ಚಾಮರಾಜನಗರ ಶೂಟೌಟ್ಗೆ AICU ಖಂಡನೆ – ಅರಣ್ಯಾಧಿಕಾರಿಗಳ ವಿರುದ್ಧದ ಎಫ್ಐಆರ್ ಸ್ವಾಗತಿಸಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಪೀಟರ್, ಆಂತೋನಿಸ್ವಾಮಿ ಹಾಗೂ ಕುಮಾರ್ ಸಾವಿನ ಸತ್ಯಾಸತ್ಯತೆ ಹೊರಬರಲು ಸಮಗ್ರ ತನಿಖೆಗೆ ಆಲ್ವಿನ್ ಡಿಸೋಜ ಪಾನೀರ್ ಒತ್ತಾಯ

ಕಾವೇರಿ ವನ್ಯಜೀವಿಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಘಟನೆ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಪ್ರಕರಣದ ಸತ್ಯಾಸತ್ಯತೆ ನಿಷ್ಪಕ್ಷಪಾತ ತನಿಖೆಯ ಮೂಲಕ ಹೊರಬರಬೇಕು ಎಂದು AICU ರಾಜ್ಯಾಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ಆಗ್ರಹಿಸಿದ್ದಾರೆ.




ಆಗಸ್ಟ್ 14ರಂದು ಶುಕ್ರವಾರ ಕಾಡಿಗೆ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಹುಡುಕಿಕೊಂಡು ತೆರಳಿದ್ದ ಆಂತೋಣಿಸ್ವಾಮಿ, ಜೋನ್ ರೋಸ್ ಪೀಟರ್ ಹಾಗೂ ಕುಮಾರ್ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮೃತ ಆಂತೋಣಿಸ್ವಾಮಿ ಅವರ ಪತ್ನಿ ಲೂರ್ದಾಮೇರಿ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅರಣ್ಯ ಸಿಬ್ಬಂದಿ ಮಲಗಿದ್ದವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ ಅರಣ್ಯಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ ಯಾವುದೇ ನಿರ್ದಿಷ್ಟ ಅರಣ್ಯ ಸಿಬ್ಬಂದಿ ಅಥವಾ ಅಧಿಕಾರಿಯ ಹೆಸರನ್ನು ಉಲ್ಲೇಖಿಸಲಾಗಿಲ್ಲ.
ಇದೇ ವೇಳೆ ಅರಣ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ, ಕಳ್ಳಬೇಟೆಗಾರರು ಬಂದೂಕುಗಳೊಂದಿಗೆ ಅರಣ್ಯ ಪ್ರದೇಶ ಪ್ರವೇಶಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ಎರಡು ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದಾಗ, ಆಗಸ್ಟ್ 15ರಂದು ಶನಿವಾರ ಬೆಳಗಿನ ಜಾವ 5ರಿಂದ 5.30ರ ವೇಳೆಗೆ ಪೊದೆ ಹಾಗೂ ಕಲ್ಲುಬಂಡೆಗಳ ನಡುವೆ ಅಡಗಿದ್ದವರು ಏಕಾಏಕಿ ನಾಡಬಂದೂಕಿನಿಂದ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದು, ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸಾಗಿಸಿದಾಗ ಅವರು ಮೃತಪಟ್ಟಿರುವುದಾಗಿ ತಿಳಿಸಿದೆ.


ಘಟನಾ ಸ್ಥಳದಿಂದ ಎರಡು ನಾಡಬಂದೂಕುಗಳು, ಸುಮಾರು 20 ಕೆ.ಜಿ. ಮಾಂಸ, ಹೆಡ್ಟಾರ್ಚ್, ಬ್ಯಾಟರಿ, ಮದ್ದಿನ ಪುಡಿ, ಗುಂಡುಗಳು ಹಾಗೂ ಅಡುಗೆಗೆ ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಂಡಿರುವುದಾಗಿ ಅರಣ್ಯ ಇಲಾಖೆ ಹೇಳಿದೆ. ಮನವೊಲಿಕೆ ವಿಫಲವಾಗಿ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂಬುದು ಇಲಾಖೆಯ ವಾದವಾಗಿದೆ.
ಆದರೆ, ಮೃತರ ಕುಟುಂಬದ ಆರೋಪ ಹಾಗೂ ಅರಣ್ಯ ಇಲಾಖೆಯ ಹೇಳಿಕೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸುವ ಅಗತ್ಯವಿದೆ ಎಂದು AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಹೇಳಿದ್ದಾರೆ.


“ಮೃತರು ನಿಜವಾಗಿಯೂ ಕಳ್ಳಬೇಟೆಯಲ್ಲಿ ತೊಡಗಿದ್ದರೇ? ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೇ? ಅಥವಾ ಮಲಗಿದ್ದವರ ಮೇಲೆಯೇ ಗುಂಡಿನ ದಾಳಿ ನಡೆದಿತ್ತೇ? ಎಂಬ ಪ್ರಶ್ನೆಗಳಿಗೆ ನಿಷ್ಪಕ್ಷಪಾತ ತನಿಖೆಯಿಂದ ಉತ್ತರ ದೊರೆಯಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿರುವುದರಿಂದ ಪ್ರಕರಣದ ತನಿಖೆಯನ್ನು ಯಾವುದೇ ಒತ್ತಡ ಅಥವಾ ಪೂರ್ವಾಗ್ರಹವಿಲ್ಲದೆ ನಡೆಸಿ, ಲಭ್ಯವಿರುವ ಎಲ್ಲಾ ಸಾಕ್ಷ್ಯಗಳು, ಮರಣೋತ್ತರ ಪರೀಕ್ಷೆ, ಬ್ಯಾಲಿಸ್ಟಿಕ್ ವರದಿ, ಘಟನಾ ಸ್ಥಳದ ಪರಿಶೀಲನೆ ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು AICU ಆಗ್ರಹಿಸಿದೆ.
ಈ ನಡುವೆ ದಕ್ಷಿಣ ವಲಯ ಐಜಿಪಿ ಡಾ. ಎಂ.ಬಿ. ಬೋರಲಿಂಗಯ್ಯ ಅವರು ಪ್ರಕರಣದ ಕುರಿತು ಎರಡೂ ಆಯಾಮಗಳಲ್ಲಿ ತನಿಖೆ ನಡೆಸಿ ಸಾಕ್ಷ್ಯಾಧಾರಗಳ ಮೂಲಕ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. ಮೃತರ ವಿರುದ್ಧ ಈ ಹಿಂದೆ ಕಳ್ಳಬೇಟೆ ಪ್ರಕರಣಗಳಿದ್ದವೆಯೇ ಎಂಬುದೂ ತನಿಖೆಯಿಂದ ತಿಳಿದುಬರಬೇಕಿದೆ ಎಂದು ಅವರು ಹೇಳಿದ್ದಾರೆ.

ಮೂರು ಜೀವಗಳ ಸಾವಿಗೆ ಕಾರಣವಾದ ಈ ಘಟನೆಯಲ್ಲಿ ನಿಜವಾದ ಸಂಗತಿ ಏನು ಎಂಬುದು ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ತನಿಖೆಯಿಂದ ಹೊರಬರಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಂಡು, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.




