October 23, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಕ್ಟೋಬರ್ 24ರಂದು ಧರ್ಮಸ್ಥಳದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

ವಿಶೇಷ ಪೂಜೆ ಮತ್ತು ಹಿರಿಯ ನೌಕರರಿಗೆ ಸನ್ಮಾನ – ಎರಡು ತಿಂಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಸಂಭ್ರಮದ ಸಮಾರೋಪ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಅಕ್ಟೋಬರ್ 24ರಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಲಿದೆ. ಕ್ಷೇತ್ರದ ನೌಕರರು, ಸ್ಥಳೀಯ ನಾಗರಿಕರು, ಭಕ್ತರು ಮತ್ತು ಅಭಿಮಾನಿಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮಗಳು ಜರುಗಲಿವೆ.

ಈ ಪ್ರಯುಕ್ತ ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಮತ್ತು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುವುದು. ಭಕ್ತರು ಹಾಗೂ ಅಭಿಮಾನಿಗಳು ಡಾ. ಹೆಗ್ಗಡೆಯವರಿಗೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ. ಅಂದು ಅಪರಾಹ್ನ 4 ಗಂಟೆಯಿಂದ ನಡೆಯುವ ಸಮಾರಂಭದಲ್ಲಿ ಹಿರಿಯ ನೌಕರರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಡಾ. ಹೆಗ್ಗಡೆಯವರು ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿರುವ ಕ್ಷೇತ್ರ:

ನವರಾತ್ರಿ ಸಂಭ್ರಮದ ನಡುವೆಯೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಸದಿ, ದೇವಸ್ಥಾನ, ಬೀಡು, ಅನ್ನಪೂರ್ಣ ಭೋಜನಾಲಯ ಹಾಗೂ ವಸತಿ ಛತ್ರಗಳನ್ನು ಆಕರ್ಷಕ ವಿದ್ಯುದ್ದೀಪಗಳು ಮತ್ತು ಪ್ರಾಕೃತಿಕ ಪರಿಕರಗಳಿಂದ ಅಲಂಕರಿಸಲಾಗಿದ್ದು, ಕ್ಷೇತ್ರದ ಸೌಂದರ್ಯ ಮತ್ತಷ್ಟು ಹೆಚ್ಚಿದೆ.

ಅಕ್ಟೋಬರ್ 23ರಂದು ಛದ್ಮವೇಷ ಸ್ಪರ್ಧೆ:

ವರ್ಧಂತ್ಯುತ್ಸವದ ಅಂಗವಾಗಿ ಅಕ್ಟೋಬರ್ 23ರಂದು ಬೆಳಗ್ಗೆ ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಮಕ್ಕಳ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಪ್ರಾಥಮಿಕ, ಪ್ರೌಢ, ಜೂನಿಯರ್, ಸೀನಿಯರ್ ಹಾಗೂ ಸೂಪರ್ ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಎರಡು ತಿಂಗಳ ಕಾಲ ಕ್ರೀಡಾ, ಸಾಂಸ್ಕೃತಿಕ ಸಂಭ್ರಮ:

ಪಟ್ಟಾಭಿಷೇಕ ವರ್ಧಂತ್ಯುತ್ಸವದ ಪ್ರಯುಕ್ತ ಕಳೆದ ಎರಡು ತಿಂಗಳುಗಳಿಂದ ಕ್ಷೇತ್ರದಲ್ಲಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರು, ಕ್ಷೇತ್ರದ ನೌಕರರು, ವಿವಿಧ ವಿಭಾಗಗಳ ಸಿಬ್ಬಂದಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಶಾಲಾ ಮಕ್ಕಳು ಹಾಗೂ ಶಿಕ್ಷಕರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಕೇರಂ, ಚೆಸ್ ಹಾಗೂ ಒನ್ ಮಿನಿಟ್ ಗೇಮ್‌ಗಳಂತಹ ಕ್ರೀಡೆಗಳ ಜತೆಗೆ ಶಾಲಾ ಮಕ್ಕಳಿಗಾಗಿ ಸಂಗೀತ, ಚಿತ್ರಕಲೆ, ಆಶುಭಾಷಣ ಮತ್ತು ಆಶುನಟನೆ ಸ್ಪರ್ಧೆಗಳನ್ನು ನಡೆಸಲಾಯಿತು.

1968ರಲ್ಲಿ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷೇಕ:

ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1968ರ ಅಕ್ಟೋಬರ್ 24ರಂದು ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು. ಅಂದಿನಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳಿಗೆ ಅವರು ಮಾರ್ಗದರ್ಶನ ನೀಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಸಂಸ್ಥೆಗಳು, ಕೆರೆಗಳ ಪುನಶ್ಚೇತನ, ಉಚಿತ ಸಾಮೂಹಿಕ ವಿವಾಹ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಆಯುರ್ವೇದಕ್ಕೆ ಪ್ರೋತ್ಸಾಹ, ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಹಾಗೂ ರುದ್ರಭೂಮಿ ಅಭಿವೃದ್ಧಿಯಂತಹ ಕಾರ್ಯಕ್ರಮಗಳು ಅವರ ಸೇವಾ ಕಾರ್ಯಗಳ ಪ್ರಮುಖ ಭಾಗವಾಗಿವೆ.

ಧಾರ್ಮಿಕ ಪರಂಪರೆಯ ಸಂರಕ್ಷಣೆಯೊಂದಿಗೆ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಿರುವ ಡಾ. ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವವನ್ನು ಭಕ್ತರು ಹಾಗೂ ಅಭಿಮಾನಿಗಳು ವಿಶೇಷ ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.

You may also like

News

65% Burns Survivor Gets a Second Chance at Life at Father Muller

In a remarkable story of resilience, advanced medical care and teamwork, a patient who sustained 65% deep thermal burns has
News

ವಕೀಲರ ಹಿತಾಸಕ್ತಿ ರಕ್ಷಣೆಗೆ ಹೊಸ ವೇದಿಕೆ – ದಕ್ಷಿಣ ಕನ್ನಡದಲ್ಲಿ AILC ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಅಧ್ಯಕ್ಷರಾಗಿ ಸಿದ್ದಿಕ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಆಯ್ಕೆ ವಕೀಲರ ಹಕ್ಕುಗಳ ರಕ್ಷಣೆ, ವೃತ್ತಿಪರ ಸಮಸ್ಯೆಗಳ ಪರಿಹಾರ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ವಕೀಲರ ಪಾತ್ರವನ್ನು ಬಲಪಡಿಸುವ

You cannot copy content of this page