September 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಕಾಂಗ್ರೆಸ್‌ಗೆ ಕ್ರೈಸ್ತರು ಕೇವಲ ವೋಟ್ ಬ್ಯಾಂಕ್?” : 35 ಜಿಲ್ಲಾ ಅಧ್ಯಕ್ಷರ ಪಟ್ಟಿಯಲ್ಲೂ ಸ್ಥಾನವಿಲ್ಲ – ಆಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಮಂಗಳೂರು: ಜಾತ್ಯಾತೀತ ಸಿದ್ಧಾಂತವನ್ನು ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷವು ಗ್ರಾಮ ಪಂಚಾಯತ್‌ನಿಂದ ಜಿಲ್ಲಾ ಪಂಚಾಯತ್‌, ವಿಧಾನ ಪರಿಷತ್‌, ವಿಧಾನಸಭೆ ಹಾಗೂ ಲೋಕಸಭೆವರೆಗೆ ವಿವಿಧ ಹಂತಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಾಗ ಪಕ್ಷದ ಸಿದ್ಧಾಂತಕ್ಕೆ ನಿಷ್ಠೆಯಿಂದ ದುಡಿಯುತ್ತಿರುವ ಕ್ರೈಸ್ತ ಸಮುದಾಯದ ನಾಯಕರನ್ನು ಕಡೆಗಣಿಸುತ್ತಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಇದೀಗ ಎದುರಾಗಿದೆ ಎಂದು ಅಖಿಲ ಭಾರತ ಕ್ರೈಸ್ತ ಒಕ್ಕೂಟ (AICU) ಇದರ ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ಸಂಘಟನೆಯಲ್ಲಿ ಪ್ರಮುಖ ಹುದ್ದೆಗಳನ್ನು ಹಂಚಿಕೆ ಮಾಡುವಾಗ ಕ್ರೈಸ್ತ ಸಮುದಾಯಕ್ಕೆ ಸಮರ್ಪಕ ಪ್ರಾತಿನಿಧ್ಯ ನೀಡಲಾಗುತ್ತಿದೆಯೇ? ಎಂಬುದನ್ನು ಕಾಂಗ್ರೆಸ್ ನಾಯಕತ್ವ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

“ಬೆರಳೆಣಿಕೆಯ ಒಂದೆರಡು ನಾಯಕರಿಗೆ ಮಾತ್ರ ಹುದ್ದೆ ನೀಡಿ, ಉಳಿದ ಪ್ರಮುಖ ಸಂಘಟನಾ ಹುದ್ದೆಗಳ ಪ್ರಕ್ರಿಯೆಯಲ್ಲಿ ಇಡೀ ಕ್ರೈಸ್ತ ಸಮುದಾಯವನ್ನು ಕಡೆಗಣಿಸುವುದು ಯಾವ ರೀತಿಯ ಸಾಮಾಜಿಕ ನ್ಯಾಯ?” ಎಂದು ಆಲ್ವಿನ್ ಡಿಸೋಜ ಪಾನೀರ್ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ರಾಜ್ಯದ 35 ಜಿಲ್ಲಾ ಕಾಂಗ್ರೆಸ್ ಸಮಿತಿಗಳ (DCC) ಅಧ್ಯಕ್ಷರ ನೇಮಕಾತಿ ನಡೆದಿದ್ದು, ಈ ಪಟ್ಟಿಯಲ್ಲಿ ಒಬ್ಬ ಕ್ರೈಸ್ತ ನಾಯಕನಿಗೂ ಅವಕಾಶ ನೀಡದಿರುವುದು ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.

ಇದರ ಜೊತೆಗೆ, 35 DCC ಅಧ್ಯಕ್ಷರ ಪೈಕಿ ಒಬ್ಬ ಮಹಿಳೆಯಿಗೂ ಅಧ್ಯಕ್ಷ ಸ್ಥಾನ ನೀಡದಿರುವುದು ಅತ್ಯಂತ ಬೇಸರದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಸಮಾನ ಅವಕಾಶಗಳ ಕುರಿತು ಮಾತನಾಡುವ ಪಕ್ಷದ ನಾಯಕರು ಪಕ್ಷದ ಸಿದ್ಧಾಂತವನ್ನು ಏಕೆ ಅನುಸರಿಸಲಿಲ್ಲ? ನೇಮಕಾತಿಯಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಏಕೆ ಸಿಗಲಿಲ್ಲ ಎಂಬುದಕ್ಕೂ ಕಾಂಗ್ರೆಸ್ ನಾಯಕತ್ವ ಉತ್ತರಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

