August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭೇಟಿ – ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ, ಹೆಗ್ಗಡೆಯವರೊಂದಿಗೆ ಚರ್ಚೆ

ಭಾರತದ ಉಪರಾಷ್ಟ್ರಪತಿಗಳಾದ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಮೇ 31ರಂದು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ಸಾಂಪ್ರದಾಯಿಕ ಉಡುಪಿನಲ್ಲಿ ದೇವರ ದರ್ಶನ:

ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿ ದೇವಸ್ಥಾನಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳಿಗೆ ಕ್ಷೇತ್ರದ ವತಿಯಿಂದ ಭವ್ಯ ಹಾಗೂ ಸಾಂಪ್ರದಾಯಿಕ ಸ್ವಾಗತವನ್ನು ಕೋರಲಾಯಿತು. ತದನಂತರ ಅವರು ಗರ್ಭಗುಡಿಯೊಳಗೆ ಪ್ರವೇಶಿಸಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕರ್ನಾಟಕದ ಘನತವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉಪರಾಷ್ಟ್ರಪತಿಗಳ ಜೊತೆಯಲ್ಲಿದ್ದರು.

 

ಅನ್ನಪೂರ್ಣ ಛತ್ರಕ್ಕೆ ಭೇಟಿ:

ದೇವರ ದರ್ಶನದ ಬಳಿಕ ಉಪರಾಷ್ಟ್ರಪತಿಗಳು ಧರ್ಮಸ್ಥಳದ ಪ್ರಸಿದ್ಧ ‘ಅನ್ನಪೂರ್ಣ’ ಮಹಾ ಅನ್ನದಾಸೋಹ ಛತ್ರಕ್ಕೆ ಭೇಟಿ ನೀಡಿದರು. ಪ್ರತಿದಿನ ಸಾವಿರಾರು ಭಕ್ತರಿಗೆ ಉಚಿತವಾಗಿ ಅನ್ನಪ್ರಸಾದ ನೀಡುವ ದಾಸೋಹ ವ್ಯವಸ್ಥೆ ಹಾಗೂ ಅಲ್ಲಿನ ಅಚ್ಚುಕಟ್ಟುತನವನ್ನು ಕಂಡು ಅವರು ಸಂತಸ ವ್ಯಕ್ತಪಡಿಸಿದರು.

ಧರ್ಮಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ:

ನಂತರ ಉಪರಾಷ್ಟ್ರಪತಿಗಳು ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಕೆಲಕಾಲ ಮಹತ್ವದ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ ವತಿಯಿಂದ ನಡೆಯುತ್ತಿರುವ ವಿವಿಧ ಜನಪರ ಕಾರ್ಯಕ್ರಮಗಳ ಬಗ್ಗೆ ಉಪರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದರು.

ಕ್ಷೇತ್ರದ ಸೇವಾ ಕಾರ್ಯಗಳಿಗೆ ಶ್ಲಾಘನೆ:

ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಕ್ಷೇತ್ರದ ವತಿಯಿಂದ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಉಚಿತ ಆರೋಗ್ಯ ಸೇವೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಅವರು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಗಣ್ಯರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

 

You may also like

News

ಕಸ ಗುಡಿಸುವ ಕಾಯಕದಿಂದ ಫಾರ್ಚುನರ್‌ವರೆಗೆ – ಸೇಸಪ್ಪ ಅವರ ಯಶೋಗಾಥೆ!

ಬಡತನ ಕನಸು ಕಾಣುವುದಕ್ಕೆ ಅಡ್ಡಿಯಾಗದು ಎಂಬುದಕ್ಕೆ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಹಾಗೂ ಬಂಟ್ವಾಳ ಪುರಸಭೆಯ ಪೌರಕಾರ್ಮಿಕ ಸೇಸಪ್ಪ ಅವರ ಬದುಕು ಉತ್ತಮ ಉದಾಹರಣೆ. ಲಕ್ಷಾಂತರ ರೂಪಾಯಿ
News

ಪೊಂಪೈ ಕಾಲೇಜು ಐಕಳದಲ್ಲಿ ಮಾದಕ ವಸ್ತು, ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ

ಯುವಜನತೆ ಜಾಗೃತರಾದರೆ ಸಮಾಜ ಸುಧಾರಣೆ ಸಾಧ್ಯ – ಗಣೇಶ್ ಕುಮಾರ್ ಪೊಂಪೈ ಕಾಲೇಜು ಐಕಳದ ಆಂತರಿಕ ಗುಣಮಟ್ಟ ಭರವಸೆ ಕೋಶ, ಮಾನವ ಕಳ್ಳಸಾಗಣೆ ವಿರೋಧಿ ಸಂಘ, ಮಾದಕ

You cannot copy content of this page