August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ‘ಪುನರ್ವಸು’ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ

ಆಯುರ್ವೇದದಿಂದ ಪಂಚೇಂದ್ರಿಯಗಳ ಬಲವರ್ಧನೆ, ಆರೋಗ್ಯಭಾಗ್ಯ ಸಾಧ್ಯ – ವೈದ್ಯ ಮನೀಷಾ ಕೋಟೆಕಾರ್

ಉಜಿರೆ: ಸಾವಿರಾರು ವರ್ಷಗಳ ಪಾರಂಪರಿಕ ಪರಂಪರೆಯನ್ನು ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ದೇಹದ ಪಂಚೇಂದ್ರಿಯಗಳನ್ನು ಬಲಪಡಿಸಿ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದು ಕೇಂದ್ರ ಸರ್ಕಾರದ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಪರಿಷತ್ ಅಧ್ಯಕ್ಷೆ ವೈದ್ಯ ಮನೀಷಾ ಕೋಟೆಕಾರ್ ಅವರು ಹೇಳಿದರು.

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಆಪ್ತಾಸ್ ಆಯುರ್ವೇದ ಟ್ರಸ್ಟ್‌ನ ದಶಮಾನೋತ್ಸವದ ಅಂಗವಾಗಿ ಇಂದ್ರಿಯ ಆರೋಗ್ಯದ ಕುರಿತು ಆಯೋಜಿಸಲಾದ ಅಂತಾರಾಷ್ಟ್ರೀಯ ಸಮಾವೇಶ ‘ಪುನರ್ವಸು’ವನ್ನು ಆಗಸ್ಟ್ 29ರಂದು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಹದ ಪಂಚೇಂದ್ರಿಯಗಳು ಮತ್ತು ಪ್ರಕೃತಿ-ಪರಿಸರದ ನಡುವೆ ಅವಿನಾಭಾವ ಸಂಬಂಧವಿದೆ. ಆದರೆ ಅಭಿವೃದ್ಧಿಯ ನೆಪದಲ್ಲಿ ಮಾನವ ಪ್ರಕೃತಿಯಿಂದ ದೂರವಾಗುತ್ತಾ ಪರಿಸರಕ್ಕೆ ಹಾನಿ ಮಾಡುತ್ತಿರುವುದು ಇಂದಿನ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ವೈದ್ಯರು ನಿರಂತರ ಕಲಿಕೆ, ಅಧ್ಯಯನ ಹಾಗೂ ಸಂಶೋಧನೆಯ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯೊಂದಿಗೆ ಕೌಶಲ, ಉತ್ತಮ ಸಂವಹನ, ಅನುಕಂಪ, ಸಹಾನುಭೂತಿ ಹಾಗೂ ನೈತಿಕತೆಯನ್ನು ಅಳವಡಿಸಿಕೊಂಡು ರೋಗಿಗಳ ಸೇವೆ ಮಾಡಬೇಕು ಎಂದು ವೈದ್ಯ ಮನೀಷಾ ಕೋಟೆಕಾರ್ ಸಲಹೆ ನೀಡಿದರು.

ಇಂದ್ರಿಯ ಆರೋಗ್ಯ ಅಭಿಯಾನಕ್ಕೆ ಚಾಲನೆ:

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಇಂದ್ರಿಯ ಆರೋಗ್ಯ ಅಭಿಯಾನದ ಲೋಗೋ ಅನಾವರಣಗೊಳಿಸಿ, ‘ಚೋಟಾ ಚರಕ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೈನಂದಿನ ಜೀವನದಲ್ಲಿ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಆಯುಷ್ಯ ವೃದ್ಧಿಯೊಂದಿಗೆ ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದರು.

