September 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜೀವನ್ಮರಣ ಹೋರಾಟದಲ್ಲಿದ್ದ ಗರ್ಭಿಣಿಗೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ‘ಪುನರ್ಜನ್ಮ’!

ಕೆ.ಎಂ.ಸಿ. ತಜ್ಞರ ಸಹಕಾರದೊಂದಿಗೆ ನಾಲ್ಕು ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆ; ತಾಯಿ ಪ್ರಾಣ ಉಳಿಸಿದ ವೈದ್ಯರ ತಂಡ

ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸವಾಲಿನ ಹಂತ ತಲುಪಿದ್ದ ಜೀವನ್ಮರಣದ ಸ್ಥಿತಿಯಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಹಾಗೂ ಕೆ.ಎಂ.ಸಿ.ಯ ತಜ್ಞ ವೈದ್ಯರ ತಂಡ ಜಂಟಿಯಾಗಿ ಯಶಸ್ವಿ ಚಿಕಿತ್ಸೆ ನೀಡಿ ಜೀವ ಉಳಿಸಿದೆ. ಅತ್ಯಂತ ಸಂಕೀರ್ಣವಾಗಿದ್ದ ಈ ಪ್ರಕರಣದಲ್ಲಿ ಬಹುವೈದ್ಯಕೀಯ ಜೀವರಕ್ಷಕ ಆರೈಕೆ ಪದ್ಧತಿಯನ್ನು ಅನುಸರಿಸುವ ಮೂಲಕ ಮಹಿಳೆಗೆ ಹೊಸ ಜೀವನ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ 33 ವಾರಗಳ ಗರ್ಭಿಣಿಯೊಬ್ಬರು ಪ್ರಸವಪೂರ್ವ ರಕ್ತಸ್ರಾವದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಪ್ಲಾಸೆಂಟಾ (ಮಾಸು) ಶಿಶು ತಾಯಿಯ ಗರ್ಭದಿಂದ ಹೊರಬರುವ ದಾರಿಗೆ ಅಡ್ಡವಾಗಿರುವುದು ಕಂಡುಬಂದಿತ್ತು. ಜೊತೆಗೆ ಪ್ಲಾಸೆಂಟಾ ಅಕ್ರೀಟಾ ಅಥವಾ ಪ್ಲಾಸೆಂಟಾ ಪರ್ಕ್ರೀಟಾ ಇರುವ ಸಾಧ್ಯತೆಯೂ ವ್ಯಕ್ತವಾಗಿತ್ತು.

ಪ್ಲಾಸೆಂಟಾ ಪರ್ಕ್ರೀಟಾ ಸ್ಥಿತಿಯಲ್ಲಿ ಪ್ಲಾಸೆಂಟಾದ ರಕ್ತನಾಳಗಳು ಮತ್ತು ಜೀವಕೋಶಗಳು ಗರ್ಭಾಶಯದ ಸ್ನಾಯುಪದರವನ್ನು ಆಳವಾಗಿ ಪ್ರವೇಶಿಸುವುದಲ್ಲದೆ, ಕೆಲವೊಮ್ಮೆ ಗರ್ಭಾಶಯವನ್ನೂ ದಾಟಿ ಪಕ್ಕದಲ್ಲಿರುವ ಮೂತ್ರಕೋಶ ಸೇರಿದಂತೆ ಇತರ ಅಂಗಾಂಗಗಳಿಗೂ ಹಾನಿ ಉಂಟುಮಾಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಜೊತೆಗೆ ಮೂತ್ರರೋಗ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಅಗತ್ಯವಿದ್ದರೆ ಸಾಮಾನ್ಯ ಶಸ್ತ್ರಚಿಕಿತ್ಸಾ ತಜ್ಞರ ಸಹಕಾರವೂ ಅತ್ಯಂತ ಮಹತ್ವದ್ದಾಗುತ್ತದೆ.

ಈ ಪ್ರಕರಣದಲ್ಲಿಯೂ ಗರ್ಭಾಶಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದು ಅನಿವಾರ್ಯವಾಗುವಂತಹ ಗಂಭೀರ ಪರಿಸ್ಥಿತಿ ಎದುರಾಗಿತ್ತು. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಸುಮಾರು 3ರಿಂದ 4 ಲೀಟರ್‌ವರೆಗೆ ರಕ್ತಸ್ರಾವವಾಗುವ ಸಾಧ್ಯತೆ ಇದ್ದುದರಿಂದ ತಾಯಿಯ ಜೀವ ಉಳಿಸುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು.

