ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸ್ಟಾಫ್ ಅಸೋಸಿಯೇಶನ್ ವತಿಯಿಂದ ಕಾಲೇಜಿನಲ್ಲಿ ಸುದೀರ್ಘ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ ಉಪಪ್ರಾಂಶುಪಾಲರಾದ ಡಾ| ಪಿ. ಎಸ್. ಕೃಷ್ಣ ಕುಮಾರ್ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ| ನಾಗರಾಜು ಎಂ. ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ಅತೀ ವಂ| ಲಾರೆನ್ಸ್ ಮಸ್ಕರೇನಸ್‌ರವರು ಡಾ| ಪಿ. ಎಸ್. ಕೃಷ್ಣ ಕುಮಾರ್ ಹಾಗೂ ನಾಗರಾಜು ಎಂ. ರವರ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು “ನಿವೃತ್ತಿಯು ವೃತ್ತಿ ಜೀವನದಿಂದ ಪ್ರವೃತ್ತಿಯೆಡೆಗೆ ನಮ್ಮ ಗಮನವನ್ನು ಹರಿಸಲು ಸಹಕಾರಿಯಾಗುತ್ತದೆ. ತಮ್ಮ ವೃತ್ತಿಜೀವನದುದ್ದಕ್ಕೂ ಈ ಈರ್ವವರು ಪ್ರಾಧ್ಯಾಪಕರೂ ಸಮರ್ಪಣೆ, ಉತ್ಸಾಹ ಮತ್ತು ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಇದು ಸಹೋದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಯಾಗಿದೆ. ಅವರೊಂದಿಗೆ ನಾವು ಕಳೆದ ಸೌಹಾರ್ದಮಯ ದಿನಗಳ ನೆನಪಿಸೋಣ. ಅವರು ವೃತ್ತಿ ಜೀವನದ ಸವಾಲುಗಳನ್ನು ಎದುರಿಸಿದ ಯಶಸ್ವಿಯಗಿದ್ದಾರೆ. ಮುಂದಿನ ದಿನಗಳಲ್ಲಿ ಇವರುಗಳು ಇನ್ನಷ್ಟು ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳಲಿ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು “ನಾವು ಮಾಡುವ ಕೆಲಸದಲ್ಲಿ ಸಂತೋಷವನ್ನು ಕಂಡುಕೊಂಡಾಗ, ಅದು ನಮ್ಮ ಉತ್ಸಾಹವನ್ನು ಉತ್ತೇಜಿಸುತ್ತದೆ, ನಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮನ್ನು ಇನ್ನಷ್ಟು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಲು ಪ್ರೇರೇಪಿಸುತ್ತದೆ. ಉದ್ಯೋಗವೆಂದರೆ ಕೇವಲ ವೇತನ ಹಾಗೂ ಸ್ಥಾನಮಾನಗಳನ್ನು ಹೊಂದುವುದು ಮಾತ್ರವಲ್ಲ ಸ್ವಂತಿಕೆ, ಸೃಜನಶೀಲತೆ, ಹಾಗೂ ಉತ್ಸಾಹದಿಂದ ಕರ್ತವ್ಯ ನಿರ್ವಹಿಸುವುದು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಅವರಿಗೆ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರೇಪಣೆ ನೀಡಿರುತ್ತಾರೆ. ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನೀಡಿದ ಎಲ್ಲಾ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಸಂಸ್ಥೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ“ಎಂದು ಹೇಳಿ ಇನವೃತ್ತ ಜೀವನಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ| ಪಿ. ಎಸ್. ಕೃಷ್ಣ ಕುಮಾರ್ ತಮ್ಮ ವಿದ್ಯಾರ್ಥಿಜೀವನ ಹಾಗೂ ವೃತ್ತಿಜೀವನದ ಸವಿನೆನಪುಗಳನ್ನು ಹಂಚಿಕೊಂಡರು. ಪ್ರೊ| ನಾಗರಾಜು ಎಂ. ರವರು ಮಾತನಾಡಿ ತಮ್ಮ ವೃತ್ತಿಜೀವನದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಸಹಕಾರ ನೀಡಿದ ಪ್ರತಿಯೋರ್ವರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಮಾಲಿನಿ ಕೆ. ಇವರು ಡಾ| ಪಿ. ಎಸ್. ಕೃಷ್ಣ ಕುಮಾರ್‌ರವರಿಗೆ ಸನ್ಮಾನ ಭಾಷಣ ಮಾಡಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಎಡ್ವಿನ್ ಡಿಸೋಜ ಸನ್ಮಾನಪತ್ರ ವಾಚಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಶಿಪ್ರಭಾ ಪ್ರೊ| ನಾಗರಾಜು ಎಂ. ರವರಿಗೆ ಸನ್ಮಾನ ಭಾಷಣ ಮಾಡಿದರು ಪ್ರಾಣಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಶ್ರೀರಕ್ಷಾ ಬಿ. ವಿ. ಸನ್ಮಾನಪತ್ರವನ್ನು ವಾಚಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯ ಕುಮಾರ್ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ವಾರಿಜಾ ಎಂ. ಮತ್ತು ಬಳಗ ಪ್ರಾರ್ಥಿಸಿದರು. ಎಂ.ಕಾಂ. ವಿಭಾಗದ ಸಂಯೋಜಕರಾದ ಹರ್ಷಿತ್ ಕುಮಾರ್ ಸ್ವಾಗತಿಸಿದರು. ಸ್ಟಾಫ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಡಾ| ಡಿಂಪಲ್ ಫೆರ್ನಾಂಡಿಸ್ ವಂದಿಸಿದರು. ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದ ನೊವೆಲಿನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.