October 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬೆಳ್ತಂಗಡಿ ಧರ್ಮಕ್ಷೇತ್ರದ ಶ್ರೇಷ್ಠ ಗುರು ಅತೀ ವಂದನೀಯ ಡಾ. ಮಾಣಿ ವೆಳುತ್ತೇಡತ್ತು ಪರಂಬಿಲ್ ನಿಧನ

ಧರ್ಮ, ಶಿಕ್ಷಣ ಹಾಗೂ ಧರ್ಮಸಭೆಯ ಸೇವೆಯಲ್ಲಿ ಸ್ಮರಣೀಯ ಕೊಡುಗೆ

ಬೆಳ್ತಂಗಡಿ ಸೀರೋ ಮಲಬಾರ್ ಧರ್ಮಕ್ಷೇತ್ರದ ಶ್ರೇಷ್ಠ ಗುರು ಆಗಿ ಸೇವೆ ಸಲ್ಲಿಸುತ್ತಿದ್ದ 64 ವರ್ಷ ಪ್ರಾಯದ ಅತೀ ವಂದನೀಯ ಡಾ. ಮಾಣಿ ವೆಳುತ್ತೇಡತ್ತು ಪರಂಬಿಲ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಅಕ್ಟೋಬರ್ 1ರಂದು ಗುರುವಾರ ನಿಧನರಾದರು. ಉದನೆ ಸಮೀಪದ ನೆಲ್ಯಡ್ಕ ನಿವಾಸಿಯಾಗಿದ್ದ ಅವರು ಧರ್ಮಗುರುಗಳಾಗಿ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಧರ್ಮಸಭೆಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಸಮರ್ಪಿತ ಸೇವೆ ಸಲ್ಲಿಸಿದ್ದರು.

ಅವರ ನಿಧನದಿಂದ ಬೆಳ್ತಂಗಡಿ ಧರ್ಮಕ್ಷೇತ್ರ ಹಾಗೂ ಭಕ್ತ ಸಮುದಾಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಧರ್ಮಗುರುಗಳು, ಭಕ್ತಾದಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಗಲಿದ ಧರ್ಮಗುರುಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

ದಿವಂಗತ ಮಾಣಿ ಮತ್ತು ತ್ರೇಸ್ಯಮ್ಮ ದಂಪತಿಯ ಪುತ್ರರಾಗಿದ್ದ ಅತೀ ವಂದನೀಯ ಡಾ. ಮಾಣಿ ವೆಳುತ್ತೇಡತ್ತು ಪರಂಬಿಲ್ ಅವರು ಎಂಟು ಮಕ್ಕಳಲ್ಲಿ ಒಬ್ಬರು. ಜೋಸ್, ಸ್ಕರಿಯಾ, ಮರಿಯಾ, ಎಲಿಜಬೆತ್, ಜೆಸ್ಸಿ, ಫಿಲೋಮಿನಾ ಹಾಗೂ ತ್ರೇಸ್ಯ ಅವರು ಅವರ ಸಹೋದರ-ಸಹೋದರಿಯರು.

ನೆಲ್ಯಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಉದನೆಯ ಸೈಂಟ್ ಆಂಥೋನೀಸ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದ ಅವರು, ಬಳಿಕ ತಲಶ್ಶೇರಿಯ ಸೈಂಟ್ ಜೋಸೆಫ್ ಮೈನರ್ ಸೆಮಿನರಿ ಹಾಗೂ ಕೋಟಯಂ ವಡವಾದೂರಿನ ಸೈಂಟ್ ಥಾಮಸ್ ಅಪೋಸ್ತೊಲಿಕ್ ಸೆಮಿನರಿಯಲ್ಲಿ ಧರ್ಮಗುರು ತರಬೇತಿ ಪಡೆದರು. ಮುಂದುವರಿದ ಅಧ್ಯಯನಕ್ಕಾಗಿ ಮೈಸೂರಿನ ಕೆಎಸ್‌ಒಯು ಹಾಗೂ ರೋಮ್‌ನ ಪಾಂಟಿಫಿಕಲ್ ಯೂನಿವರ್ಸಿಟಿ ಆಫ್ ದಿ ಹೋಲಿ ಕ್ರಾಸ್‌ನಲ್ಲಿ ಅಧ್ಯಯನ ನಡೆಸಿ, 2006ರಲ್ಲಿ ರೋಮ್‌ನಿಂದ ಡಾಕ್ಟರೇಟ್ ಪದವಿ ಪಡೆದಿದ್ದರು.

