ಬೆಂಗಳೂರಿನಲ್ಲಿ ಸೆಪ್ಟೆಂಬರ್ 26ರಿಂದ ‘ಕರ್ನಾಟಕ ಪರ್ವ–2026’ – 180ಕ್ಕೂ ಅಧಿಕ ಮಳಿಗೆ, ಕಲೆ–ಸಂಸ್ಕೃತಿ–ಸಂಗೀತದ ಮಹಾಸಂಗಮ
ಕರ್ನಾಟಕದ ವೈವಿಧ್ಯಮಯ ಕಲೆ, ಸಂಸ್ಕೃತಿ, ಪರಂಪರೆ, ಕರಕುಶಲ, ಆಹಾರ ಹಾಗೂ ಉದ್ಯಮಶೀಲತೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ಕರ್ನಾಟಕ ಪರ್ವ–2026’ ಸೆಪ್ಟೆಂಬರ್ 26 ರಿಂದ 30ರ ತನಕ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಈ ಐದು ದಿನಗಳ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.




ಸೆಪ್ಟೆಂಬರ್ 26ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮವನ್ನು ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರು ನೆರವೇರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೊದಲ ದಿನ ‘ಉದ್ಯಮಶೀಲತೆ, ತಂತ್ರಜ್ಞಾನ ಹಾಗೂ ವ್ಯಾಪಾರದಲ್ಲಿ ಎಐ ಬಳಕೆ’ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಸಂಜೆ 7 ಗಂಟೆಯಿಂದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಸಂಗೀತ ಕಾರ್ಯಕ್ರಮ ಜರುಗಲಿದೆ.



ಐದು ದಿನ, ವೈವಿಧ್ಯಮಯ ವಿಚಾರ ಸಂಕಿರಣ:
ಸೆಪ್ಟೆಂಬರ್ 27ರಂದು ‘ಎಸ್‌ಎಸ್‌ಜಿ ಯಿಂದ ಉದ್ಯಮದವರೆಗೆ’ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಸಂಜೆ ಕರ್ನಾಟಕದ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಜಯ್ ವಾರಿಯರ್ ಹಾಗೂ ನಾದಿರಾ ಬಾನು ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.



ಸೆಪ್ಟೆಂಬರ್ 28ರಂದು ಸರ್ಕಾರಿ ಯೋಜನೆಗಳು, ಬ್ಯಾಂಕಿಂಗ್ ಮತ್ತು ಹಣಕಾಸು ಸೇರ್ಪಡೆ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಸೂಫಿ ಗಾಯಕ ಅನಿಲ್ ಹುಸೇನಿ, ಹೈದರಾಬಾದ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸೆಪ್ಟೆಂಬರ್ 29ರಂದು ‘ಕೌಶಲ್ಯದಿಂದ ಉದ್ಯಮದತ್ತ–ಸುಸ್ಥಿರ ಜೀವನೋಪಾಯ ಸೃಷ್ಟಿ’ ವಿಷಯದ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ವಾರ್ಸಿ ಸಹೋದರರ ಕವ್ವಾಲಿ ಸಂಗೀತ ಕಾರ್ಯಕ್ರಮ ಗಮನ ಸೆಳೆಯಲಿದೆ.
ಸೆಪ್ಟೆಂಬರ್ 30ರಂದು ಮಹಿಳಾ ಮತ್ತು ಯುವ ಸಬಲೀಕರಣ ವಿಷಯದ ವಿಚಾರಗೋಷ್ಠಿ ನಡೆಯಲಿದ್ದು, ಸಂಜೆ 6 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 7 ಗಂಟೆಗೆ ಮುಶಾಯಿರಾ ಆಯೋಜಿಸಲಾಗಿದೆ. ಇಲಾಖೆಯ ಪ್ರಕಟಣೆಗಳಲ್ಲಿಯೂ ಉದ್ಯಮಶೀಲತೆ, ಹಣಕಾಸು ಸೇರ್ಪಡೆ, ಸುಸ್ಥಿರ ಜೀವನೋಪಾಯ ಹಾಗೂ ಮಹಿಳಾ–ಯುವ ಸಬಲೀಕರಣ ಕುರಿತ ವಿಚಾರಗೋಷ್ಠಿಗಳಿಗೆ ಒತ್ತು ನೀಡಲಾಗಿದೆ.

180ಕ್ಕೂ ಅಧಿಕ ಮಳಿಗೆಗಳ ಆಕರ್ಷಣೆ:
ಕರ್ನಾಟಕದ ಮೂಲೆಮೂಲೆಗಳಿಂದ ಆಯ್ದ ವಿಶಿಷ್ಟ ಉತ್ಪನ್ನಗಳು, ಕರಕುಶಲ ವಸ್ತುಗಳು ಹಾಗೂ ಸ್ಥಳೀಯ ಉದ್ಯಮಗಳ 180ಕ್ಕೂ ಅಧಿಕ ಮಳಿಗೆಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಲಿವೆ. ಇದರೊಂದಿಗೆ ವಸ್ತು ಪ್ರದರ್ಶನ, ಆಹಾರ ಮೇಳ, ವಿಚಾರ ಸಂಕಿರಣ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ಅವಕಾಶವಿದೆ.


ಕರ್ನಾಟಕದ ವಿವಿಧ ಜಿಲ್ಲೆಗಳ ಸ್ಥಳೀಯ ಉತ್ಪನ್ನಗಳು, ಕಲಾ–ಕರಕುಶಲ ಕೌಶಲ್ಯ, ಆಹಾರ ಸಂಸ್ಕೃತಿ ಹಾಗೂ ಪ್ರತಿಭೆಗಳಿಗೆ ವಿಶಾಲ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಮಹೋತ್ಸವವು ಕುಟುಂಬ ಸಮೇತ ಆಗಮಿಸುವ ಸಾರ್ವಜನಿಕರಿಗೆ ವೈವಿಧ್ಯಮಯ ಅನುಭವ ನೀಡಲಿದೆ.
ಸೆಪ್ಟೆಂಬರ್ 26ರಿಂದ 30ರವರೆಗೆ ತ್ರಿಪುರವಾಸಿನಿ, ಅರಮನೆ ಮೈದಾನದಲ್ಲಿ ನಡೆಯಲಿರುವ ಕರ್ನಾಟಕ ಪರ್ವ–2026ರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೋರಿದೆ.