ಮುಂಚಿತ ಸಿದ್ಧತೆ, ಬಹುವೈದ್ಯಕೀಯ ತಂಡದಿಂದ ಜೀವರಕ್ಷಣೆ:

ಇಂತಹ ಗಂಭೀರ ಪ್ರಕರಣಗಳಲ್ಲಿ ವಿವಿಧ ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿತ ತಜ್ಞ ವೈದ್ಯರನ್ನು ಮುಂಚಿತವಾಗಿಯೇ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆಸಿ, ಅವರ ಸಮ್ಮುಖದಲ್ಲೇ ಶಸ್ತ್ರಚಿಕಿತ್ಸೆ ನಡೆಸುವ ಜೀವರಕ್ಷಕ ವಿಧಾನವನ್ನು ಲೇಡಿಗೋಷನ್ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತಿದೆ.

“ಗರ್ಭಿಣಿಯ ದೇಹದಿಂದ ಹೊರಹೊಮ್ಮುವ ಒಂದೊಂದು ಹನಿ ರಕ್ತದ ನಷ್ಟವನ್ನೂ ಸಾಧ್ಯವಾದಷ್ಟು ಕಡಿಮೆ ಮಾಡಬೇಕು” ಎಂಬ ಪರಿಕಲ್ಪನೆಯೊಂದಿಗೆ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರ ಮಾರ್ಗದರ್ಶನದಲ್ಲಿ ಈ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ.

ಇದೇ ಜೀವರಕ್ಷಕ ವಿಧಾನವನ್ನು ಈ ಮಹಿಳೆಯ ಚಿಕಿತ್ಸೆಯಲ್ಲಿಯೂ ಅನುಸರಿಸಲಾಗಿದ್ದು, ಅತ್ಯಮೂಲ್ಯವಾದ ತಾಯಿಯ ಪ್ರಾಣವನ್ನು ಉಳಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಗಮನಾರ್ಹವೆಂದರೆ, ಈ ರೀತಿಯ ವಿಶೇಷ ಬಹುವೈದ್ಯಕೀಯ ಆರೈಕೆಯ ಮೂಲಕ ಜೀವ ಉಳಿಸಿಕೊಂಡ ಹತ್ತನೇ ಗರ್ಭಿಣಿ ಮಹಿಳೆ ಇವರಾಗಿದ್ದಾರೆ.

ಕೆ.ಎಂ.ಸಿ. ತಜ್ಞರ ಮಹತ್ವದ ಸಹಕಾರ:

ಈ ಸಂಕೀರ್ಣ ಪ್ರಕರಣದಲ್ಲಿ ಸಮಯೋಚಿತ ನಿರ್ಧಾರ ಕೈಗೊಳ್ಳುವಲ್ಲಿ ಕೆ.ಎಂ.ಸಿ. ಪ್ರಸೂತಿ ವಿಭಾಗದ ಪ್ರೊಫೆಸರ್ ಡಾ. ನಿಖಿಲ್ ಶೆಟ್ಟಿ ಅವರ ಪಾತ್ರ ಮಹತ್ವದ್ದಾಗಿದ್ದು, ಅವರು ಮುಖ್ಯ ಪ್ರಸೂತಿ ಶಸ್ತ್ರಚಿಕಿತ್ಸಕರಾಗಿ ಕರ್ತವ್ಯ ನಿರ್ವಹಿಸಿದರು.

ಸೀನಿಯರ್ ರೆಸಿಡೆಂಟ್ ಡಾ. ಸುಶಾಮ್ ಶೆಟ್ಟಿ, ಅಸಿಸ್ಟೆಂಟ್ ಪ್ರೊಫೆಸರ್‌ಗಳಾದ ಡಾ. ಗಗನ್ ದೀಪ್ ಕೌರ್ ಹಾಗೂ ಡಾ. ಪೃಥ್ವಿ ಶೆಣೈ ಮತ್ತು ಜೂನಿಯರ್ ರೆಸಿಡೆಂಟ್ ಡಾ. ತನ್ವಿತಾ ಅವರು ಶಸ್ತ್ರಚಿಕಿತ್ಸೆಗೆ ಸಹಕರಿಸಿದರು.

ಕೆ.ಎಂ.ಸಿ.ಯ ಮೂತ್ರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಪ್ರಮೋದ್, ಡಾ. ಮೀಟ್ ಹಾಗೂ ಡಾ. ಶಿವಾನಂದ್ ಅವರು ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯಲ್ಲಿ ತೊಡಗಿಸಿಕೊಂಡು ಗಂಭೀರವಾಗಿ ಹಾನಿಗೊಳಗಾಗಿದ್ದ ಮೂತ್ರಕೋಶಕ್ಕೆ ಅಗತ್ಯವಾದ ಸಂಕೀರ್ಣ ಶಸ್ತ್ರಚಿಕಿತ್ಸಾ ಚಿಕಿತ್ಸೆಯನ್ನು ನೆರವೇರಿಸಿದರು.

