September 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಹನೂರು ಶೂಟೌಟ್‌ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಲು ಆರ್ಚ್‌ಬಿಷಪ್ ಡಾ. ಪೀಟರ್ ಮಚಾದೊ ಆಗ್ರಹ

ಮೂವರ ಸಾವಿನ ಸತ್ಯ ಹೊರಬರಲಿ; ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಿ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮಹಾ ಧರ್ಮಕ್ಷೇತ್ರದ ಆರ್ಚ್‌ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಮಚಾದೊ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಘಟನೆಯ ಸಂಪೂರ್ಣ ಸತ್ಯ ಹೊರಬರಲು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಮೃತಪಟ್ಟ 50  ವರ್ಷ ಪ್ರಾಯದ ಆಂಟೋನಿ ಸ್ವಾಮಿ, 42  ವರ್ಷ ಪ್ರಾಯದ ಜೋನ್ ರೋಸ್ ಪೀಟರ್ ಹಾಗೂ 33 ವರ್ಷ ಪ್ರಾಯದ ಆಂಥೋನಿ ಕುಮಾರ್ ಅವರ ಕುಟುಂಬಗಳಿಗೆ ಆರ್ಚ್‌ಬಿಷಪ್ ಅವರು ಸಂತಾಪ ಸೂಚಿಸಿದ್ದು, ದುಃಖದಲ್ಲಿರುವ ಕುಟುಂಬಗಳಿಗೆ ನ್ಯಾಯ ದೊರಕಿಸುವುದು ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ.

ಕಾಯ್ದಿರಿಸಿದ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ, ಬೇಟೆ ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಕೇವಲ ಆರೋಪಗಳ ಆಧಾರದ ಮೇಲೆ ಮಾನವ ಜೀವವನ್ನು ಕಳೆದುಕೊಳ್ಳುವಂತಹ ಕ್ರಮವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಆರ್ಚ್‌ಬಿಷಪ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಘಟನೆಯ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗೆ ನಿಜವಾಗಿಯೂ ಜೀವಭಯದ ಪರಿಸ್ಥಿತಿ ಎದುರಾಗಿತ್ತೇ? ಮಾರಕ ಗುಂಡಿನ ದಾಳಿ ನಡೆಸುವುದು ಅನಿವಾರ್ಯವಾಗಿತ್ತೇ? ಗುಂಡಿನ ದಾಳಿಗೆ ಮುನ್ನ ಮತ್ತು ನಂತರ ನಿಖರವಾಗಿ ಏನಾಯಿತು? ಎಂಬ ಪ್ರಮುಖ ಪ್ರಶ್ನೆಗಳಿಗೆ ಯಾವುದೇ ಅನುಮಾನಕ್ಕೂ ಅವಕಾಶವಿಲ್ಲದಂತೆ ಉತ್ತರ ದೊರಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆರ್ಚ್‌ಬಿಷಪ್ ಅವರ ಪ್ರಮುಖ ಆಗ್ರಹಗಳು:

ನ್ಯಾಯಾಂಗ ತನಿಖೆ: ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು.

ಕುಟುಂಬಗಳಿಗೆ ಪರಿಹಾರ: ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರಧನ ನೀಡಬೇಕು. ಜೊತೆಗೆ ಪ್ರತಿಯೊಂದು ಕುಟುಂಬದ ಅರ್ಹ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು.

ಎಲ್ಲರ ಪಾತ್ರವೂ ತನಿಖೆಯಾಗಲಿ: ಹನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದ FIR ದಾಖಲಾಗಿದ್ದರೂ ಯಾವುದೇ ಅರಣ್ಯ ಸಿಬ್ಬಂದಿಯ ಹೆಸರನ್ನು ಉಲ್ಲೇಖಿಸದಿರುವುದು ಕಳವಳಕಾರಿ. ಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಸಿಬ್ಬಂದಿಯ ಪಾತ್ರವನ್ನೂ ತನಿಖೆಗೆ ಒಳಪಡಿಸಬೇಕು.

ಆರ್ಚ್‌ಬಿಷಪ್ ಅವರು ಯಾವುದೇ ಒಂದು ವಾದವನ್ನು ಮುಂಚಿತವಾಗಿ ಸತ್ಯವೆಂದು ಪರಿಗಣಿಸದೆ, ಘಟನಾ ಸ್ಥಳದ ಸಾಕ್ಷ್ಯಗಳು, ಮರಣೋತ್ತರ ಪರೀಕ್ಷೆ, ಫೊರೆನ್ಸಿಕ್‌ ಹಾಗೂ ಬ್ಯಾಲಿಸ್ಟಿಕ್‌ ವರದಿಗಳು ಮತ್ತು ಸಾಕ್ಷಿದಾರರ ಹೇಳಿಕೆಗಳ ಆಧಾರದ ಮೇಲೆ ಸತ್ಯವನ್ನು ಹೊರತರಬೇಕು ಎಂದು ಒತ್ತಾಯಿಸಿದ್ದಾರೆ.

ಮೂರು ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ಅವರಿಗೆ ಪರಿಹಾರ ಮಾತ್ರವಲ್ಲ, ತಮ್ಮವರ ಸಾವಿನ ಹಿಂದಿನ ನಿಜವಾದ ಸತ್ಯ ತಿಳಿಯುವ ಹಕ್ಕು ಕೂಡ ಇದೆ. ಆದ್ದರಿಂದ ಯಾವುದೇ ಒತ್ತಡ, ಪೂರ್ವಾಗ್ರಹ ಅಥವಾ ಇಲಾಖಾ ಪ್ರಭಾವವಿಲ್ಲದೆ ತನಿಖೆ ನಡೆಯಬೇಕು ಎಂಬುದು ಕ್ರೈಸ್ತ ಸಮುದಾಯದ ಒತ್ತಾಯವಾಗಿದೆ.

“ಜೀವಹಾನಿ ಅನಿವಾರ್ಯವಾಗಿತ್ತೇ ಎಂಬ ಸತ್ಯ ತನಿಖೆಯಿಂದ ಹೊರಬರಲಿ; ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಮುಂದೆ ಉತ್ತರಿಸಬೇಕು” ಎಂಬ ಸಂದೇಶದೊಂದಿಗೆ ಆರ್ಚ್‌ಬಿಷಪ್ ಡಾ. ಪೀಟರ್ ಮಚಾದೊ ಅವರು ಸರ್ಕಾರವನ್ನು ನ್ಯಾಯಾಂಗ ತನಿಖೆಗೆ ಮುಂದಾಗುವಂತೆ ಆಗ್ರಹಿಸಿದ್ದಾರೆ.

You may also like

News

ಬೆಟ್ಟಂಪಾಡಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣ ಭೇದಿಸಿದ ಪುತ್ತೂರು ಪೊಲೀಸರು – ಅಂತರ್‌ರಾಜ್ಯ ಕಳ್ಳನ ಬಂಧನ

ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಭೇದಿಸಿ, ಕೇರಳ ಮೂಲದ ಅಂತರ್‌ರಾಜ್ಯ ಕಳ್ಳತನ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬೆಟ್ಟಂಪಾಡಿ
News

₹29 Lakh Donation to Father Muller for Paediatric Cancer Care Through ‘Symphony of Hope’

Music, compassion and community come together to support children battling cancer In a remarkable initiative that brought together music, compassion

You cannot copy content of this page