ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ MLC ಐವನ್ ಡಿಸೋಜ
ಕರಾವಳಿ ಕರ್ನಾಟಕದ ಜನರ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ, ಹೋರಾಟ ಸಮಿತಿಯ ಸಂಚಾಲಕ ಹಾಗೂ ಶಾಸಕ MLC ಐವನ್ ಡಿಸೋಜ ಅವರು ಇಂದು ಮೇ 15ರಂದು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್.ವಿ. ಅವರನ್ನು ಭೇಟಿ ಮಾಡಿ ವಿಸ್ತೃತ ಚರ್ಚೆ ನಡೆಸಿದರು.

ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯದ ಗುರಿ:
ಕರಾವಳಿ ಭಾಗದ ಜನರು ಸಣ್ಣಪುಟ್ಟ ಕಾನೂನು ಹೋರಾಟಗಳಿಗೂ ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಕಡಿಮೆ ಖರ್ಚಿನಲ್ಲಿ, ಶೀಘ್ರವಾಗಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಚಾರಿ ಪೀಠದ ರಚನೆ ಅನಿವಾರ್ಯವಾಗಿದೆ. ಸಮಯ ಮತ್ತು ಹಣದ ಉಳಿತಾಯದೊಂದಿಗೆ ಜನಸಾಮಾನ್ಯರ ಹಕ್ಕನ್ನು ಎತ್ತಿ ಹಿಡಿಯಲು ಈ ಪೀಠ ಸಹಕಾರಿಯಾಗಲಿದೆ. ಸರಕಾರದ ನಿರ್ದೇಶನದಂತೆ ಪೀಠಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ತಕ್ಷಣವೇ ಒದಗಿಸಿಕೊಡುವಂತೆ MLC ಐವನ್ ಡಿಸೋಜ ಅವರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.


ಸೌಲಭ್ಯಗಳ ಬಗ್ಗೆ ಚರ್ಚೆ:
ಪೀಠದ ಕಾರ್ಯಕಲಾಪಗಳಿಗಾಗಿ ಆಗಮಿಸುವ ನಾಲ್ವರು ನ್ಯಾಯಾಧೀಶರ ವಾಸ್ತವ್ಯಕ್ಕೆ ಬೇಕಾದ ವಸತಿ ಸೌಕರ್ಯ ಹಾಗೂ ಇತರ ತಾಂತ್ರಿಕ ಅಗತ್ಯಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಮಂಗಳೂರಿನಲ್ಲಿರುವ ಸುಮಾರು 165 ಪಾಳುಬಿದ್ದಿರುವ ಸರಕಾರಿ ವಸತಿಗೃಹಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದ ಶಾಸಕರು “ಸರಕಾರದ ಹಣ ಪೋಲಾಗದಂತೆ ತಡೆಯಲು ಈ ವಸತಿಗೃಹಗಳನ್ನು ಕೂಡಲೇ ದುರಸ್ತಿಗೊಳಿಸಿ, ಸಂಚಾರಿ ಪೀಠದ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.

ಸಮಿತಿ ರಚನೆಗೆ ಮನವಿ:
ಈ ಯೋಜನೆಯನ್ನು ಕಾಲಮಿತಿಯಲ್ಲಿ ಜಾರಿಗೆ ತರಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಬೇಕೆಂದು ಅವರು ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದ್ದು, ವಿವಿಧ ಇಲಾಖೆಗಳ ಮೂಲಕ ಶೀಘ್ರವಾಗಿ ವರದಿ ಪಡೆದು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಅವರು ಉಪಸ್ಥಿತರಿದ್ದರು.