“ಕ್ರೈಸ್ತ ಸಮುದಾಯದ ಮತಗಳು ಬೇಕು; ಆದರೆ ಪಕ್ಷದ ಸಂಘಟನೆಯಲ್ಲಿನ ನಿರ್ಣಾಯಕ ಸ್ಥಾನಗಳಲ್ಲಿ ಪ್ರಾತಿನಿಧ್ಯ ಬೇಡವೇ? ಮಹಿಳೆಯರ ಬೆಂಬಲ ಬೇಕು; ಆದರೆ 35 ಜಿಲ್ಲೆಗಳ ಸಂಘಟನಾ ನಾಯಕತ್ವದಲ್ಲಿ ಒಬ್ಬ ಮಹಿಳೆಗೂ ಅವಕಾಶವಿಲ್ಲವೇ?” ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ನಾಯಕತ್ವದ ಮುಂದಿಟ್ಟಿರುವ ಆಲ್ವಿನ್ ಡಿಸೋಜ ಪಾನೀರ್, ಈ ನಿರ್ಧಾರಗಳ ಕುರಿತು ಹೈಕಮಾಂಡ್ ಸ್ಪಷ್ಟ ಆತ್ಮಾವಲೋಕನ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಜಾತ್ಯಾತೀತತೆ, ಸಾಮಾಜಿಕ ನ್ಯಾಯ ಹಾಗೂ ಸಮಾನ ಪ್ರಾತಿನಿಧ್ಯವನ್ನು ತನ್ನ ಪ್ರಮುಖ ಸಿದ್ಧಾಂತಗಳೆಂದು ಪ್ರತಿಪಾದಿಸುವ ಕಾಂಗ್ರೆಸ್, ಅದೇ ಸಿದ್ಧಾಂತಗಳನ್ನು ಪಕ್ಷದ ಆಂತರಿಕ ಸಂಘಟನಾ ನೇಮಕಾತಿಗಳಲ್ಲೂ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುತ್ತಿದೆಯೇ? ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇಷ್ಟು ವರ್ಷಗಳ ಕಾಲ ತನ್ನ ಜಾತ್ಯಾತೀತ ಹಾಗೂ ಸಾಮಾಜಿಕ ನ್ಯಾಯದ ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷವು ಇತ್ತೀಚಿನ ನೇಮಕಾತಿ ಪ್ರಕ್ರಿಯೆಗಳಲ್ಲಿ ಎಡವುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಪಕ್ಷದ ಮೂಲ ಸಿದ್ಧಾಂತಗಳನ್ನೇ ಕಡೆಗಣಿಸಿ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ರಾಜಕೀಯವಾಗಿ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಅದರ ಪರಿಣಾಮಗಳಿಗೆ ಪಕ್ಷದ ಸಂಬಂಧಪಟ್ಟ ನಾಯಕರೇ ನೇರ ಹೊಣೆಗಾರರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆಲ್ವಿನ್ ಡಿಸೋಜ ಪಾನೀರ್ ಎಚ್ಚರಿಸಿದ್ದಾರೆ.

You may also like

News

ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೈಂದೂರಿನ ಆಶಾ ವೀಣಾ ಡಯಾಸ್‌ ಅವರಿಗೆ ದ್ವಿತೀಯ ಸ್ಥಾನ

ಕಿರಣ್ ಬೇಡಿ ಅವರ ಕುರಿತು 5 ನಿಮಿಷಗಳ ಭಾಷಣ – ಪ್ರತಿಭೆಗೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ಕರ್ನಾಟಕ ರಾಜ್ಯದ ಸಮಾಜ ವಿಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ
News

ಸೆಪ್ಟೆಂಬರ್ 14ರಿಂದ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ 9 ದಿನಗಳ ನೊವೇನಾ – ಸೆಪ್ಟೆಂಬರ್ 23ರಂದು ವಾರ್ಷಿಕ ಮಹೋತ್ಸವ

ಸಿಟಿ ವಲಯದ ಶ್ರೇಷ್ಠಗುರು ಫಾದರ್ ರಿಚಾರ್ಡ್ ಕುವೆಲ್ಲೊ ಅವರಿಂದ ಧ್ವಜಾರೋಹಣ ಮಂಗಳೂರಿನ ಜೈಲ್ ರಸ್ತೆಯ ಕಪುಚಿನ್ ಧರ್ಮಗುರುಗಳ ಸೈಂಟ್ ಆನ್ಸ್ ಫ್ರೈರಿ ಆವರಣದಲ್ಲಿರುವ ಸೈಂಟ್ ಪಾದ್ರೆ ಪಿಯೊ

You cannot copy content of this page