ಧರ್ಮಗುರುಗಳಾಗಿ ಬೆದೂರು, ಚೆಂಪನೋಡ, ಮುದೂರು, ಬಂಗಾಡಿ, ಧರ್ಮಸ್ಥಳ, ಬೆಳ್ತಂಗಡಿ, ಸಿದ್ದಾಪುರ (ಕೊಡಗು), ಜಡ್ಕಲ್ ಹಾಗೂ ಕಂಕನಾಡಿ ಸೇರಿದಂತೆ ಹಲವು ಧರ್ಮಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಧರ್ಮಕ್ಷೇತ್ರದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಧರ್ಮಸಭೆಯ ಅಭಿವೃದ್ಧಿ ಹಾಗೂ ಭಕ್ತರ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅಂತಿಮ ಗೌರವ ಹಾಗೂ ಅಂತ್ಯಕ್ರಿಯೆ:

ಬೆಳ್ತಂಗಡಿ ಧರ್ಮಕ್ಷೇತ್ರ ಪ್ರಕಟಿಸಿರುವ ಮಾಹಿತಿಯಂತೆ, ಅಕ್ಟೋಬರ್ 2ರಂದು ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಕಂಕನಾಡಿಯ ಸೈಂಟ್ ಅಲ್ಫೋನ್ಸಾ ಫೊರೇನ್ ಚರ್ಚ್‌ನಲ್ಲಿ ಸಾರ್ವಜನಿಕ ಅಂತಿಮ ಗೌರವ ಹಾಗೂ ಪ್ರಥಮ ಹಂತದ ಪ್ರಾರ್ಥನೆ ನಡೆಯಲಿದೆ.

ಸಂಜೆ 5.30ರಿಂದ ಅಕ್ಟೋಬರ್ 3ರ ಬೆಳಗ್ಗೆ 8 ಗಂಟೆಯವರೆಗೆ ಬೆಳ್ತಂಗಡಿಯ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಸಾರ್ವಜನಿಕ ಅಂತಿಮ ಗೌರವ ಹಾಗೂ ದ್ವಿತೀಯ ಹಂತದ ಪ್ರಾರ್ಥನೆ ನಡೆಯಲಿದೆ.

ಅಕ್ಟೋಬರ್ 3ರಂದು ಬೆಳಗ್ಗೆ 9ರಿಂದ 10 ಗಂಟೆಯವರೆಗೆ ಉದನೆ ಸಮೀಪದ ಇಂಜಿರದಲ್ಲಿರುವ ವಂದನೀಯ ಡಾ. ಮಾಣಿ ಅವರ ಸಹೋದರ ಬೇಬಿ ವೆಳುತ್ತೇಡತ್ತು ಪರಂಬಿಲ್ ಅವರ ಮನೆಯಲ್ಲಿ ಸಾರ್ವಜನಿಕ ಅಂತಿಮ ಗೌರವ ಸಲ್ಲಿಸಲು ಅವಕಾಶವಿದೆ. ಬಳಿಕ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಉದನೆಯ ಸೈಂಟ್ ಥಾಮಸ್ ಫೊರೇನ್ ಚರ್ಚ್‌ನಲ್ಲಿ ಸಾರ್ವಜನಿಕ ಅಂತಿಮ ಗೌರವ ನಡೆಯಲಿದೆ.

ಅಕ್ಟೋಬರ್ 3ರಂದು ಮಧ್ಯಾಹ್ನ 2 ಗಂಟೆಗೆ ಉದನೆ ಚರ್ಚ್‌ನಲ್ಲಿ ಪವಿತ್ರ ಬಲಿಪೂಜೆ ಹಾಗೂ ಅಂತ್ಯಕ್ರಿಯೆಯ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಬೆಳ್ತಂಗಡಿ ಧರ್ಮಕ್ಷೇತ್ರದ ಚಾನ್ಸಲರ್ ಅತೀ ವಂದನೀಯ ಫಾದರ್ ಲಾರೆನ್ಸ್ ಪೂನೋಲಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಂದನೀಯ ಡಾ. ಮಾಣಿ ವೆಳುತ್ತೇಡತ್ತು ಪರಂಬಿಲ್ ಅವರ ನಿಧನಕ್ಕೆ ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಗುರುಗಳು, ಭಕ್ತಾದಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

You may also like

News

ಕುತ್ಲುರು ಸರ್ಕಾರಿ ಶಾಲೆಗೆ ಗ್ಲೋಬಲ್ ಸಿಂಪತಿ ಫೌಂಡೇಶನ್ ಆರ್ಥಿಕ ನೆರವು

ಗ್ರಾಮೀಣ ಮಕ್ಕಳಿಗೆ ಉಚಿತ ಜೂಡೋ ತರಬೇತಿ ನೀಡುವ ಭರವಸೆ – ಶಾಲೆಯ ಪರಿಸರ ಪ್ರೇಮಕ್ಕೆ ಮೆಚ್ಚುಗೆ ಬೆಳ್ತಂಗಡಿ ತಾಲೂಕಿನ ಕುತ್ಲುರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ
News

ದಸರಾ ಪ್ರವಾಸಕ್ಕೆ KSRTC ವಿಶೇಷ ಪ್ಯಾಕೇಜ್ – 5 ಧಾರ್ಮಿಕ ಪ್ರವಾಸ ಮಾರ್ಗಗಳಿಗೆ ಅವಕಾಶ

6ರಿಂದ 12 ವರ್ಷದ ಮಕ್ಕಳಿಗೆ ವಿಶೇಷ ದರ – ಊಟದ ವ್ಯವಸ್ಥೆಯೂ ಲಭ್ಯ ದಸರಾ ಹಬ್ಬದ ಪ್ರಯುಕ್ತ ಮಂಗಳೂರು KSRTC ವಿಭಾಗವು ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು ಹಾಗೂ

You cannot copy content of this page