ಪಿ.ಯು.ಸಿ. ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಮತ್ತು ಮಗಳು

ಕೆಲಸ ಹೋಗಬಹುದು ಎಂಬ ಹೆದರಿಕೆಯಿಂದ ಪರೀಕ್ಷೆ ಬರೆದೆ – ತಾಯಿ ರವಿಕಲಾ
ಬಂಟ್ವಾಳದ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ತಾಯಿ ಮತ್ತು ಮಗಳು ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಅಪರೂಪದ ಸಂಗತಿಯೊಂದು ನಡೆದಿದೆ.
ಸಿಡಿಪಿಒ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯಾದ 42ರ ಹರೆಯದ ರವಿಕಲಾ ಮತ್ತು ಇವರ ಮಗಳು ತ್ರಿಶಾ ಅವರು ಈ ಬಾರಿ ಪಿಯುಸಿ ಪರೀಕ್ಷೆ ಜೊತೆಯಾಗಿ ಬರೆದು ತಾಲೂಕಿನಲ್ಲಿ ಗಮನಸೆಳೆದಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಇದೀಗ 27 ವರ್ಷಗಳ ಬಳಿಕ ಕೌಟುಂಬಿಕ ಜೀವನದಲ್ಲಿ ಬ್ಯೂಸಿಯಾದ ಸಮಯದಲ್ಲಿ ಮಗಳ ಜೊತೆ ಪರೀಕ್ಷೆ ಬರೆಯುವ ಸಾಹಸಕ್ಕೆ ಕೈಹಾಕಿದ ಮಹಿಳೆಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ರವಿಕಲಾ ಅವರು ಕಲಾ ವಿಭಾಗದವನ್ನು ಆರಿಸಿಕೊಂಡು ಬಂಟ್ವಾಳದ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಪ್ರೌಡ ಶಾಲೆಯಲ್ಲಿ ಪರೀಕ್ಷೆ ಬರೆದು ಶೇಕಡಾ 50 ಪರ್ಸೆಂಟ್ ಅಂಕಗಳನ್ನು ಪಡೆದು ತೇರ್ಗಡೆಯಾದರೆ ಮಗಳು ತ್ರಿಶಾ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ. ಅವಳು ಈ ಬಾರಿ 97.67 ಪರ್ಸೆಂಟ್ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾಳೆ.
ಕೆಲಸ ಹೋಗಬಹುದು ಎಂಬ ಹೆದರಿಕೆಯಿಂದ ಪರೀಕ್ಷೆ ಬರೆದೆ – ರವಿಕಲಾ
ಮಾಣಿಮಜಲು ನಿವಾಸಿ ಮಂಜುನಾಥ್ ಅವರ ಪತ್ನಿ ರವಿಕಲಾ ಅವರು ಬಡ ಕುಟುಂಬದ ಮಹಿಳೆಯಾಗಿದ್ದಾರೆ. ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ತಾರಿಪಡ್ಪು ಅಂಗನಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತ್ರಿಶಾ ಮತ್ತು ತನ್ವಿ ಎಂಬಿಬ್ಬರು ಹೆಣ್ಣು ಮಕ್ಕಳ ಜೊತೆ ಚಿಕ್ಕ ಸಂಸಾರದಲ್ಲಿ ಜೀವನಕ್ಕೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಯೇ ಆಧಾರ. ಆದರೆ ಇದ್ದಕ್ಕಿದ್ದಂತೆ ಬಂದ ಸರಕಾರದ ಅದೇಶವೊಂದು ರವಿಕಲಾ ಅವರಿಗೆ ಪಿಯುಸಿಯನ್ನು ಪಾಸ್ ಮಾಡಲು ಅವಕಾಶ ನೀಡಿದೆ ಎಂದು ಅತ್ಯಂತ ಸಂತಸದಿಂದ ಅವರು ಹೇಳಿಕೊಂಡಿದ್ದಾರೆ.
ಮುಂದೆ ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಶಿಕ್ಷಣ ಪ್ರಾರಂಭವಾಗುವುದರಿಂದ ಕಾರ್ಯಕರ್ತರು ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿರಬೇಕು ಎಂಬ ಆದೇಶ ಸರಕಾರ ಹೊರಡಿಸಿತ್ತು.
