July 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಜೆಪ್ಪು ಮತ್ತು ಮಿಲಾಗ್ರಿಸ್‌ನಲ್ಲಿ ಭಕ್ತಿಸಾಗರ – ಸಂತ ಅಂತೋನಿಯವರ ವಾರ್ಷಿಕ ಹಬ್ಬದ ಸಂಭ್ರಮ

ಕಳೆದುಹೋದ ವಸ್ತುಗಳನ್ನಷ್ಟೇ ಅಲ್ಲ, ಕಳೆದುಹೋದ ದೈವತ್ವವನ್ನು ಹುಡುಕಿಕೊಳ್ಳಿ – ಬಿಷಪ್ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ

ಜಗತ್ಪ್ರಸಿದ್ಧ ಪವಾಡ ಪುರುಷ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವವು ನಗರದ ಜೆಪ್ಪುವಿನ ಸಂತ ಅಂತೋನಿ ಆಶ್ರಮ ಹಾಗೂ ಮಿಲಾಗ್ರಿಸ್‌ನ ಸಂತ ಅಂತೋನಿ ಪುಣ್ಯಕ್ಷೇತ್ರದಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಇಂದು ಜೂನ್ 13ರಂದು ಶನಿವಾರ ಜರುಗಿತು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಈ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು ಕೃಪಾಶೀರ್ವಾದ ಪಡೆದರು.

ದೇವರನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ:

ಮಹೋತ್ಸವದ ಪ್ರಧಾನ ಹಾಗೂ ಸಮಾರೋಪ ದಿವ್ಯ ಬಲಿಪೂಜೆಯು ಸಂಜೆ ಮಿಲಾಗ್ರಿಸ್ ದೇವಾಲಯದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಮುಖ್ಯ ನೇತ್ರತ್ವದಲ್ಲಿ ನೆರವೇರಿತು.

ಪ್ರವಚನ ನೀಡಿದ ಧರ್ಮಾಧ್ಯಕ್ಷರು, ಕುಟುಂಬದ ಮಹತ್ವವನ್ನು ಒತ್ತಿಹೇಳಿದರು:

“ಕುಟುಂಬವು ನಂಬಿಕೆ ಮತ್ತು ಪ್ರೀತಿಯ ತೊಟ್ಟಿಲು. ಇದು ನಾವು ದೇವರ ಪ್ರೀತಿಯನ್ನು ಅನುಭವಿಸುವ ಮೊದಲ ಮನೆ-ದೇವಾಲಯವಾಗಿದೆ. ಕುಟುಂಬವು ಕ್ರೈಸ್ತ ಕೇಂದ್ರಿತವಾಗಿದ್ದರೆ, ಅದು ಆಶೀರ್ವಾದ, ಭರವಸೆ ಮತ್ತು ಸ್ವಸ್ಥತೆಯನ್ನು ತರುತ್ತದೆ. ಸಂತರು ಕೇವಲ ದೈಹಿಕ ಕಾಯಿಲೆಗಳನ್ನಷ್ಟೇ ಅಲ್ಲ, ಪ್ರಾರ್ಥನೆಯ ಶಕ್ತಿಯಿಂದ ಒಡೆದ ಹೃದಯಗಳನ್ನು ಗುಣಪಡಿಸುತ್ತಾರೆ. ಕಳೆದುಹೋದ ವಸ್ತುಗಳನ್ನು ಹುಡುಕಿಕೊಡುವ ಸಂತರೆಂದು ಪ್ರಸಿದ್ಧರಾಗಿರುವ ಅಂತೋನಿಯವರು, ‘ನಮ್ಮ ಕುಟುಂಬದಲ್ಲಿ ನಾವು ದೇವರನ್ನು ಕಳೆದುಕೊಂಡಿದ್ದೇವೆಯೇ?’ ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ. ಕುಟುಂಬದಲ್ಲಿ ದೇವರನ್ನು ಕಳೆದುಕೊಂಡರೆ, ನಾವು ಎಲ್ಲವನ್ನೂ ಕಳೆದುಕೊಂಡಂತೆ.”

