ಕುತ್ಲುರು ಸರ್ಕಾರಿ ಶಾಲೆಗೆ ಗ್ಲೋಬಲ್ ಸಿಂಪತಿ ಫೌಂಡೇಶನ್ ಆರ್ಥಿಕ ನೆರವು
ಗ್ರಾಮೀಣ ಮಕ್ಕಳಿಗೆ ಉಚಿತ ಜೂಡೋ ತರಬೇತಿ ನೀಡುವ ಭರವಸೆ – ಶಾಲೆಯ ಪರಿಸರ ಪ್ರೇಮಕ್ಕೆ ಮೆಚ್ಚುಗೆ

ಬೆಳ್ತಂಗಡಿ ತಾಲೂಕಿನ ಕುತ್ಲುರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಗ್ಲೋಬಲ್ ಸಿಂಪತಿ ಫೌಂಡೇಶನ್ ವತಿಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲಾಯಿತು.

ಅಂತರಾಷ್ಟ್ರೀಯ ಜೂಡೋ ತರಬೇತುದಾರ ಹಾಗೂ ಕರ್ನಾಟಕ ಸ್ಟೇಟ್ ಜೂಡೋ ಅಸೋಸಿಯೇಷನ್ ಅಧ್ಯಕ್ಷ ಯತೀಶ್ ಎನ್. ಬಂಗೇರಾ ಹಾಗೂ ಗ್ಲೋಬಲ್ ಸಿಂಪತಿ ಫೌಂಡೇಶನ್ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣಕ್ಕೆ ನೀಡುತ್ತಿರುವ ಆದ್ಯತೆಯನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಆವರಣದಲ್ಲಿರುವ ಫ್ರೂಟ್ಸ್ ಪಾರ್ಕ್‌ನಲ್ಲಿ ರಂಬೂಟಾನ್ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುವ ಉದ್ದೇಶದಿಂದ ಗ್ಲೋಬಲ್ ಸಿಂಪತಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತರಾಷ್ಟ್ರೀಯ ಜೂಡೋ ತರಬೇತುದಾರ ಯತೀಶ್ ಎನ್. ಬಂಗೇರಾ, ಗ್ರಾಮೀಣ ಪ್ರದೇಶದಲ್ಲಿರುವ ಕುತ್ಲುರು ಸರ್ಕಾರಿ ಶಾಲೆ ಉತ್ತಮ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿಯೂ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಜೂಡೋ ತರಬೇತಿ ನೀಡುವ ಉದ್ದೇಶವಿದ್ದು, ಒಲಿಂಪಿಕ್ಸ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗ್ರಾಮೀಣ ಪ್ರತಿಭೆಗಳು ಭಾಗವಹಿಸಿ ಸಾಧನೆ ಮಾಡುವಂತೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕನಕ ವರ್ಮ ಜೈನ್, ಶಾಲಾ ಮುಖ್ಯ ಶಿಕ್ಷಕಿ ಫ್ಲೆವಿಯಾ ಡಿಸೋಜ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