ಕೆ.ಎಂ.ಸಿ. ಅಸೋಸಿಯೇಟ್ ಪ್ರೊಫೆಸರ್ ಹಾಗೂ ಅರಿವಳಿಕೆ ತಜ್ಞೆ ಡಾ. ಶಿಲ್ಪಾ ಅವರು ಶಸ್ತ್ರಚಿಕಿತ್ಸೆಯುದ್ದಕ್ಕೂ ರೋಗಿಯ ಪ್ರಮುಖ ಜೀವಮಾನದಂಡಗಳ ಮೇಲೆ ನಿರಂತರ ನಿಗಾ ವಹಿಸಿದರು.

33 ವಾರಗಳ ಅಪರಿಪಕ್ವ ಶಿಶುವಿನ ಅಗತ್ಯ ತುರ್ತು ಆರೈಕೆಯನ್ನು ನವಜಾತ ಶಿಶು ವಿಭಾಗಕ್ಕೆ ಸ್ಥಳಾಂತರಿಸುವ ಮುನ್ನ ಮಕ್ಕಳ ತಜ್ಞೆ ಡಾ. ಆರುಷಿ ನಿರ್ವಹಿಸಿದರು. ಶುಶ್ರೂಷಕಿ ದೀಪಾ ಅವರು ಶಸ್ತ್ರಚಿಕಿತ್ಸಾ ತಂಡಕ್ಕೆ ಅಗತ್ಯ ಸಹಕಾರ ನೀಡಿದರು.

ಸರ್ಕಾರಿ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯಕ್ಕೆ ಮತ್ತೊಂದು ಸಾಕ್ಷಿ:

ಸರ್ಕಾರದ ಅನುದಾನದಿಂದ ಸರ್ವಸಜ್ಜಿತವಾಗಿ ಅಭಿವೃದ್ಧಿಪಡಿಸಲಾದ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಪ್ರಸೂತಿ ತೀವ್ರ ನಿಗಾ ಘಟಕ, ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

ಬಡ ಮತ್ತು ಅಸಹಾಯಕ ಮಹಿಳೆಯೊಬ್ಬರಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸಿ ಜೀವ ಉಳಿಸಿರುವ ಈ ಪ್ರಕರಣವು ಸರ್ಕಾರಿ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ಮತ್ತು ಸೇವಾ ಬದ್ಧತೆಗೆ ಮತ್ತೊಂದು ಉದಾಹರಣೆಯಾಗಿದೆ.

ಲೇಡಿಗೋಷನ್ ಆಸ್ಪತ್ರೆಯಲ್ಲಿ ಗರ್ಭಿಣಿ, ಬಾಣಂತಿ ಹಾಗೂ ನವಜಾತ ಶಿಶುವಿನ ಆರೈಕೆಯನ್ನು ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿ ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತದೆ.

“ಸಾರ್ವಜನಿಕರು ಸರ್ಕಾರಿ ಆರೋಗ್ಯ ವ್ಯವಸ್ಥೆಗಳನ್ನು ತಾತ್ಸಾರದಿಂದ ನೋಡದೆ, ಬಡಜನತೆಯ ಜೀವ ಉಳಿಸುವ ಸಂಜೀವಿನಿಯಂತೆ ಗೌರವದಿಂದ ನೋಡಬೇಕು” ಎಂದು ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

You may also like

News

‘ಹಿಂದೂ ಕಾರ್ಯಕರ್ತರ ಮೇಲಿನ ದಮನ ಖಂಡನೀಯ’ – ಬಿ.ಸಿ. ರೋಡ್ ಚಲೋ ಯಶಸ್ವಿಗೊಳಿಸಲು ಸಂಸದ ಕ್ಯಾ. ಬ್ರಿಜೇಶ್ ಚೌಟ ಕರೆ

ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ನಾಳೆ ಸೆಪ್ಟೆಂಬರ್ 28ರಂದು ಸೋಮವಾರ ನಡೆಯಲಿರುವ ‘ಬಿ.ಸಿ. ರೋಡ್ ಚಲೋ’
News

ಮಂಗಳೂರು ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ – ₹24 ಲಕ್ಷ ಮೌಲ್ಯದ MDMA ವಶ!

ಮಂಗಳೂರು ನಗರದಲ್ಲಿ ನಿಷೇಧಿತ ಮಾದಕವಸ್ತು MDMAಯನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಮೂವರನ್ನು ಬಂಧಿಸಿ, ಸುಮಾರು ₹24 ಲಕ್ಷ

You cannot copy content of this page