July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮತಾಂತರ ವಿರೋಧಿ ಕಾಯ್ದೆ ರದ್ದತಿಗೆ ಆಗ್ರಹ: ಮೇ 30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕ್ರೈಸ್ತ ಸಂಘಟನೆಗಳ ಬೃಹತ್ ಪ್ರತಿಭಟನೆ

ಸಂಪೂರ್ಣ ಬೆಂಬಲವನ್ನು ಘೋಷಿಸಿದ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚಸ್’ (DAPC)

ಕರ್ನಾಟಕದ ಮತಾಂತರ ವಿರೋಧಿ ಕಾಯ್ದೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಹಾಗೂ ಕ್ರೈಸ್ತ ಸಮುದಾಯದ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಬರುವ ಮೇ 30ರಂದು ಬೆಳಿಗ್ಗೆ 11:00 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಕ್ರೈಸ್ತ ಪಂಗಡಗಳು ಮತ್ತು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ಆಯೋಜಿಸಲಾಗಿದೆ. ಈ ಮಹಾ ಪ್ರತಿಭಟನೆಗೆ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚಸ್’ (DAPC) ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.

ಈ ಕುರಿತು ಮಾತನಾಡಿರುವ ಆರ್ಚ್‌ಬಿಷಪ್ ಡಾ. ವಿನೋದ್ ಎಂ. ಚಾಕೊ ಅವರು, ಪ್ರಸ್ತುತ ರಾಜ್ಯ ಸರ್ಕಾರ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವುದಕ್ಕೆ ಸಮುದಾಯ ಕೃತಜ್ಞತೆ ಸಲ್ಲಿಸುತ್ತದೆ. ಆದರೆ, ಮತಾಂತರ ವಿರೋಧಿ ಕಾಯ್ದೆಯನ್ನು ಕೆಲವು ಧಾರ್ಮಿಕ ಮೂಲಭೂತವಾದಿ ಗುಂಪುಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ರಾಜ್ಯದಾದ್ಯಂತ ಚರ್ಚುಗಳು, ಪಾಸ್ಟರ್ಗಳು, ಫಾದರ್ಗಳು, ಭಗಿನಿಯರು ಹಾಗೂ ಶೈಕ್ಷಣಿಕ ಮತ್ತು ಸೇವಾ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸ್ವೀಕಾರಾರ್ಹ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಎತ್ತಿಹಿಡಿಯಲು ಎಲ್ಲಾ ಪ್ರೊಟೆಸ್ಟೆಂಟ್, ಪೆಂತೆಕೋಸ್ತ್ ಮತ್ತು ಸ್ವತಂತ್ರ ಚರ್ಚುಗಳು ಒಟ್ಟಾಗಿ ಧ್ವನಿ ಎತ್ತಬೇಕೆಂದು ಅವರು ಕರೆ ನೀಡಿದ್ದಾರೆ.

ಸರ್ಕಾರದ ಭರವಸೆ ಈಡೇರಿಲ್ಲರೆವರೆಂಡ್ ಸುನಿಲ್ ವಿ. ಜೇಕಬ್ ಬೇಸರ:

ಝೋನಲ್ ಬಿಷಪ್ ರೆವರೆಂಡ್ ಸುನಿಲ್ ವಿ. ಜೇಕಬ್ ಮಾತನಾಡಿ, ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಧರ್ಮಾಂತರ ವಿರೋಧಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಚಾರದ ವೇಳೆ ಭರವಸೆ ನೀಡಿತ್ತು. ಆದರೆ ಹೊಸ ಸರ್ಕಾರ ರಚನೆಯಾಗಿ ಮೂರು ವರ್ಷಗಳಾಗುತ್ತಾ ಬಂದರೂ ಇಂದಿಗೂ ಕಾಯ್ದೆಯನ್ನು ರದ್ದುಪಡಿಸದಿರುವುದು ವಿಷಾದನೀಯ ಎಂದರು. ಈಗಲಾದರೂ ಕ್ರೈಸ್ತ ಸಮುದಾಯ ಒಗ್ಗಟ್ಟಿನಿಂದ ನಿಂತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸಾಮೂಹಿಕ ನೇತೃತ್ವದಲ್ಲಿ ಪ್ರತಿಭಟನೆ:

ಈ ಐತಿಹಾಸಿಕ ಪ್ರತಿಭಟನೆಯು ಯಾವುದೇ ಒಂದು ಸಂಸ್ಥೆಗೆ ಸೀಮಿತವಾಗಿರದೆ, ಸಾಮೂಹಿಕ ನೇತೃತ್ವದಲ್ಲಿ ನಡೆಯುತ್ತಿದೆ. ಬೆಂಗಳೂರು ಮಹಾಧರ್ಮಪ್ರಾಂತ್ಯ, ಕ್ಯಾಥೋಲಿಕ್ ಧರ್ಮಪ್ರಾಂತ್ಯಗಳು, ಪೆಂತೆಕೋಸ್ತ್ ಮತ್ತು ಸ್ವತಂತ್ರ ಚರ್ಚುಗಳು, ಇಂಡಿಯನ್ ಕ್ರಿಸ್ತಿಯನ್ ಯುನಿಟಿ ಫೊರಮ್, ಕರ್ನಾಟಕ ಕ್ರೈಸ್ತ ಸಂಘಟನೆ, ಅಹಿಂದ ಕ್ರಿಸ್ಟಿಯನ್ ವಿಭಾಗ, ಸಿ.ಎಸ್.ಐ (CSI), ಏಂಜೆಲಿಕನ್, ಸೆವೆಂತ್ ಡೇ ಅಡ್ವೆಂಟಿಸ್ಟ್ ಸೇರಿದಂತೆ ರಾಜ್ಯದ ಪ್ರಮುಖ ಕ್ರೈಸ್ತ ಸೇವಾ ಟ್ರಸ್ಟ್‌ಗಳು ಮತ್ತು ಪಾಸ್ಟರ್ಸ್ ಫೆಲೋಶಿಪ್‌ಗಳು ಈ ಹೋರಾಟಕ್ಕೆ ಕೈಜೋಡಿಸಿವೆ.

ರಾಜ್ಯದ ಎಲ್ಲಾ ಚರ್ಚ್ ನಾಯಕರು, ವಿಶ್ವಾಸಿಗಳು ಮತ್ತು ಪಾಸ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಾಂತಿಯುತ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು DAPC ಮನವಿ ಮಾಡಿದೆ.

You may also like

News

SJEC’s Nikhil A. Poojary to Represent India at International Yoga Championship

Saint Joseph Engineering College (SJEC) Vamanjoor has added another feather to its cap with the outstanding achievement of Nikhil A.
News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ

You cannot copy content of this page