ಕೋಮುದ್ವೇಷದ ಭಾಷಣ ಆರೋಪ – ಜಗದೀಶ್ ಕಾರಂತ್ ಹಾಗೂ ಶ್ರೀಕಾಂತ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು
ಪುತ್ತೂರಿನ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ

ಕೋಮುದ್ವೇಷದ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಿಂದೂ ಸಂಘಟನೆಗಳ ಮುಖಂಡರಾದ ಜಗದೀಶ್ ಕಾರಂತ್ ಮತ್ತು ಶ್ರೀಕಾಂತ್ ಶೆಟ್ಟಿ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅಕ್ಟೋಬರ್ 15ರಂದು ಗುರುವಾರ ನ್ಯಾಯಾಲಯ ಈ ಆದೇಶ ನೀಡಿದ್ದು, ಇಬ್ಬರೂ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಪೂರ್ಣ ವಿಚಾರಣೆಯ ಬಳಿಕ ಪುರಸ್ಕರಿಸಿದೆ.

ದರ್ಬೆ ಘಟನೆ ಬಳಿಕ ವಿವಾದಾತ್ಮಕ ಹೇಳಿಕೆ ಆರೋಪ:
ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂಜನಾ ಪೈ ಅವರನ್ನು ಆಗಸ್ಟ್ 26ರಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ, ಅವರ ಪತಿ ಸದಾಶಿವ ಪೈ ಅವರೊಂದಿಗೆ ಜಗದೀಶ್ ಕಾರಂತ್ ಮಾತುಕತೆ ನಡೆಸಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಈ ಘಟನೆ ಅನಿರೀಕ್ಷಿತವಲ್ಲ. ಇದು ಮತಾಂಧ ಮನಸ್ಥಿತಿಯ ಪ್ರದರ್ಶನವಾಗಿದ್ದು, ಪುತ್ತೂರಿನಲ್ಲಿ ಆರಂಭವಾಗಿರುವ ‘ವಾಣಿಜ್ಯ ಭಯೋತ್ಪಾದನೆ’ಯ ಮೊದಲ ಘಟನೆ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಈ ಹೇಳಿಕೆಗೆ ಸಂಬಂಧಿಸಿದಂತೆ ಪುತ್ತೂರು ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದರು. ಪುತ್ತೂರಿನ ಹೊರಗಿನಿಂದ ಬಂದ ಜಗದೀಶ್ ಕಾರಂತ್ ಅವರು ವಿವಿಧ ಸಮುದಾಯಗಳ ನಡುವೆ ದ್ವೇಷ, ವಿರೋಧ ಮತ್ತು ಅಶಾಂತಿ ಉಂಟುಮಾಡುವ ಹೇಳಿಕೆ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಮತ್ತು ವದಂತಿಗಳನ್ನು ಹರಡುವ ಮೂಲಕ ಸಾರ್ವಜನಿಕರಲ್ಲಿ ಭಯ, ಗೊಂದಲ ಹಾಗೂ ಕೋಮು ದ್ವೇಷ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಅಲ್ಲದೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.
ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಕಾರಂತ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪುರಸ್ಕರಿಸಿದೆ.

‘ಪುತ್ತೂರು ಚಲೋ’ ಭಾಷಣ ಪ್ರಕರಣದಲ್ಲೂ ಜಾಮೀನು:
ದರ್ಬೆ ಘಟನೆಯ ಹಿನ್ನೆಲೆಯಲ್ಲಿ ಆಗಸ್ಟ್ 31ರಂದು ನಡೆದ ‘ಪುತ್ತೂರು ಚಲೋ’ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಹಿಂದೂ ಸಂಘಟನೆಗಳ ಮುಖಂಡ ಶ್ರೀಕಾಂತ್ ಶೆಟ್ಟಿ ಅವರ ವಿರುದ್ಧವೂ ಕೋಮುದ್ವೇಷದ ಭಾಷಣ ಮಾಡಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ಶ್ರೀಕಾಂತ್ ಶೆಟ್ಟಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ಅಕ್ಟೋಬರ್ 15ರಂದು ಪುರಸ್ಕರಿಸಿದೆ. ನ್ಯಾಯಾಲಯದ ದೈನಂದಿನ ಪ್ರಕರಣದ ಸ್ಥಿತಿಗತಿ ದಾಖಲೆಯ ಪ್ರಕಾರ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 482ರ ಅಡಿಯಲ್ಲಿ ಸಲ್ಲಿಸಲಾದ ಎರಡೂ ಅರ್ಜಿಗಳನ್ನು ಪೂರ್ಣ ವಿಚಾರಣೆಯ ಬಳಿಕ ಮಂಜೂರು ಮಾಡಲಾಗಿದೆ.
ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ವಕೀಲರಾದ ಮಹೇಶ್ ಕಜೆ ಅವರು ವಾದ ಮಂಡಿಸಿದ್ದರು.




