September 22, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರಾಜ್ಯಸಭಾ ಚುನಾವಣೆ – ಕಾಂಗ್ರೆಸ್‌ನಿಂದ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಟಿಕೆಟ್? ಮಂಗಳೂರಿನಿಂದ ನವೀನ್ ಡಿಸೋಜ ಹೆಸರು ಮುಂಚೂಣಿಗೆ!

ಮುಂದಿನ ತಿಂಗಳು ತೆರವಾಗಲಿರುವ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ, ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದಾದ ಮೂರು ಸ್ಥಾನಗಳ ಹಂಚಿಕೆ ಕುರಿತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗಳು ಆರಂಭವಾಗಿವೆ. ಈ ಪೈಕಿ ಒಂದು ಸ್ಥಾನವನ್ನು ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿಡಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದ್ದು, ಮಂಗಳೂರಿನ ಹಿರಿಯ ಕಾಂಗ್ರೆಸ್ ಮುಖಂಡ ನವೀನ್ ಡಿಸೋಜ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ರಾಜ್ಯಸಭೆಯ ಒಟ್ಟು ನಾಲ್ಕು ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದ್ದು, ಜೂನ್ 8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ಚುನಾವಣಾ ಆಯೋಗ ಈಗಾಗಲೇ ಪ್ರಕಟಿಸಿದೆ. ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಮೂರು ಸ್ಥಾನಗಳನ್ನು ಸುಲಭವಾಗಿ ತನ್ನದಾಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಸ್ಥಾನ ಫಿಕ್ಸ್:

ಮೂರೂ ಸ್ಥಾನಗಳ ಪೈಕಿ ಒಂದು ಸ್ಥಾನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಮ್ಮೆ ಸಿಗುವುದು ಬಹುತೇಕ ಖಚಿತವಾಗಿದೆ. ಇನ್ನುಳಿದ ಎರಡು ಸ್ಥಾನಗಳ ಪೈಕಿ ಒಂದನ್ನು ಈ ಬಾರಿ ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಲು ಪಕ್ಷದ ಉನ್ನತ ಮೂಲಗಳು ನಿರ್ಧರಿಸಿವೆ ಎನ್ನಲಾಗಿದೆ. ಕಳೆದ ಬಾರಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಮಣೆ ಹಾಕಿದ್ದ ಕಾಂಗ್ರೆಸ್, ಈ ಬಾರಿ ಸಮುದಾಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಈ ತಂತ್ರ ರೂಪಿಸಿದೆ.

ನವೀನ್ ಡಿಸೋಜ ಪರ ಒಲವು ಏಕೆ?

ರಾಜ್ಯದಲ್ಲೇ ಅತಿ ಹೆಚ್ಚು ಕ್ರಿಶ್ಚಿಯನ್ ಜನಸಂಖ್ಯೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ನಿಷ್ಠಾವಂತ ನಾಯಕನಿಗೆ ಈ ಬಾರಿ ಅದೃಷ್ಟ ಒಲಿಯುವ ಸಾಧ್ಯತೆ ಇದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿರಿಯ ಕಾರ್ಪೊರೇಟರ್ ಆಗಿ ಮತ್ತು ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ನವೀನ್ ಡಿಸೋಜ ಅವರ ಹೆಸರು ಮುಂಚೂಣಿಯಲ್ಲಿದೆ.

ಹೈಕಮಾಂಡ್ ಗಮನ ಸೆಳೆದ ಕೇರಳ ಚುನಾವಣೆ:

ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನವೀನ್ ಡಿಸೋಜ ಅವರು ಪಕ್ಷದ ಪರವಾಗಿ ನಡೆಸಿದ ಸದ್ದಿಲ್ಲದ ಹಾಗೂ ಚುರುಕಿನ ಕಾರ್ಯಾಚರಣೆ ಕಾಂಗ್ರೆಸ್ ಹೈಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಚಾರದ ಹಪಾಹಪಿಯಿಲ್ಲದೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಅವರ ಶಿಸ್ತು ಈ ಬಾರಿ ಅವರಿಗೆ ಸಂಸತ್ತಿನ ಮೇಲ್ಮನೆ (ರಾಜ್ಯಸಭೆ) ಪ್ರವೇಶಿಸಲು ದಾರಿಯಾಗಬಹುದು ಎನ್ನಲಾಗುತ್ತಿದೆ.

ಕಾಂಗ್ರೆಸ್ ಪಾಲಾಗಲಿರುವ ಮೂರನೇ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಈಗ ತೀವ್ರಗೊಂಡಿದ್ದು, ದೆಹಲಿ ಮಟ್ಟದಲ್ಲಿ ಟಿಕೆಟ್ ಫೈನಲ್ ಮಾಡಲು ಕಸರತ್ತು ಮುಂದುವರಿದಿದೆ.

 

You may also like

News

BPL ಕುಟುಂಬಗಳಿಗೆ ಉಚಿತ ರಕ್ತ: ಮುಂದಿನ ವರ್ಷದಿಂದ ಯೋಜನೆ ಜಾರಿ – ಸಿಎ ಶಾಂತಾರಾಮ ಶೆಟ್ಟಿ

ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ BPL ಕಾರ್ಡ್‌ದಾರರಿಗೆ ಉಚಿತವಾಗಿ ರಕ್ತ ಪೂರೈಸುವ ಯೋಜನೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ
News

Free Speech and Hearing Camp inaugurated at Father Muller

A Free Speech and Hearing Camp, organized by Father Muller Medical College Hospital on the occasion of International Hearing-Impaired Week,

You cannot copy content of this page