November 20, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾರ್ಚ್ 4ರಿಂದ ಸುರ್ಯ ಶ್ರೀ ಸದಾಶಿವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ – ಬ್ರಹ್ಮರಥ ಸಮರ್ಪಣೆಗೆ ಸಿದ್ಧತೆ

ಬೆಳ್ತಂಗಡಿ: ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ನಡ ಗ್ರಾಮದ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ 2027 ಮಾರ್ಚ್ 4ರಿಂದ 11ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮಗಳಿಗೆ ಸಿದ್ಧತೆಗಳು ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಬ್ರಹ್ಮಕಲಶೋತ್ಸವದ ಮಾಹಿತಿ ಕಚೇರಿ ಉದ್ಘಾಟನೆ, ವಿಜ್ಞಾಪನಾ ಪತ್ರ ಹಾಗೂ ಕೂಪನ್ ಬಿಡುಗಡೆ ಕಾರ್ಯಕ್ರಮ ನವೆಂಬರ್ 19ರಂದು ಬುಧವಾರ ನಡೆಯಿತು.

ಮಾಹಿತಿ ಕಚೇರಿಯನ್ನು ಉದ್ಘಾಟಿಸಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಭಕ್ತರ ನಿರೀಕ್ಷೆಯಂತೆ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲು ಎಲ್ಲರ ಸಹಕಾರ ಅಗತ್ಯವಾಗಿದೆ. ಭಕ್ತರು ಒಂದೇ ಮನಸ್ಸಿನಿಂದ, ಭಕ್ತಿ-ಶ್ರದ್ಧೆಯಿಂದ ಪಾಲ್ಗೊಂಡು ಕ್ಷೇತ್ರದ ಸಾನಿಧ್ಯ ಮತ್ತು ಮಹಿಮೆಯನ್ನು ವೃದ್ಧಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ಪ್ರತಿಯೊಂದು ಮನೆಯ ದುಡಿಮೆಯ ಒಂದು ಅಂಶವನ್ನು ದೇವರ ಸೇವೆಗೆ ಸಮರ್ಪಿಸುವ ಸಂಕಲ್ಪವನ್ನು ಗ್ರಾಮಸ್ಥರು ಮಾಡಬೇಕು. ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯದಲ್ಲಿ ತನು, ಮನ ಮತ್ತು ಧನದ ಮೂಲಕ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ಎಲ್ಲರೂ ಸೇವಾ ಮನೋಭಾವದಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಹೇಳಿದರು.

ಕೂಪನ್ ಬಿಡುಗಡೆಗೊಳಿಸಿದ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯಾಗುತ್ತಿರುವುದು ಕ್ಷೇತ್ರದ ಗತವೈಭವವನ್ನು ಮರುಕಳಿಸುವ ಮಹತ್ವದ ಸಂದರ್ಭವಾಗಿದೆ. ಇಂತಹ ಪುಣ್ಯ ಕಾರ್ಯದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ತೊಡಗಿಸಿಕೊಂಡು ಊರಿನ ಸುಖ, ಸಮೃದ್ಧಿ ಮತ್ತು ಸಂತೋಷಕ್ಕೆ ಕಾರಣರಾಗಬೇಕು ಎಂದು ಆಶಿಸಿದರು.

ಮೂರನೇ ಬ್ರಹ್ಮಕಲಶೋತ್ಸವದ ಸಂಭ್ರಮ:

ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸೂರ್ಯಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ಸುರ್ಯ ಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. 2013ರಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶ ನಡೆದ ಬಳಿಕ 2025ರಲ್ಲಿ ಎರಡನೇ ಬ್ರಹ್ಮಕಲಶ ನೆರವೇರಿತ್ತು. ಇದೀಗ ಮಾರ್ಚ್ ತಿಂಗಳಲ್ಲಿ ಮೂರನೇ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ತಿಳಿಸಿದರು.

ದೇವಸ್ಥಾನದಲ್ಲಿ ಹಿಂದೆ ಬ್ರಹ್ಮರಥವಿತ್ತು ಎಂಬ ಪ್ರತೀತಿ ಇದ್ದು, ಇದೀಗ ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿ ನೂತನ ಬ್ರಹ್ಮರಥವನ್ನು ಸಮರ್ಪಿಸಲಾಗುತ್ತಿದೆ. ಈ ಮಹತ್ವದ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬ ಭಕ್ತರ ಸಹಕಾರವೂ ಅತ್ಯಗತ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಶೋಧರ, ಸಂಗ್ರಾಮ್ ಸೂರ್ಯಗುತ್ತು, ನಡಗುತ್ತು ಧನಂಜಯ ಅಜ್ರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಶೇಖರ ಅಜ್ರಿ, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಮುನಿರಾಜ ಅಜ್ರಿ, ಮೋಹನ್ ಶೆಟ್ಟಿಗಾರ್, ಶಶಿಕಿರಣ್ ಜೈನ್, ಶ್ಯಾಮ್ ಸುಂದರ್ ನಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಡಾ. ಸತೀಶ್ಚಂದ್ರ ಸೂರ್ಯಗುತ್ತು ಸ್ವಾಗತಿಸಿದರು. ನಾವೂರು ಆರೋಗ್ಯ ಕ್ಲಿನಿಕ್‌ನ ಡಾ. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ನಡ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಪ್ರವೀಣ್ ವಿ.ಜಿ. ವಂದಿಸಿದರು.

You may also like

News

ನವಂಬರ್ 25ರಂದು ದಕ್ಷಿಣ ಕನ್ನಡದಲ್ಲಿ ಬೃಹತ್ ರಕ್ತದಾನ ಅಭಿಯಾನ; 14 ರಕ್ತನಿಧಿ ಕೇಂದ್ರಗಳಲ್ಲಿ ಶಿಬಿರ – ಡಾ. ಎಚ್.ಆರ್. ತಿಮ್ಮಯ್ಯ

ಮಂಗಳೂರು: ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಯಾವುದೇ ಜೀವ ಅಪಾಯಕ್ಕೆ ಸಿಲುಕಬಾರದು ಎಂಬ ಮಾನವೀಯ ಆಶಯದೊಂದಿಗೆ ನವೆಂಬರ್ 25ರಂದು ರಾಜ್ಯಾದ್ಯಂತ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ
News

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಬಿಡಿ ಸಿಗರೇಟ್ ಮಾರಾಟಕ್ಕೆ ಕಡಿವಾಣ – ಕಠಿಣ ಕ್ರಮಕ್ಕೆ ADC ಕೆ. ರಾಜು ಸೂಚನೆ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡುವ ಹಾಗೂ ಬಿಡಿಬಿಡಿಯಾಗಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ, ಹೋಟೆಲ್, ಕೆಫೆ ಮತ್ತು ಗೂಡಂಗಡಿಗಳ ವಿರುದ್ಧ

You cannot copy content of this page