July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ; ಸಂಘ-ಸಂಸ್ಥೆಗಳೊಂದಿಗೆ MLC ಐವನ್ ಡಿಸೋಜ ಸಮಾಲೋಚನೆ

ಕರಾವಳಿ ಕರ್ನಾಟಕದ ಹಲವು ವರ್ಷಗಳ ದೀರ್ಘಕಾಲದ ಬೇಡಿಕೆಯಾದ ‘ಹೈಕೋರ್ಟ್ ಸಂಚಾರಿ ಪೀಠ’ ಸ್ಥಾಪನೆಗೆ ಸಂಬಂಧಿಸಿದಂತೆ, ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರ ಸಮಾಲೋಚನಾ ಸಭೆ ಜರುಗಿತು.

ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಸೋಸಿಯೇಶನ್ ಸೇರಿದಂತೆ ಕರಾವಳಿಯ ನೂರಾರು ಸಂಘಟನೆಗಳು ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಿರಂತರವಾಗಿ ಮನವಿ ನೀಡುತ್ತಾ ಬಂದಿದ್ದವು. ಈ ಹಿಂದೆ MLC ಐವನ್ ಡಿಸೋಜ ಅವರ ನೇತೃತ್ವದಲ್ಲಿ ಹೋರಾಟ ಸಮಿತಿಯನ್ನು ರಚಿಸಿ, ಹಲವು ಬಾರಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಇತ್ತೀಚೆಗೆ ಈ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ ಬೆನ್ನಲ್ಲೇ, ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಕರಾವಳಿಯಲ್ಲಿ ಸಂಚಾರಿ ಪೀಠ ಸ್ಥಾಪಿಸಲು ಸಕಾರಾತ್ಮಕ ಒಲವು ತೋರಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ವಿವಿಧ ಸಂಘಟನೆಗಳ ಬೆಂಬಲ – ಪೂರ್ವ ಸಿದ್ಧತೆ

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ 15ಕ್ಕೂ ಹೆಚ್ಚು ಪ್ರಮುಖ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ರಚನೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಾಧೀಶರು ಮಂಗಳೂರಿಗೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ಮತ್ತು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಮುಮ್ತಾಜ್ ಅಹ್ಮದ್ ಮುನೀರ್ ಹಾಗೂ ಎಸ್. ರಮೇಶ್ ರಾಜ್, ಎಂ.ಡಿ.ಎಸ್.ಎ. ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರಾನಾಥ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಕಾರ್ಯದರ್ಶಿ ಡಾ. ಬೋಯಿನಾ ಸಾಲ್ಯಾನ್, ಡಾ. ಯುನಿಸೋನ್, ಡಾ. ಚಿತ್ ಭಟ್, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್, ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಜೇಶ್, ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷ ವಿನೋದ್, ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಅರುಣ್ ರಾಜ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ. ರಾಜ್ ಗೌಡಾಲ್, ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ರಾವ್, ಅಮೃತ ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ್ ಪಿ.ವಿ., ಇಂಟೆಕ್ ಅಧ್ಯಕ್ಷ ಮನೋಹರ್ ಶೆಟ್ಟಿ ಹಾಗೂ ಯಾಕೋಬ್ ದಯಾನಾಯಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಮೂಲಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಸೂಚನೆ:

“ಕರಾವಳಿ ಭಾಗದ ಸಾರ್ವಜನಿಕರಿಗೆ ಸಂಬಂಧಿಸಿದ ಸುಮಾರು 10,000ಕ್ಕೂ ಹೆಚ್ಚು ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ನ್ಯಾಯಕ್ಕಾಗಿ ಕರಾವಳಿ ಭಾಗದಿಂದ ಬೆಂಗಳೂರಿಗೆ ಅಲೆಯುವುದರಿಂದ ಸಾರ್ವಜನಿಕರ ಸುಮಾರು 400 ಕೋಟಿ ರೂಪಾಯಿಗಳಷ್ಟು ಹಣ ಹಾಗೂ ಸಮಯ ಅನಾವಶ್ಯಕವಾಗಿ ವ್ಯಯವಾಗುತ್ತಿದೆ. ಈ ಸಮಸ್ಯೆಗೆ ಶೀಘ್ರವೇ ಮುಕ್ತಿ ಸಿಗಲಿದೆ” ಎಂದು MLC ಐವನ್ ಡಿಸೋಜ ತಿಳಿಸಿದರು. ಇದೇ ಸಂದರ್ಭದಲ್ಲಿ, ಸಂಚಾರಿ ಪೀಠಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ MLC ಐವನ್ ಡಿಸೋಜ ಅವರು ಸೂಚನೆ ನೀಡಿದ್ದಾರೆ.

You may also like

News

SJEC’s Nikhil A. Poojary to Represent India at International Yoga Championship

Saint Joseph Engineering College (SJEC) Vamanjoor has added another feather to its cap with the outstanding achievement of Nikhil A.
News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ

You cannot copy content of this page