ಮೈಸೂರಿನಲ್ಲಿ DAPC ನೂತನ ಮುಖ್ಯ ಕಚೇರಿ ಸಮರ್ಪಣೆ – ಪ್ರೊಟೆಸ್ಟಂಟ್ ಚರ್ಚುಗಳ ಏಕತೆಗೆ ಹೊಸ ಹೆಜ್ಜೆ
ಮೈಸೂರು : ಪ್ರೊಟೆಸ್ಟಂಟ್ ಚರ್ಚುಗಳ ನಡುವಿನ ಏಕತೆ, ಸಹಭಾಗಿತ್ವ ಹಾಗೂ ಸಮಾಜಮುಖಿ ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನ ನೂತನ ಭಾರತ ಮುಖ್ಯ ಕಚೇರಿಯನ್ನು ಮೈಸೂರಿನ ಸುಭಾಷ್‌ನಗರದಲ್ಲಿ ಸೆಪ್ಟೆಂಬರ್ 22ರಂದು ಮಂಗಳವಾರ ಪ್ರಾರ್ಥನೆಯೊಂದಿಗೆ ಸಮರ್ಪಿಸಲಾಯಿತು.
ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಇತರ ರಾಜ್ಯಗಳಿಂದ ಆಗಮಿಸಿದ ಆರ್ಚ್‌ಬಿಷಪ್‌ಗಳು, ಬಿಷಪ್‌ಗಳು, ಪಾಸ್ಟರ್‌ಗಳು, ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮತ್ತು ಸಾಮಾಜಿಕ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಪಡೆದುಕೊಂಡಿತು.

ಅರ್ಪಣಾ ಕಾರ್ಯಕ್ರಮವು ಆರ್ಚ್‌ಬಿಷಪ್ ಅತೀ ವಂದನೀಯ ಡಾ. ಬಾಬು ಜಾರ್ಜ್ ಅವರ ನೇತೃತ್ವದ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ ನ್ಯೂ ಇಂಡಿಯಾ ಚರ್ಚ್ ಆಫ್ ಗಾಡ್‌ನ ರಾಜ್ಯ ಮೇಲ್ವಿಚಾರಕರಾದ ವಂದನೀಯ ನೂರೂದ್ದೀನ್ ಮುಲ್ಲಾ ಹಾಗೂ ವಂದನೀಯ ಡಾ. ಮಾರ್ಕ್ ಮುನಿಯಪ್ಪ ಮಾತನಾಡಿದರು.
DAPC ಆರ್ಚ್‌ಬಿಷಪ್ ಅತೀ ವಂದನೀಯ ಡಾ. ವಿನೋದ್ ಎಂ. ಚಾಕೋ ಅವರು ನೂತನ ಮುಖ್ಯ ಕಚೇರಿಯನ್ನು ಅಧಿಕೃತವಾಗಿ ಸಮರ್ಪಿಸಿದರು. ಚರ್ಚ್ ಹಾಗೂ ಅದರ ನಾಯಕತ್ವವು ಜಾಗೃತಗೊಳ್ಳುವ, ಒಗ್ಗಟ್ಟಿನಿಂದ ನಿಲ್ಲುವ ಮತ್ತು ಚರ್ಚ್ ಹಾಗೂ ಸಮಾಜದತ್ತ ತನ್ನ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಮಯ ಇದಾಗಿದೆ ಎಂದು ಅವರು ಸಂದೇಶ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಕರ್ನಾಟಕ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್, ಸಮುದಾಯದಲ್ಲಿ ಇನ್ನಷ್ಟು ಏಕತೆ ಅಗತ್ಯವಿದೆ ಎಂದು ಕರೆ ನೀಡಿದರು. KCCDCL ಉಪಾಧ್ಯಕ್ಷ ಸಂಜೀವ್ ಜಗಿರ್ದಾರ್ ಅವರು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬಿಷಪ್‌ಗಳನ್ನು ಅಭಿನಂದಿಸಿ, ಕಾರ್ಯಕ್ರಮದಲ್ಲಿ ಕಂಡುಬಂದ ಧಾರ್ಮಿಕ ನಾಯಕರ ಒಗ್ಗಟ್ಟನ್ನು ಶ್ಲಾಘಿಸಿದರು.



