August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮೇಂದ್ರ ಪ್ರಧಾನ್ ರಾಜೀನಾಮೆ – ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿಗೆ ಹೆಚ್ಚುವರಿ ಜವಾಬ್ದಾರಿ

ಜಂತರ್‌-ಮಂತರ್ ವಿದ್ಯಾರ್ಥಿ ಹೋರಾಟಕ್ಕೆ ತೆರೆ – ಪ್ರತಿಭಟನಾಕಾರರ ಮೇಲಿನ FIR ಹಿಂಪಡೆಯಲು ಕೇಂದ್ರ ಸಮ್ಮತಿ; ಶಿಕ್ಷಣ ಸುಧಾರಣೆಗೆ ಭರವಸೆ

ದೇಶದಾದ್ಯಂತ ಸಂಚಲನ ಮೂಡಿಸಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಹಾಗೂ ವಿದ್ಯಾರ್ಥಿಗಳ ನಿರಂತರ ಪ್ರತಿಭಟನೆಯ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ರಾಜೀನಾಮೆಯನ್ನು ಅಂಗೀಕರಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯ ಜಂತರ್‌-ಮಂತರ್‌ನಲ್ಲಿ ಕಳೆದ ಹಲವು ವಾರಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿ ಹೋರಾಟಕ್ಕೂ ಅಂತ್ಯ ಹಾಡಲಾಗಿದೆ. ಪ್ರತಿಭಟನೆಗೆ ನೇತೃತ್ವ ನೀಡಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಸರ್ಕಾರದೊಂದಿಗೆ ನಡೆದ ಮೂರು ಸುತ್ತಿನ ಮಾತುಕತೆಯ ಬಳಿಕ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಘೋಷಿಸಿದೆ.

ಸರ್ಕಾರದೊಂದಿಗೆ ಒಪ್ಪಂದ:

ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಅವರೊಂದಿಗೆ ನಡೆದ ಮಾತುಕತೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿ ಪ್ರತಿನಿಧಿಗಳಾದ ಅಶುತೋಷ್ ರಂಕಾ ಹಾಗೂ ಸೌರವ್ ದಾಸ್, ತಮ್ಮ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದರು. ಪ್ರತಿಭಟನೆಯ ಪ್ರಮುಖ ಬೇಡಿಕೆಗಳಲ್ಲಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಪ್ರತಿಭಟನಾಕಾರರು ಹಾಗೂ ಸಂಘಟಕರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದು, ಭವಿಷ್ಯದಲ್ಲಿ ಯಾವುದೇ ಪ್ರಕರಣ ದಾಖಲಿಸದಿರುವುದು ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಜಾರಿಗೆ ತರುವುದು ಸೇರಿದ್ದವು.

FIR ಹಿಂಪಡೆಯಲು ಒಪ್ಪಿಗೆ:

ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಶಿಕ್ಷಣ ಸುಧಾರಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘಟನೆಗಳು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಮುಂದಿನ ಹಂತದಲ್ಲಿ ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದೆ.

“ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜೀನಾಮೆ”:

ರಾಜೀನಾಮೆ ಕುರಿತು ಪ್ರಕಟಣೆ ನೀಡಿರುವ ಧರ್ಮೇಂದ್ರ ಪ್ರಧಾನ್, ದೇಶದ ವಿದ್ಯಾರ್ಥಿಗಳ ಭವಿಷ್ಯ ಮತ್ತು ರಾಷ್ಟ್ರೀಯ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಪ್ರತಿಭಟನೆ ಮತ್ತಷ್ಟು ಉಲ್ಬಣಗೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಹಾಗೂ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಅವಕಾಶ ಯಾರಿಗೂ ಸಿಗಬಾರದು ಎಂಬ ಕಾರಣಕ್ಕೆ ಪ್ರಧಾನಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಪ್ರಹ್ಲಾದ್ ಜೋಶಿಗೆ ಶಿಕ್ಷಣ ಸಚಿವಾಲಯದ ಜವಾಬ್ದಾರಿ:

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಬೆನ್ನಲ್ಲೇ, ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಈ ಕುರಿತು ರಾಷ್ಟ್ರಪತಿ ಭವನ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ತಕ್ಷಣದಿಂದಲೇ ಆದೇಶ ಜಾರಿಗೆ ಬಂದಿದೆ.

35 ದಿನಗಳ ಹೋರಾಟಕ್ಕೆ ತೆರೆ :

ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಆರಂಭವಾದ ವಿದ್ಯಾರ್ಥಿ ಚಳವಳಿ, ಬಳಿಕ ದೇಶಾದ್ಯಂತ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸುಧಾರಣೆಯ ಬೇಡಿಕೆಯೊಂದಿಗೆ ಬೃಹತ್ ಜನಾಂದೋಲನವಾಗಿ ರೂಪುಗೊಂಡಿತ್ತು. 35 ದಿನಗಳ ಕಾಲ ನಡೆದ ಪ್ರತಿಭಟನೆಗೆ ಸರ್ಕಾರದ ಮಹತ್ವದ ನಿರ್ಧಾರಗಳ ಬಳಿಕ ಅಂತ್ಯ ಸಿಕ್ಕಿದ್ದು, ಪ್ರತಿಭಟನಾಕಾರರು ಶಾಂತಿಯುತವಾಗಿ ಹಿಂತಿರುಗುವಂತೆ ಸಿಜೆಪಿ ನಾಯಕತ್ವ ಮನವಿ ಮಾಡಿದೆ.

ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ:

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸಮ್ಮತಿ ಸೂಚಿಸಿರುವ ಬೆಳವಣಿಗೆಗಳು ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರ ಮತ್ತು ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗುತ್ತಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸ ಮರುಸ್ಥಾಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳತ್ತ ದೇಶದ ಗಮನ ನೆಟ್ಟಿದೆ.

 

 

You may also like

News

ನೀರುಮಾರ್ಗದ ಚರ್ಚ್ ನ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಸಾಂಪ್ರದಾಯಿಕ ಆಹಾರ ಹಬ್ಬದ ಸಂಭ್ರಮ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸಂತ ಜೋಸೆಫ್ ಕಾರ್ಮಿಕರ ದೇವಾಲಯದ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ‘ಸಾಂಪ್ರದಾಯಿಕ ಆಹಾರ ಹಬ್ಬ’
News

Father Muller College of Nursing Strengthens Academic Collaborations Through Two more Strategic MoUs on Palliative Care and Counselling

Reinforcing its commitment to holistic nursing education, interdisciplinary learning, and community-oriented healthcare, Father Muller School & College of Nursing (FMCON)

You cannot copy content of this page