ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೈಂದೂರಿನ ಆಶಾ ವೀಣಾ ಡಯಾಸ್ ಅವರಿಗೆ ದ್ವಿತೀಯ ಸ್ಥಾನ
ಕಿರಣ್ ಬೇಡಿ ಅವರ ಕುರಿತು 5 ನಿಮಿಷಗಳ ಭಾಷಣ – ಪ್ರತಿಭೆಗೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ

ಕರ್ನಾಟಕ ರಾಜ್ಯದ ಸಮಾಜ ವಿಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾರತದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಕುರಿತು ಕೇವಲ ಐದು ನಿಮಿಷಗಳಲ್ಲಿ ನಿರರ್ಗಳವಾಗಿ ಮಾತನಾಡಿ, ಬೈಂದೂರಿನ ಆಶಾ ವೀಣಾ ಡಯಾಸ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.
ರಾಜ್ಯಮಟ್ಟದಲ್ಲಿ ನಡೆದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ತಮ್ಮ ಸ್ಪಷ್ಟ ಮಾತುಗಾರಿಕೆ, ವಿಷಯ ಮಂಡನೆ ಹಾಗೂ ಆತ್ಮವಿಶ್ವಾಸದ ಮೂಲಕ ಗಮನ ಸೆಳೆದ ಆಶಾ ವೀಣಾ ಡಯಾಸ್ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಶೇಷವಾಗಿ, ಕಿರಣ್ ಬೇಡಿ ಅವರ ಜೀವನ, ಸೇವಾ ಮನೋಭಾವ, ಧೈರ್ಯ ಹಾಗೂ ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆಗಳನ್ನು ಪರಿಣಾಮಕಾರಿಯಾಗಿ ಮಂಡಿಸುವ ಮೂಲಕ ಅವರು ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು. ಈ ಸಾಧನೆಯ ಮೂಲಕ ಆಶಾ ವೀಣಾ ಡಾಯಸ್ ಅವರು ತಮ್ಮ ಪ್ರತಿಭೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ, ಯುವಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಪ್ರೇರಣೆಯಾಗಿದ್ದಾರೆ.

ಆಶಾ ವೀಣಾ ಡಯಾಸ್ ಅವರ ಈ ಸಾಧನೆ ಬೈಂದೂರಿಗೆ ಹೆಮ್ಮೆ ತಂದಿದ್ದು, ಅವರ ಪ್ರತಿಭೆ ಹಾಗೂ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಸಮಾಜ ಮತ್ತು ಆರೋಗ್ಯ ಹಾಗೂ ಶಿಕ್ಷಣ ಸಮಿತಿಯ ವತಿಯಿಂದ ಆಶಾ ವೀಣಾ ಡಾಯಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.



