September 21, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತುಳುವಿಗೆ ಆಡಳಿತ ಭಾಷೆ ಮಾನ್ಯತೆ – ಕರಾವಳಿಯ ಅಭಿವೃದ್ಧಿಗೆ ಹೊಸ ಮುನ್ನುಡಿ

ಸಚಿವ ಸಂಪುಟದ ಮಹತ್ವದ ನಿರ್ಧಾರಗಳಿಗೆ ದಕ್ಷಿಣ ಕನ್ನಡ ಕಾಂಗ್ರೆಸ್ ಸ್ವಾಗತ – ಪದ್ಮರಾಜ್ ಆರ್. ಪೂಜಾರಿ

ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸುವುದು ಸೇರಿದಂತೆ ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ಹಲವು ಮಹತ್ವದ ನಿರ್ಧಾರಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮರಾಜ್ ಆರ್. ಪೂಜಾರಿ ಅವರು ಸ್ವಾಗತಿಸಿದ್ದಾರೆ.

ಇಂದು ಸೆಪ್ಟೆಂಬರ್ 19ರಂದು ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸಿದ ಅವರು, ತುಳು ಭಾಷಿಕರ ದೀರ್ಘಕಾಲದ ಭಾವನೆ ಹಾಗೂ ಆಶಯಗಳಿಗೆ ಸರ್ಕಾರ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ. ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡಬೇಕೆಂಬ ಬೇಡಿಕೆಯನ್ನು ತುಳು ಭಾಷಿಕರು ಹಲವು ದಶಕಗಳಿಂದ ಮುಂದಿಟ್ಟುಕೊಂಡು ಬಂದಿದ್ದು, ಇದೀಗ ಸಚಿವ ಸಂಪುಟದ ನಿರ್ಧಾರದಿಂದ ಈ ಬೇಡಿಕೆಗೆ ಮಹತ್ವದ ಮಾನ್ಯತೆ ದೊರೆತಿದೆ ಎಂದು ಅವರು ಹೇಳಿದರು.

ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, 61 ಪ್ರಮುಖ ವಿಷಯಗಳನ್ನು ಪರಿಗಣಿಸುವ ಮೂಲಕ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಪದ್ಮರಾಜ್ ಪೂಜಾರಿ ತಿಳಿಸಿದರು.

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯು ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಜನರ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂಜಾನೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಮೀನುಗಾರರೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿರುವುದು ಸರ್ಕಾರದ ಸ್ಪಂದನಶೀಲತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಹೆಸರಿನ ಬದಲಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ವಿಚಾರಕ್ಕೂ ಸರ್ಕಾರ ಆದ್ಯತೆ ನೀಡಿದೆ. ಧಾರ್ಮಿಕ ಕೇಂದ್ರಗಳು ಹಾಗೂ ಅವುಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನೂ ಸಚಿವ ಸಂಪುಟ ಸಭೆಯಲ್ಲಿ ಪರಿಗಣಿಸಲಾಗಿದೆ ಎಂದು ಪದ್ಮರಾಜ್ ಪೂಜಾರಿ ತಿಳಿಸಿದರು.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿವಿಧ ಸಮುದಾಯಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಸಭೆಯಲ್ಲಿ ಪರಿಗಣಿಸಲಾಗಿದ್ದು, ಕರಾವಳಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳು ಸ್ವಾಗತಾರ್ಹ ಎಂದು ಅವರು ಹೇಳಿದರು.

ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಪದೇಪದೇ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಪದ್ಮರಾಜ್ ಪೂಜಾರಿ ಅವರು ಸಚಿವ ಸಂಪುಟದ ನಿರ್ಧಾರಗಳು ಇಂತಹ ರಾಜಕೀಯ ಆರೋಪಗಳಿಗೆ ಉತ್ತರ ನೀಡಿವೆ ಎಂದು ಹೇಳಿದರು.

ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಈ ವಿಚಾರದಲ್ಲೂ ಸರ್ಕಾರ ಸೂಕ್ತ ಸ್ಪಂದನೆ ನೀಡಲಿದೆ ಎಂಬ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯು ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿದೆ ಎಂದು ಪದ್ಮರಾಜ್ ಆರ್. ಪೂಜಾರಿ ಅಭಿಪ್ರಾಯಪಟ್ಟರು.

ಪತ್ರಿಕಾ ಗೋಷ್ಠಿಯಲ್ಲಿ ಕೆ. ಹರೀಶ್ ಕುಮಾರ್, ಜೆ.ಆರ್. ಲೋಬೊ, ಅಭಯಚಂದ್ರ ಜೈನ್, ಮಮತಾ ಗಟ್ಟಿ, ಶಶಿಧರ್ ಹೆಗ್ಡೆ, ಕೆ.ಇ. ಅಶ್ರಫ್, ಎಸ್. ಅಪ್ಪಿ, ಇಬ್ರಾಹಿಂ ನವಾಜ್, ವಿಕಾಶ್ ಶೆಟ್ಟಿ, ಶುಭೋದಯ ಆಳ್ವಾ, ಸೌಹಾನ್ ಎಸ್.ಕೆ., ಟಿ.ಕೆ. ಸುಧೀರ್ ಹಾಗೂ ಯಶವಂತ್ ಪ್ರಭು ಉಪಸ್ಥಿತರಿದ್ದರು.

You may also like

News

Father Muller Welcomes 33rd Batches of Allied Health and Physiotherapy Students

A new generation of aspiring healthcare professionals began their academic journey at Father Muller as the 33rd batches of Father
News

ಸಾಣೂರು ಜಂಕ್ಷನ್‌ನಲ್ಲಿ ಮಾಜಿ ಸಚಿವ ರಮಾನಾಥ ರೈ ಕಾರಿಗೆ ಬಸ್ ಡಿಕ್ಕಿ – ಹಲವರಿಗೆ ಗಾಯ

ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಘಟನೆ ಇಂದು ಸೆಪ್ಟೆಂಬರ್ 20ರಂದು ಭಾನುವಾರ ಕಾರ್ಕಳ–ಮೂಡುಬಿದಿರೆ

You cannot copy content of this page