October 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶ

ವ್ಯಸನಮುಕ್ತ ಬದುಕಿನಿಂದ ಕುಟುಂಬ–ಸಮಾಜದ ಪ್ರಗತಿ ಸಾಧ್ಯ- ಡಿ. ವೀರೇಂದ್ರ ಹೆಗ್ಗಡೆ

ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ದುಶ್ಚಟಗಳಿಂದ ದೂರವಿದ್ದು ಸತ್ಕಾರ್ಯಗಳನ್ನು ಮಾಡುವ ಮೂಲಕ ಜೀವನವನ್ನು ಪಾವನಗೊಳಿಸಬೇಕು. ಮನಸ್ಸು ಹಾಗೂ ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಾರ್ಥಕ ಜೀವನ ನಡೆಸಬೇಕು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.

ಋಷಿ-ಮುನಿಗಳು, ವೇದಗಳು, ಪುರಾಣಗಳು ಹಾಗೂ ಉಪನಿಷತ್ತುಗಳು ಸಾರ್ಥಕ ಜೀವನ ನಡೆಸಲು ಅಗತ್ಯವಾದ ಅನೇಕ ಉಪದೇಶ ಹಾಗೂ ಮಾರ್ಗದರ್ಶನಗಳನ್ನು ನೀಡಿವೆ. ಅವುಗಳ ಸದುಪಯೋಗ ಪಡೆದುಕೊಂಡು ಮಾನವ ಜನ್ಮವನ್ನು ಸಾರ್ಥಕಗೊಳಿಸಬೇಕು ಎಂದು ಅವರು ಹೇಳಿದರು.

ಮದ್ಯಪಾನ ಸಮಾಜಕ್ಕೆ ದೊಡ್ಡ ಕಂಟಕವಾಗಿದ್ದು, ಕುಟುಂಬದ ಒಬ್ಬ ವ್ಯಕ್ತಿ ವ್ಯಸನಮುಕ್ತನಾದರೂ ಇಡೀ ಕುಟುಂಬದಲ್ಲಿ ಸುಧಾರಣೆ ಉಂಟಾಗುತ್ತದೆ. ಇದರಿಂದ ಸಮಾಜದ ಪ್ರಗತಿಗೂ ಸಹಕಾರಿಯಾಗುತ್ತದೆ ಎಂದು ಸ್ವಾಮೀಜಿ ಹೇಳಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಮದ್ಯವರ್ಜನ ಶಿಬಿರಗಳ ಮೂಲಕ ಅನೇಕ ಮಂದಿ ವ್ಯಸನಮುಕ್ತರಾಗಿ ಸುಖ, ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು.

ನವಜೀವನ ಸಾಧಕರು ನಂದಾದೀಪದಂತೆ ಬೆಳಗಲಿ – ಹೇಮಾವತಿ ವೀ. ಹೆಗ್ಗಡೆ

ನವಜೀವನ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಹೇಮಾವತಿ ವೀ. ಹೆಗ್ಗಡೆ, ವ್ಯಸನಮುಕ್ತರಾದವರು ದೃಢಸಂಕಲ್ಪದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಕರೆ ನೀಡಿದರು.

“ನುಡಿದಂತೆ ನಡೆದರೆ ಮಾತಿಗೆ ಬೆಲೆ ಬರುತ್ತದೆ. ಮಾತೇ ಮಾಣಿಕ್ಯವಾಗುತ್ತದೆ” ಎಂದು ಹೇಳಿದ ಅವರು, ಜನಜಾಗೃತಿ ವೇದಿಕೆಯ ಕಾರ್ಯಕರ್ತರು ಹಾಗೂ ನವಜೀವನ ಸದಸ್ಯರು ನಿಷ್ಠೆ, ಕರ್ತವ್ಯಪ್ರಜ್ಞೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ವೇದಿಕೆಯ ಚಟುವಟಿಕೆಗಳು ಯಶಸ್ವಿಯಾಗುತ್ತಿವೆ ಎಂದರು.