ದಿನವಿಡೀ ನಡೆದ ಧಾರ್ಮಿಕ ವಿಧಿಗಳು:

ಹಬ್ಬದ ದಿನದ ಧಾರ್ಮಿಕ ವಿಧಿಗಳು ಮುಂಜಾನೆ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ವಂದನೀಯ ಫಾದರ್ ಪಾವ್ಲ್ ಮೆಲ್ವಿನ್ ಡಿಸೋಜ (ಕಾಪುಚಿನ್) ಅವರ ನೇತೃತ್ವದ ಬಲಿಪೂಜೆಯೊಂದಿಗೆ ಆರಂಭವಾದವು. ಪೂರ್ವಾಹ್ನ ಕರ್ನಾಟಕ ಪ್ರಾಂತ್ಯದ ಒ.ಸಿ.ಡಿ. ಪ್ರಾಂತೀಯ ಮುಖ್ಯಸ್ಥರಾದ ಅತೀ ವಂದನೀಯ ಫಾದರ್ ಜೋನ್ ಸಿಕ್ವೇರಾ ಅವರು ಜೆಪ್ಪು ಆಶ್ರಮದಲ್ಲಿ ಸಂಭ್ರಮದ ದಿವ್ಯ ಬಲಿಪೂಜೆ ನೆರವೇರಿಸಿ, ವೃದ್ಧರು ಹಾಗೂ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇದೇ ವೇಳೆ, ಮಿಲಾಗ್ರಿಸ್ ದೇವಾಲಯದಲ್ಲಿ ಬೆಳಿಗ್ಗೆ ರೊಸಾರಿಯೋ ಕೆಥೆಡ್ರಲ್‌ನ ರೆಕ್ಟರ್ ಆದ ಅತೀ ವಂದನೀಯ ಫಾದರ್ ವಾಲೆರಿಯನ್ ಡಿಸೋಜ ಅವರು ಬಲಿಪೂಜೆ ಅರ್ಪಿಸಿದರು. ಸಾಯಂಕಾಲದ ವೇಳೆ ಮಲಯಾಳಂ ಭಾಷಿಕ ಭಕ್ತರಿಗಾಗಿ ವಿಶೇಷ ದಿವ್ಯ ಬಲಿಪೂಜೆ ಜರುಗಿತು.

ಬಲಿಪೂಜೆಗಳ ಬಳಿಕ ಸಂತ ಅಂತೋನಿಯವರ ನೊವೆನಾ ಪ್ರಾರ್ಥನೆ ಹಾಗೂ ಪವಿತ್ರ ಅವಶೇಷಗಳ ದರ್ಶನ ಮತ್ತು ಆಶೀರ್ವಾದ ಪಡೆದು ಭಕ್ತರು ಪುನೀತರಾದರು. ಮೂರು ದಿನಗಳ ತ್ರಿದುಮ್ ಹಾಗೂ ಪ್ರಧಾನ ಹಬ್ಬದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಆಶ್ರಮದ ನಿರ್ದೇಶಕರಾದ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ಆಡಳಿತಾಧಿಕಾರಿ ವಂದನೀಯ ಫಾದರ್ ಪ್ರವೀಣ್ ಆಮೃತ್ ಮಾರ್ಟಿಸ್ ಹಾಗೂ ಆಡಳಿತ ಮಂಡಳಿಯು ಕೃತಜ್ಞತೆ ಸಲ್ಲಿಸಿತು.

ವರದಿ ಹಾಗೂ ಫೋಟೊ

ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್

ನಿರ್ದೇಶಕರು, ಕೆನರಾ ಕಮ್ಯುನಿಕೇಷನ್ ಸೆಂಟರ್

ಮಂಗಳೂರು ಧರ್ಮಕ್ಷೇತ್ರ

You may also like

News

ಧರ್ಮೇಂದ್ರ ಪ್ರಧಾನ್ ರಾಜೀನಾಮೆ – ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿಗೆ ಹೆಚ್ಚುವರಿ ಜವಾಬ್ದಾರಿ

ಜಂತರ್‌-ಮಂತರ್ ವಿದ್ಯಾರ್ಥಿ ಹೋರಾಟಕ್ಕೆ ತೆರೆ – ಪ್ರತಿಭಟನಾಕಾರರ ಮೇಲಿನ FIR ಹಿಂಪಡೆಯಲು ಕೇಂದ್ರ ಸಮ್ಮತಿ; ಶಿಕ್ಷಣ ಸುಧಾರಣೆಗೆ ಭರವಸೆ ದೇಶದಾದ್ಯಂತ ಸಂಚಲನ ಮೂಡಿಸಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ
News

ಶಾಲಾ ವಾಹನ ದುರಂತ – ಸೂಕ್ತ ದಾಖಲೆಗಳಿಲ್ಲದೆ ಬಸ್ ಚಾಲನೆ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬರಿಮಾರ್‌ನಲ್ಲಿ ಜುಲೈ 22ರಂದು ಸಂಭವಿಸಿದ

You cannot copy content of this page