October 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ – ಏಕಾಏಕಿ ನಿಲ್ಲಿಸಿದ ಲಾರಿಗೆ ಬೈಕ್ ಡಿಕ್ಕಿ, ಸವಾರ ಸಾವು

ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೋಲ್ನಾಡ್‌ ಬಳಿ ಜುಲಾಯ್ 2ರಂದು ಗುರುವಾರ ತಡರಾತ್ರಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಬೈಕ್ ಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಂಗಳೂರು ನಗರದ ಪಂಜಿಮೊಗರು ತ್ರಿಶಾ ಕಾಲೇಜ್ ಬಳಿಯ ಉರಂದಾಡಿ ಗುಡ್ಡೆ ಪಡುಕೋಡಿ ನಿವಾಸಿ 51 ವರ್ಷ ಪ್ರಾಯದ ಆರ್. ಸ್ವಾಮಿನಾಥನ್ ಮೃತಪಟ್ಟ ದುರ್ದೈವಿ. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಘಟನೆಯ ವಿವರ:

ಮುಂಬೈನಿಂದ ತಿರುವನಂತಪುರಕ್ಕೆ ಸರಕು ಸಾಗಿಸುತ್ತಿದ್ದ ಲಾರಿಯ ಚಾಲಕ ವಿನುರಾಜ್ ಎಂಬಾತ ಕೋಲ್ನಾಡ್‌ನ ಭಾರತ್ ಬೆಂಜ್ ಶೋ ರೂಮ್ ಬಳಿ ತಲುಪುತ್ತಿದ್ದಂತೆ ರಸ್ತೆಯಲ್ಲಿ ಏಕಾಏಕಿ ಲಾರಿಯನ್ನು ನಿಲ್ಲಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಅದೇ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುತ್ತಿದ್ದ ಬೈಕ್, ನಿಯಂತ್ರಣ ಸಿಗದೆ ಲಾರಿಯ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ವಾಮಿನಾಥನ್ ಅವರನ್ನು ತಕ್ಷಣವೇ ಸ್ಥಳೀಯರು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಸಂಚಾರ ಅಸ್ತವ್ಯಸ್ತ – ಪ್ರಕರಣ ದಾಖಲು:

ಅಪಘಾತದ ತೀವ್ರತೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಮತ್ತು ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ, ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಸ್ತೆಯ ಮಧ್ಯೆ ಬೇಜವಾಬ್ದಾರಿಯಿಂದ ಲಾರಿ ನಿಲ್ಲಿಸಿ ಅಪಘಾತಕ್ಕೆ ಕಾರಣನಾದ ಚಾಲಕ ವಿನುರಾಜ್ ವಿರುದ್ಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

You may also like

News

ಕಾಜೂರು ಮಖಾಂ ಉರೂಸ್‌ಗೆ ದಿನಾಂಕ ನಿಗದಿ – 2027ರ ಮಾರ್ಚ್ 19ರಿಂದ 28ರವರೆಗೆ

ಸಯ್ಯಿದ್ ಕುಂಬೋಳ್ ತಂಙಳ್ ಅವರಿಂದ ದಿನಾಂಕ ಘೋಷಣೆ – ಉರೂಸ್ ಪೋಸ್ಟರ್ ಬಿಡುಗಡೆ ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ ಆಧ್ಯಾತ್ಮಿಕ
News

ಮಂಡ್ಯ ASP ತಿಮ್ಮಯ್ಯ ಇನ್ನಿಲ್ಲ – ಪೊಲೀಸ್ ಇಲಾಖೆಯಲ್ಲಿ ಶೋಕ

ಉಡುಪಿ, ಮಣಿಪಾಲ, ಕೋಟದಲ್ಲೂ ಸೇವೆ ಸಲ್ಲಿಸಿದ್ದ ಅಧಿಕಾರಿ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ASP) ತಿಮ್ಮಯ್ಯ ಅವರು ಅನಾರೋಗ್ಯದಿಂದ ಇಂದು ಅಕ್ಟೋಬರ್ 10ರಂದು ಶನಿವಾರ ನಿಧನರಾಗಿದ್ದಾರೆ.

You cannot copy content of this page