“ನೀವು ಲೋಕದ ಬೆಳಕಾಗಿದ್ದೀರಿ” :
ಸಭೆಯನ್ನುದ್ದೇಶಿಸಿ ಮಾತನಾಡಿದ ವಂದನೀಯ ನೂರೂದ್ದೀನ್ ಮುಲ್ಲಾ ಅವರು ಯೇಸುವಿನ “ನೀವು ಲೋಕದ ಬೆಳಕಾಗಿದ್ದೀರಿ” ಎಂಬ ಸಂದೇಶವನ್ನು ಉಲ್ಲೇಖಿಸಿ, ಪ್ರತಿಯೊಬ್ಬರೂ ಮೊದಲು ತಮ್ಮ ಕುಟುಂಬದಲ್ಲಿ ಬೆಳಕಾಗಬೇಕು ಹಾಗೂ ಬಳಿಕ ಆ ಬೆಳಕನ್ನು ಸಮಾಜಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಮೈಸೂರಿನ ಮಾಜಿ ಮೇಯರ್ ಅರಿಫ್ ಹುಸೇನ್ ಅವರು ಧಾರ್ಮಿಕ ಭೇದಗಳನ್ನು ಮೀರಿ ಮಾನವೀಯತೆಯ ಮಹತ್ವವನ್ನು ಒತ್ತಿಹೇಳಿದರು. ಸಾಮಾಜಿಕ ನ್ಯಾಯ ಹೋರಾಟಗಾರರೂ ಆಗಿರುವ ಮಾಜಿ ಡಿವೈಎಸ್‌ಪಿ ಅವರು, ಧಾರ್ಮಿಕ ಹಾಗೂ ಇತರ ಗುರುತುಗಳಿಗಿಂತ ಮೊದಲು ಭಾರತೀಯರಾಗಿರುವ ಭಾವನೆ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ DAPC ಪಂಜಾಬ್ ಆರ್ಚ್‌ಬಿಷಪ್ ಅತೀ ವಂದನೀಯ ಪ್ರಭಾತ್ ಸಿ. ನಾಯಕ್, DAPC ಕೇರಳ ಆರ್ಚ್‌ಬಿಷಪ್ ಅತೀ ವಂದನೀಯ ಡಾ. ಬಾಬು ಜಾರ್ಜ್, ಸಹಾಯಕ ಆರ್ಚ್‌ಬಿಷಪ್-ನಿಯೋಜಿತ ಅತೀ ವಂದನೀಯ ಡಾ. ಅಜು ಮ್ಯಾಥ್ಯೂಸ್ ಜೇಕಬ್, DAPC ತಮಿಳುನಾಡು ಆರ್ಚ್‌ಬಿಷಪ್ ಅತೀ ವಂದನೀಯ ಡಾ. ಗುಣಪಾಲನ್ ಫಿಲಿಪ್, ಕರ್ನಾಟಕ ಸಹಾಯಕ ಆರ್ಚ್‌ಬಿಷಪ್ ವಂದನೀಯ ಎಪಿಎಸ್ ಫ್ರಾನ್ಸಿಸ್, ವಂದನೀಯ ಚೆಲ್ಲಯ್ಯ, ಪಾಸ್ಟರ್ ಕಧಂ, ವೈ. ಆನಂದ್, DAPC ಕಾನೂನು ಸಲಹೆಗಾರ ಪಾಸ್ ಆಗಸ್ಟಿನ್ ಕುಮಾರ್, ಬ್ರದರ್ ವಿನಯ್ ಕೆ. ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಮುದಾಯ ನಾಯಕರು ಭಾಗವಹಿಸಿದ್ದರು.

ಹಿರಿಯ ಧಾರ್ಮಿಕ ನಾಯಕರಿಗೆ ಸನ್ಮಾನ:
ದಲಿತ ಕ್ರೈಸ್ತ ಫೆಡರೇಶನ್ ಅಧ್ಯಕ್ಷ ವಂದನೀಯ ಡಾ. ಮನೋಹರ್ ಚಂದ್ರ ಪ್ರಸಾದ್, ರಾಯಚೂರಿನ ವಲಯ ಬಿಷಪ್ ಅತೀ ವಂದನೀಯ ಎನ್. ಜೆರ್ನಾಸ್ ಜೇಮ್ಸ್, ಹಾಸನ ಜಿಲ್ಲಾ ಬಿಷಪ್ ಅತೀ ವಂದನೀಯ ಕೆ.ವಿ. ಮಣಿ, ಮೈಸೂರು ಪೆಂಟೆಕೋಸ್ಟಲ್ ಅಸೋಸಿಯೇಷನ್‌ನ ವಂದನೀಯ ಡಾ. ಕೆ.ಜೆ. ಸಾಲೊಮನ್ ಹಾಗೂ ವಂದನೀಯ ಡಾ. ಬಾಬು ಜಾರ್ಜ್ ಅವರನ್ನು ಕ್ರೈಸ್ತ ಸಮುದಾಯ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
DAPC ಸೈನಡ್ ಕಾರ್ಯದರ್ಶಿ ಬಿಷಪ್ ಅತೀ ವಂದನೀಯ ವೆನಿಯೆಲ್ ಮೋಸೆಸ್ ಅವರು ಡಯೋಸಿಸ್‌ನ ಪಯಣ, ಚಟುವಟಿಕೆಗಳು ಹಾಗೂ ಪ್ರಗತಿಯ ವರದಿ ಮಂಡಿಸಿದರು. ಸಹಾಯಕ ಬಿಷಪ್ ಅತೀ ವಂದನೀಯ ಜಾನ್ ಮೋಸೆಸ್ ಕಾರ್ಯಕ್ರಮ ನಿರೂಪಿಸಿದರು. DAPC ಸಹಾಯಕ ಆರ್ಚ್‌ಬಿಷಪ್ ಹಾಗೂ ರಾಷ್ಟ್ರೀಯ ಸಮಿತಿ ಸದಸ್ಯ ಅತೀ ವಂದನೀಯ ಸುನಿಲ್ ವಿ. ಜೇಕಬ್ ವಂದನಾರ್ಪಣೆ ಸಲ್ಲಿಸಿದರು.

ವಿವಿಧ ಧಾರ್ಮಿಕ ಮತ್ತು ಸಮುದಾಯ ನಾಯಕರ ಶುಭಾಶಯ ಸಂದೇಶಗಳನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಲಾಯಿತು. ಮೈಸೂರಿನ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ, ಎಸ್‌ಜೆ ಹಾಗೂ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಸಂದೇಶಗಳೂ ಇದರಲ್ಲಿ ಸೇರಿದ್ದವು.
ಮೈಸೂರಿನಲ್ಲಿ DAPCಯ ನೂತನ ಭಾರತ ಮುಖ್ಯ ಕಚೇರಿ ಸಮರ್ಪಣೆಯು ಸ್ವತಂತ್ರ ಪ್ರೊಟೆಸ್ಟಂಟ್ ಚರ್ಚುಗಳ ನಡುವಿನ ಏಕತೆ, ಸಹಭಾಗಿತ್ವ, ಸಮುದಾಯ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಹೊಸ ವೇದಿಕೆ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.




