಕೋದ್ಯಮದಲ್ಲಿ ಪದವಿ ಹಾಗೂ ಬಿ.ಎಡ್‌ನಲ್ಲಿ ಡಿಸ್ಟಿಂಕ್ಷನ್ ಪಡೆದ ಪ್ರತಿಭಾವಂತೆ.

ಕೃತಜ್ಞತಾ ಭಾವ:

ತನ್ನ ಈ ಎಲ್ಲಾ ಸಾಧನೆಗೆ ಮಾತೆ ಮರಿಯಳ ಆಶೀರ್ವಾದವೇ ಕಾರಣ ಎಂದು ನಂಬಿರುವ ಇವರು, ತಾಯಿ, ತಂದೆ, ಸಹೋದರ, ಅತ್ತಿಗೆ ಹಾಗೂ ತನ್ನ ಪ್ರತಿಭೆಯನ್ನು ನಂಬಿ ಪ್ರೋತ್ಸಾಹಿಸಿದ ಮಂಗಳೂರು ಧರ್ಮಕ್ಷೇತ್ರದ ಬೋಂದೆಲ್ ಚರ್ಚ್ ನ ವಂದನೀಯ ಫಾದರ್ ಆ್ಯಂಡ್ರು ಡಿಸೋಜ, ಶಿವಮೊಗ್ಗ ಧರ್ಮಕ್ಷೇತ್ರದ ವಂದನೀಯ ಫಾದರ್ ಪಿಯುಸ್ ಡಿಸೋಜ, ತಾಯಿರ ಕಲಂದರ್, ಜ್ಯೋತಿ ಫೆರ್ನಾಂಡಿಸ್, ಆರ್ಥರ್ ಡಾಯಸ್, ಸ್ಟೀಫನ್ ರಾಜ್ ಫೆರ್ನಾಂಡಿಸ್, ಗ್ಲ್ಯಾಡಿಸ್ ರೊಡ್ರಿಗಸ್, ವೀಣಾ ಫೆರ್ನಾಂಡಿಸ್, ಜ್ಯೋತಿ ಫೆರ್ನಾಂಡಿಸ್, ಜೆಸಿಂತಾ ಡಾಯಸ್, ಮೆಲ್ವಿನ್ ಡಾಯಸ್, ನಾಗರಾಜ ಬುಡ್ಕು ರಾಹುತಿನ ಕಟ್ಟೆ, ರಂಜಿತಾ ಹೆಗ್ಡೆ ಸೇರಿದಂತೆ ಅನೇಕ ಹಿತೈಷಿಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಬೈಂದೂರಿನ ಯಡ್ತರೆ ಗ್ರಾಮದ ರಾಹುತಿನ ಕಟ್ಟೆ ಭಾಗದ ಈ ಬಹುಮುಖ ಪ್ರತಿಭೆ ಇನ್ನೂ ಎತ್ತರದ ಶಿಖರಗಳನ್ನು ಏರಲಿ, ಅವರ ಎಲ್ಲಾ ಕನಸುಗಳು ನನಸಾಗಲಿ ಎನ್ನುವುದು ಯಡ್ತರೆ ಗ್ರಾಮಸ್ಥರ ಆಶಯ.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page