ಜೆಪ್ಪುವಿನ ಸಂತ ಆಂತೋನಿ ಆಶ್ರಮದಲ್ಲಿ ಮೊಂತಿ ಹಬ್ಬ ಸಂಭ್ರಮ – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ವಿಶೇಷ ಬಲಿಪೂಜೆ
ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನದ ಅಂಗವಾಗಿ ಆಚರಿಸಲಾಗುವ ‘ಮೊಂತಿ ಹಬ್ಬ’ವನ್ನು ಇಂದು ಸೆಪ್ಟೆಂಬರ್ 8ರಂದು ಮಂಗಳವಾರ ಧಾರ್ಮಿಕ ಭಕ್ತಿ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನೆರವೇರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಹಬ್ಬದ ವಿಶೇಷ ಬಲಿಪೂಜೆಯ ಪ್ರಧಾನ ಧರ್ಮಗುರುಗಳಾಗಿ ನೇತೃತ್ವ ವಹಿಸಿದರು.







ಬಲಿಪೂಜೆಯ ಪ್ರವಚನದಲ್ಲಿ ಮಾತನಾಡಿದ ಬಿಷಪ್ ಸಲ್ಡಾನ್ಹಾ ಅವರು, “ಪವಿತ್ರ ಕನ್ಯಾಮರಿಯಮ್ಮನ ಜೀವನವು ಅಚಲ ನಂಬಿಕೆ, ವಿನಯ ಹಾಗೂ ದೇವರ ಮೇಲಿನ ಸಂಪೂರ್ಣ ವಿಶ್ವಾಸಕ್ಕೆ ಮಾದರಿಯಾಗಿದೆ. ಅವರು ಚರ್ಚ್ನ ತಾಯಿಯಾಗಿ ನಂಬಿಕೆಯ ಬದುಕಿಗೆ ಪ್ರೇರಣೆಯಾಗಿದ್ದಾರೆ” ಎಂದು ಹೇಳಿದರು.







ಮೊಂತಿ ಹಬ್ಬವು ಕರಾವಳಿ ಕ್ಯಾಥೊಲಿಕ್ ಸಮುದಾಯದ ಪ್ರಮುಖ ಕೌಟುಂಬಿಕ ಹಾಗೂ ಸಾಂಸ್ಕೃತಿಕ ಹಬ್ಬವಾಗಿದ್ದು, ಹೆಣ್ಣು ಮಗುವಿನ ಗೌರವ, ಕುಟುಂಬದ ಒಗ್ಗಟ್ಟು ಹಾಗೂ ಭೂಮಿಯ ಸಮೃದ್ಧ ಫಸಲಿಗಾಗಿ ಕೃತಜ್ಞತೆ ಸಲ್ಲಿಸುವ ಸಂದೇಶವನ್ನು ಒಳಗೊಂಡಿದೆ. ಮಾತೆ ಮರಿಯಮ್ಮನ ಪ್ರೀತಿ ಮತ್ತು ವಿನಯವನ್ನು ಜೀವನದಲ್ಲಿ ಅಳವಡಿಸಿಕೊಂಡು, ಕುಟುಂಬದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಹಬ್ಬದ ಆಶಯವಾಗಿದೆ ಎಂದು ಅವರು ಹೇಳಿದರು.





ಧಾರ್ಮಿಕ ಆಚರಣೆಯ ಅಂಗವಾಗಿ ಹೊಸದಾಗಿ ಕೊಯ್ಲು ಮಾಡಿದ ತೆನೆಗೆ ಆಶೀರ್ವಾದ ನೀಡಲಾಯಿತು. ಬಳಿಕ ಮಕ್ಕಳು ವಿವಿಧ ಹೂವುಗಳನ್ನು ಅರ್ಪಿಸಿ ಮಾತೆ ಮರಿಯಮ್ಮನಿಗೆ ಗೌರವ ಸಲ್ಲಿಸಿದರು. ವಿಶೇಷ ಬಲಿಪೂಜೆಯಲ್ಲಿ ಸಂತ ಅಂತೋನಿ ಆಶ್ರಮದ ನಿರ್ದೇಶಕರಾದ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ಆಡಳಿತಾಧಿಕಾರಿ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್ ಹಾಗೂ ವಂದನೀಯ ಫಾದರ್ ಎಫ್.ಎಕ್ಸ್. ಗೋಮ್ಸ್ ಸಹ ಧರ್ಮಗುರುಗಳಾಗಿ ಭಾಗವಹಿಸಿದರು.




ಆಶ್ರಮದ ನಿವಾಸಿಗಳು, ಭಕ್ತರು ಹಾಗೂ ಹಿತೈಷಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಪ್ರಾರ್ಥನೆ ಹಾಗೂ ಕೃತಜ್ಞತೆ ಸಲ್ಲಿಸಿದರು. ಬಲಿಪೂಜೆಯ ಬಳಿಕ ಕರಾವಳಿ ಕ್ಯಾಥೊಲಿಕ್ ಸಂಪ್ರದಾಯದಂತೆ ಆಶೀರ್ವದಿಸಲಾದ ತೆನೆಯನ್ನು ಹಾಗೂ ಕಬ್ಬನ್ನು ಭಕ್ತರಿಗೆ ವಿತರಿಸುವ ಮೂಲಕ ಮೊಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.