ಉಡುಪಿ, ಹಾಸನ ಹಾಗೂ ಬೆಂಗಳೂರಿನಲ್ಲಿರುವ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಗಳ ಮೂಲಕ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ಶುಶ್ರೂಷೆ ಒದಗಿಸುವ ಮೂಲಕ ಆಯುರ್ವೇದ ಪದ್ಧತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. ಪಂಚೇಂದ್ರಿಯಗಳ ನಿಯಂತ್ರಣ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಐದು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ:

ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ವೈದ್ಯ ಡಾ. ಶರದ್ ಕುಮಾರ್ ಎಂ. ಅವರು ಇಂದ್ರಿಯ ಆರೋಗ್ಯ ಅಭಿಯಾನದ ಕುರಿತು ಮಾಹಿತಿ ನೀಡಿದರು. ದೇಶದ ಸುಮಾರು 600 ಆಯುರ್ವೇದ ಕಾಲೇಜುಗಳ ಸಹಭಾಗಿತ್ವದಲ್ಲಿ, ಮುಂದಿನ ಐದು ವರ್ಷಗಳ ಕಾಲ ಪ್ರತಿವರ್ಷ ಒಂದು ಗ್ರಾಮವನ್ನು ದತ್ತು ಪಡೆದು ಆಯುರ್ವೇದದ ಕುರಿತು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರತಿ ಗ್ರಾಮದಲ್ಲಿ ಸುಮಾರು 500 ಸ್ವಯಂಸೇವಕರ ಮೂಲಕ ಆಯುರ್ವೇದ ಪದ್ಧತಿಯ ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಈ ವಿನೂತನ ಅಭಿಯಾನಕ್ಕೆ ಧರ್ಮಸ್ಥಳದಿಂದ ಚಾಲನೆ ದೊರೆಯುತ್ತಿದೆ ಎಂದು ತಿಳಿಸಿದರು.

ಆಯುರ್ವೇದವನ್ನು ಜನಸಾಮಾನ್ಯರಿಗೆ ತಲುಪಿಸಬೇಕು:

ಆಯುಷ್ ಸಲಹೆಗಾರ ಡಾ. ಕೌಸ್ತುಭ ಉಪಾಧ್ಯಾಯ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಆಯುರ್ವೇದ ಶಿಬಿರಗಳನ್ನು ಆಯೋಜಿಸುವ ಮೂಲಕ ಜನಸಾಮಾನ್ಯರಿಗೆ ಆಯುರ್ವೇದದ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಸೇವಾ ಚಟುವಟಿಕೆಗಳ ಸಮರ್ಪಕ ದಾಖಲೀಕರಣಕ್ಕೂ ಅವರು ಒತ್ತು ನೀಡಿದರು. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ಆಯುಕ್ತ ಡಾ. ಸುನಿಲ್ ಪನ್ವಾರ್ ಮಾತನಾಡಿ, ಆಯುರ್ವೇದ ವೈದ್ಯರು ಪಾರಂಪರಿಕ ಚಿಕಿತ್ಸಾ ಪದ್ಧತಿಯ ರಾಯಭಾರಿಗಳಾಗಿ ಎಲ್ಲೆಡೆ ಆಯುರ್ವೇದವನ್ನು ಜನಪ್ರಿಯಗೊಳಿಸಬೇಕು ಎಂದು ಕರೆ ನೀಡಿದರು.

ಸಾರ್ವಜನಿಕರಿಂದ ಆಯುರ್ವೇದ ಪದ್ಧತಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಈ ಕ್ಷೇತ್ರದಲ್ಲಿ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ‘ಗುರುವಂದನ’ ಕಾರ್ಯಕ್ರಮದಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಲಾಯಿತು. ಬೆಂಗಳೂರಿನ ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಎಸ್‌ಡಿಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಕಿರಣ್ ಕೆ. ಧನ್ಯವಾದ ಸಲ್ಲಿಸಿದರು. ಡಾ. ಅನುಪಮ ವಿ. ಚಿನ್ನಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ‘ಸಂಹಿತಾ’ ಮೆರವಣಿಗೆ, ಪ್ರತಿಷ್ಠಾಪನೆ, ವಾದ್ಯಮೇಳ, ಶಂಖನಾದ ಹಾಗೂ ಸಂಹಿತಾ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು.

You may also like

News

ಸಿಬ್ಬಂದಿ ಕೊರತೆ ನೀಗಿಸಲು ಮೆಸ್ಕಾಂಗೆ 395 ಪವರ್‌ಮ್ಯಾನ್‌ಗಳು – ಅಧ್ಯಕ್ಷ ಕೆ. ಹರೀಶ್ ಕುಮಾರ್

ಮಂಗಳೂರು: ವಿದ್ಯುತ್ ಸರಬರಾಜು ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ.
News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ

You cannot copy content of this page