ಒಂದು ಕಡೆ ಕೆಲಸಕ್ಕೆ ಕುತ್ತು ಬತುವ ಆಘಾತ ಮತ್ತೊಂದು ಕಡೆ ಪಿಯುಸಿ ಪರೀಕ್ಷೆ ಬರೆಯುವ ಸವಾಲು. ಕೆಲಸ ಹೋದರೆ ಹೆಣ್ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ, ಅದಕ್ಕಾಗಿ ಪಿಯುಸಿ ಪರೀಕ್ಷೆ ಬರೆಯಲು ಮುಂದಾದ ಇವರು ಬಿ.ಸಿ. ರೋಡಿನ ಪಿಯು ಕಾಲೇಜು ಮುಖಾಂತರ ಪರೀಕ್ಷೆ ಬರೆಯಲು ಸಿದ್ದರಾದರು. ಲಿಖಿತ ರೂಪದಲ್ಲಿ ಪರೀಕ್ಷೆಗಾಗಿ ಸಿದ್ದತೆ ನಡೆಸಿದ್ದ ಅವರಿಗೆ ಕೆಲಸದ ಒತ್ತಡ ಪರೀಕ್ಷೆಗಾಗಿ ಓದಿ ತಯಾರು ಮಾಡಲು ಸಾಕಷ್ಟು ಸಮಯ ಸಿಗಲಿಲ್ಲ. ಆದರೂ ಹಣ ಕಟ್ಟಿದ್ದೇನೆ ಎಂಬ ಒಂದೇ ಉದ್ದೇಶದಿಂದ ಪರೀಕ್ಷೆ ಬರೆದೆ ಸಿದ್ದ ಎಂಬ ಛಲದಿಂದ ಪರೀಕ್ಷೆಗೆ ಹಾಜರಾಗಿದ್ದೆ.
ಪರೀಕ್ಷೆ ಹಾಲ್ ಗೆ ಹೋಗುವಾಗ ಒಂದು ರೀತಿಯ ಭಯ ಕಾಡಿತ್ತು. ಎಸ್.ಎಸ್.ಎಲ್.ಸಿ. ಬರೆದು 27 ವರ್ಷಗಳ ಬಳಿಕ ನಾನು ಎಕ್ಸಾಮ್ ಕೊಠಡಿಗೆ ತೆರಳಿದಾಗ ಅಲ್ಲಿರುವ ಮಗಳ ಪ್ರಾಯದ ವಿದ್ಯಾರ್ಥಿಗಳನ್ನು ಕಂಡಾಗ ನನಗೆ ನಾಚಿಕೆ ಯಾಗಿತ್ತು. ಅವರಿಗೂ ನನ್ನ ಮೇಲೆ ಸಂಶಯಗೊಂಡು ಅಂಟಿ ಅವರ ಮಗಳ ಹಾಲ್ ಟಿಕೆಟ್ ನೀಡಲು ಶಾಲೆಗೆ ಬಂದಿರಬೇಕು ಎಂದು ಮಾತನಾಡಿಸಿದ್ದು ನನಗೆ ಮುಜುಗರ ಕೂಡ ಉಂಟು ಮಾಡಿತ್ತು. ಆದರೆ ನನ್ನ ಗಂಡ ಇಬ್ಬರು ಮಕ್ಕಳು, ಕುಟುಂಬದ ಸದಸ್ಯರ ಸಹಕಾರ, ಇಲಾಖೆಯ ಪ್ರೋತ್ಸಾಹ ನನಗೆ ಪಿಯುಸಿ ಪಾಸ್ ಮಾಡಲು ಅವಕಾಶ ನೀಡಿದೆ. ಛಲ ಮತ್ತು ಸಾಧನೆ ಮಾಡಿದರೆ ಯಾವ ವಯಸ್ಸಿನಲ್ಲಿಯೂ ಪರೀಕ್ಷೆ ಬರೆದು ಯಶಸ್ಸು ಕಾಣಬಹುದು ಎಂಬುದು ನಾನು ಕಂಡು ಕೊಂಡ ಸತ್ಯ ವಿಚಾರ ಎಂದು ಅವರು ತಿಳಿಸಿದರು. ಮಗಳ ಜೊತೆ ನಾನು ಪಿಯುಸಿ ಬರೆದೆ ಎಂಬ ಸಂತಸ ಮತ್ತು ಒಂದು ರೀತಿಯ ದಾಖಲೆ ಮಾಡಿದ್ದೇನೆ ಎಂಬ ಖುಷಿಯಿಂದ ನಾನಿದ್ದೇನೆ ಎಂದು ಅವರು ತಿಳಿಸಿದ್ದಾರೆ.