ಬೆಳ್ತಂಗಡಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ
ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರದೊಂದಿಗೆ ಸ್ಪಂದನೆ – ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಲಭ್ಯವಿರುವ ವಿವಿಧ ಸರ್ಕಾರಿ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡುವ ಕಾರ್ಯಾಗಾರ ಬೆಳ್ತಂಗಡಿ ಚರ್ಚ್ ಆಡಿಟೋರಿಯಂನಲ್ಲಿ ನಡೆಯಿತು.
ಕಥೊಲಿಕ್ ಸಭಾ ಬೆಳ್ತಂಗಡಿ ಘಟಕ ಹಾಗೂ ಬೆಳ್ತಂಗಡಿ ವಲಯ ಪಾಲನಾ ಸಮಿತಿ ಸಹಯೋಗದಲ್ಲಿ ಅಕ್ಟೋಬರ್ 4ರಂದು ಭಾನುವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಮುದಾಯದವರಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.




ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ವಾಲ್ಟರ್ ಓಸ್ವಾಲ್ಡ್ ಡಿಮೆಲ್ಲೊ ವಹಿಸಿದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು.
ಉದ್ಘಾಟನಾ ಭಾಷಣದಲ್ಲಿ ಹರೀಶ್ ಪೂಂಜ ಅವರು, ಕ್ರಿಶ್ಚಿಯನ್ ಸಮುದಾಯಕ್ಕೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.








ಈ ಸಂದರ್ಭದಲ್ಲಿ ಶಾಸಕರಿಗೆ ‘ಬೆಸ್ಟ್ ಅವಾರ್ಡ್–2025’ ಹಾಗೂ ‘ಉತ್ತಮ ಶಾಸಕ ಪ್ರಶಸ್ತಿ’ ಲಭಿಸಿರುವ ಹಿನ್ನೆಲೆಯಲ್ಲಿ ಕಥೊಲಿಕ್ ಕ್ರಿಶ್ಚಿಯನ್ ಸಮುದಾಯದ ಪರವಾಗಿ ಸನ್ಮಾನಿಸಲಾಯಿತು. ಶಾಸಕರ ಸನ್ಮಾನ ಪತ್ರವನ್ನು ಪಾಲನಾ ಸಮಿತಿ ಸದಸ್ಯೆ ಐರಿನ್ ಸಿಕ್ವೇರಾ ವಾಚಿಸಿದರು.







ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೆರಾಲ್ಡ್ ಡಿಸೋಜ ಅವರು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ ಕ್ರಿಶ್ಚಿಯನ್ ಸಮುದಾಯಕ್ಕೆ ಲಭ್ಯವಿರುವ ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಂದನೀಯ ಫಾದರ್ ವಾಲ್ಟರ್ ಓಸ್ವಾಲ್ಡ್ ಡಿಮೆಲ್ಲೊ ಅವರು ಶಾಸಕರ ಕಾರ್ಯವೈಖರಿಯನ್ನು ಅಭಿನಂದಿಸಿದರು.


ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷ ಆಲ್ಬರ್ಟ್ ಸುನಿಲ್ ಮೋನಿಸ್ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಆಶಾ ಸಲ್ಡಾನ್ಹಾ ವಂದಿಸಿದರು. ಕಥೊಲಿಕ್ ಸಭಾ ರಾಜಕೀಯ ಸಂಚಾಲಕ ಸ್ಟಾನಿ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ವಲಯ ಪಾಲನಾ ಸಮಿತಿ ಕಾರ್ಯದರ್ಶಿ ವಾಲ್ಟರ್ ಮೋನಿಸ್ ಹಾಗೂ ಬೆಳ್ತಂಗಡಿ ಘಟಕ ಕಥೊಲಿಕ್ ಸಭಾ ಅಧ್ಯಕ್ಷ ಗಿಲ್ಬರ್ಟ್ ಪಿಂಟೊ ಉಪಸ್ಥಿತರಿದ್ದರು.





