ಭಾರತೀಯ ಕ್ರೈಸ್ತರ ದಿನಾಚರಣೆ: DAPCಯಿಂದ ರಾಜ್ಯಾದ್ಯಂತ ಬೃಹತ್ ರಕ್ತದಾನ ಶಿಬಿರ – ಶುಭ ಹಾರೈಸಿದ ಸಿಎಂ ಡಿ.ಕೆ. ಶಿವಕುಮಾರ್
ರಾಜ್ಯದಾದ್ಯಂತ ರಕ್ತದಾನ ಮಾಡಲು ಹರಿದುಬಂದ DAPC ಸ್ವಯಂಸೇವಕರು

ಭಾರತೀಯ ಕ್ರೈಸ್ತ ಸಮುದಾಯದ ಐತಿಹಾಸಿಕ ಪರಂಪರೆ, ದೇಶಭಕ್ತಿ ಹಾಗೂ ಸಮಾಜಸೇವೆಯನ್ನು ಸ್ಮರಿಸುವ ‘ಭಾರತೀಯ ಕ್ರೈಸ್ತರ ದಿನಾಚರಣೆ’ಯ (Indian Christian Day) ಅಂಗವಾಗಿ ರಾಜ್ಯಾದ್ಯಂತ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಡಿಯೋಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ಹಾಗೂ ಕರ್ನಾಟಕದ ಎಲ್ಲಾ ಜಿಲ್ಲಾ ಪಾಸ್ಟರ್ಸ್ ಫೆಲೋಶಿಪ್‌ಗಳ ಜಂಟಿ ಆಶ್ರಯದಲ್ಲಿ ಸ್ಥಳೀಯ ರಕ್ತ ಬ್ಯಾಂಕ್‌ಗಳ ಸಹಭಾಗಿತ್ವದೊಂದಿಗೆ ಈ ಮಹತ್ವದ ಸಮಾಜಸೇವಾ ಅಭಿಯಾನ ಆಯೋಜನೆಗೊಂಡಿದೆ.

ಪ್ರತಿವರ್ಷ ಜುಲೈ 3ರಂದು ಆಚರಿಸಲಾಗುವ ಈ ದಿನವು, ಕ್ರಿ.ಶ. 52ರಲ್ಲಿ Saint Thomas the Apostle ಅವರು ಭಾರತಕ್ಕೆ ಆಗಮಿಸಿ ಸುವಾರ್ತೆ ಸಾರಿದ ಐತಿಹಾಸಿಕ ಘಟನೆಯ ನೆನಪಾಗಿದೆ. ಶಿಕ್ಷಣ, ಆರೋಗ್ಯ, ಸಮಾಜಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಕ್ರೈಸ್ತ ಸಮುದಾಯ ನೀಡಿರುವ ಅನನ್ಯ ಕೊಡುಗೆಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತಿದ್ದು, ಈ ಬಾರಿ ‘ರಕ್ತದಾನ-ಮಹಾದಾನ’ ಎಂಬ ಧ್ಯೇಯದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ಮುಖ್ಯಮಂತ್ರಿಗಳಿಂದ ಶುಭ ಹಾರೈಕೆ:
ಮೈಸೂರು ಜಿಲ್ಲಾ ಬಿಷಪ್ ಸುನಿಲ್ ವಿ. ಜೇಕಬ್ ಅವರ ನೇತೃತ್ವದ DAPC ನಿಯೋಗವು ಇತ್ತೀಚೆಗೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಪೂರ್ವನಿಗದಿತ ಸರ್ಕಾರಿ ಕಾರ್ಯಕ್ರಮಗಳ ಕಾರಣದಿಂದ ಸಿಎಂ ಅವರಿಗೆ ಭಾಗವಹಿಸಲು ಸಾಧ್ಯವಾಗದಿದ್ದರೂ, ರಕ್ತದಾನದಂತಹ ಮಾನವೀಯ ಸೇವಾ ಕಾರ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು. ಅಲ್ಲದೆ, ರಾಜ್ಯದ ಸಮಸ್ತ ಕ್ರೈಸ್ತ ಬಾಂಧವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಂದೇಶದ ಮೂಲಕ ರವಾನಿಸಿದ್ದಾರೆ.

ಮುಖಂಡರ ಸಂದೇಶ:
ಈ ಅಭಿಯಾನದ ಕುರಿತು ಮಾತನಾಡಿದ DAPC ಸಂಸ್ಥಾಪಕ ಅಧ್ಯಕ್ಷರಾದ ಆರ್ಚ್‌ಬಿಷಪ್ ಡಾ. ವಿನೋದ್ ಎಂ. ಚಾಕೊ ಅವರು, “ರಕ್ತದಾನವು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ಜೀವದಾನವಾಗಿದೆ. ಈ ದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾಗುವಂತೆ ರೂಪಿಸಿರುವುದು ನಮ್ಮ ಹೆಮ್ಮೆ. ಪ್ರತಿಯೊಬ್ಬ ಅರ್ಹ ನಾಗರಿಕರೂ ಇದರಲ್ಲಿ ಭಾಗಿಯಾಗಬೇಕು,” ಎಂದು ಕರೆ ನೀಡಿದರು.

ಮೈಸೂರು ಜಿಲ್ಲಾ ಬಿಷಪ್ ಸುನಿಲ್ ವಿ. ಜೇಕಬ್ ಮಾತನಾಡಿ, “ಯೇಸು ಕ್ರಿಸ್ತರು ಬೋಧಿಸಿದ ಪ್ರೀತಿ, ಕರುಣೆ ಹಾಗೂ ನಿಸ್ವಾರ್ಥ ಸೇವೆಯನ್ನು ಸಮಾಜದಲ್ಲಿ ಬಿತ್ತಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಾವು ನೀಡುವ ಒಂದು ಯೂನಿಟ್ ರಕ್ತ ಮತ್ತೊಂದು ಜೀವಕ್ಕೆ ಆಸರೆಯಾಗಬಲ್ಲದು,” ಎಂದು ಮನವಿ ಮಾಡಿದರು.


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಈ ಶಿಬಿರಗಳನ್ನು ಸ್ಥಳೀಯ ಧಾರ್ಮಿಕ ಮುಖಂಡರು, ಶಾಸಕರು ಹಾಗೂ ಜನಪ್ರತಿನಿಧಿಗಳು ಉದ್ಘಾಟಿಸಲಿದ್ದಾರೆ. ಸಮಾಜದಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಿಸುವ ಈ ರಕ್ತದಾನ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕಾಗಿ DAPC ವಿನಂತಿಸಿದೆ.