ವ್ಯಸನಮುಕ್ತರಾದವರು ನಂದಾದೀಪದಂತೆ ಬೆಳಗಿ, ತಮ್ಮ ಬದುಕಿನ ಮೂಲಕ ಇತರರಿಗೂ ದಾರಿದೀಪವಾಗಬೇಕು ಎಂದು ಅವರು ಸಲಹೆ ನೀಡಿದರು.

ವ್ಯಸನಮುಕ್ತಿಯಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ – ಡಿ. ವೀರೇಂದ್ರ ಹೆಗ್ಗಡೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ವ್ಯಸನಮುಕ್ತರಾದವರಿಂದ ಕುಟುಂಬದಲ್ಲಿನ ಆರ್ಥಿಕ ಬಡತನ ಹಾಗೂ ಹೃದಯದ ಬಡತನ ದೂರವಾಗಿ, ಆರ್ಥಿಕ ಸ್ವಾವಲಂಬನೆಯೊಂದಿಗೆ ಸುಖ-ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ಇಂತಹ ಸುಧಾರಣಾ ಕಾರ್ಯಕ್ರಮಗಳು ಸಮಾಜಕ್ಕೆ ವಿಶಿಷ್ಟ ಕೊಡುಗೆಯಾಗಿದ್ದು, ಇದು ಮಹಾತ್ಮ ಗಾಂಧೀಜಿಯವರಿಗೆ ಅರ್ಪಿಸುವ ಅರ್ಥಪೂರ್ಣ ಕೊಡುಗೆಯಾಗಿದೆ ಎಂದು ಅವರು ಹೇಳಿದರು.

ಮದ್ಯವ್ಯಸನ ಮುಕ್ತರ ಪರವಾಗಿ ಕೇಶವ ಚಾರ್ಮಾಡಿ ಹಾಗೂ ಸುಕನ್ಯಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್ ಆಶಯ ಭಾಷಣ ಮಾಡಿದರು.

ಶಾಸಕ ಹರೀಶ್ ಪೂಂಜ, ಮಾಜಿ ಎಂಎಲ್‌ಸಿ ಕೆ. ಪ್ರತಾಪಸಿಂಹ ನಾಯಕ್, ನಟರಾಜ ಬಾದಾಮಿ ಹಾಗೂ ಮಂಗಳೂರಿನ ಪ್ರಕಾಶ್ ಕಾರಂತ್ ಶುಭ ಹಾರೈಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಧನ್ಯವಾದವಿತ್ತರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

You may also like

News

ಕರ್ತವ್ಯದಲ್ಲೇ ವಿದ್ಯುತ್ ಸ್ಪರ್ಶ – ಬಂಟ್ವಾಳದ ಕೆದಿಲದಲ್ಲಿ ಲೈನ್‌ಮ್ಯಾನ್ ರವಿ ದುರ್ಮರಣ

ಬಂಟ್ವಾಳ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಲೈನ್‌ಮ್ಯಾನ್‌ವೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ನಡೆದಿದೆ. ಮೃತರನ್ನು ಕೆದಿಲ ಪಾಟ್ರಕೋಡಿ–ಮಿತ್ತೂರು ಗಡಿಯಾರ ನಿವಾಸಿ
News

ಬಿಜೈ ಕಾಪಿಕಾಡ್ ಅಂಗನವಾಡಿ ಪುಟಾಣಿಗಳಿಗೆ ನೆರವಿನ ಹಸ್ತ – ಬಟ್ಟೆ ಬ್ಯಾಗ್ ಹಾಗೂ ಸಿಹಿತಿಂಡಿ ವಿತರಣೆ

ಮಂಗಳೂರು: ಮುಂಬೈನ ಲೋಬೊ ಫೌಂಡೇಶನ್ ಹಾಗೂ ಗ್ಲೋಬಲ್ ಸಿಂಪಥಿ ಫೌಂಡೇಶನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಬಿಜೈ ಕಾಪಿಕಾಡ್ ಅಂಗನವಾಡಿ

You cannot copy content of this page