ನೈನಾಡಿನಲ್ಲಿ ಪಾದುವಾ ಕಾಲೇಜಿನ 7 ದಿನಗಳ NSS ಶಿಬಿರಕ್ಕೆ ಚಾಲನೆ
“ಸೇವೆಯ ಮೂಲಕ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ” – ಫಾದರ್ ಅರುಣ್ ವಿಲ್ಸನ್ ಲೋಬೊ

ಪಾದುವಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವು ನೈನಾಡು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಉದ್ಘಾಟನೆಗೊಂಡಿತು.
ಪಾದುವಾ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕ ಹಾಗೂ ಪಾದುವಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾದರ್ ಅರುಣ್ ವಿಲ್ಸನ್ ಲೋಬೊ ಅವರು ಅಧ್ಯಕ್ಷತೆ ವಹಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎನ್ಎಸ್ಎಸ್ ಶಿಬಿರವು ಶಿಕ್ಷಣದ ಅವಿಭಾಜ್ಯ ಭಾಗವಾಗಿದ್ದು, ಸೇವೆಯ ಮೂಲಕ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಕಲಿಯಲು ಅವಕಾಶ ದೊರೆಯುತ್ತದೆ. ಶಿಬಿರಾರ್ಥಿಗಳು ಗ್ರಾಮಸ್ಥರೊಂದಿಗೆ ಬೆರೆತು ಶಿಸ್ತು ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.


ವಂದನೀಯ ಫಾದರ್ ಅನಿಲ್ ಅವಿಲ್ ಲೋಬೊ ಮಾತನಾಡಿ, ಒಗ್ಗಟ್ಟಿನಿಂದ ಪ್ರಾರ್ಥಿಸಿ, ಸಹಕಾರದೊಂದಿಗೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸೇವೆಯೇ ದೇವರ ಸೇವೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಮನುಷ್ಯನ ಯಶಸ್ಸಿಗೆ ಧರ್ಮ, ನೈತಿಕತೆ ಮತ್ತು ಉತ್ತಮ ಮೌಲ್ಯಗಳು ಬುನಾದಿಯಾಗಿವೆ ಎಂದು ಹೇಳಿದರು.
ಪಿಲಾತಬೆಟ್ಟು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಶಾರದಾ ಮಾತನಾಡಿ, ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರ ನಡೆಯುತ್ತಿರುವುದು ಸಂತಸದ ಸಂಗತಿ. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ. ಗ್ರಾಮದ ಸ್ವಚ್ಛತೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಸ್ವಯಂಸೇವಕರು ಕೈಜೋಡಿಸಬೇಕು. ಮಾದಕ ದ್ರವ್ಯ ಹಾಗೂ ಅಪರಾಧ ಚಟುವಟಿಕೆಗಳಿಂದ ದೂರವಿದ್ದು, ಸಮಾಜದ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಯುವಜನತೆ ಪಾತ್ರವಹಿಸಬೇಕು ಎಂದು ಕರೆ ನೀಡಿದರು.

ನೈನಾಡು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜೋಯೆಲ್ ಲೋಬೊ ಮಾತನಾಡಿ, ಎನ್ಎಸ್ಎಸ್ ಶಿಬಿರವು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಮುಂದಿನ ಪೀಳಿಗೆಯಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಸಹಕಾರಿಯಾಗಿದೆ. ಕಾಲೇಜು ಹಾಗೂ ಶಾಲೆಗಳ ನಡುವಿನ ಸಹಕಾರ ಮತ್ತಷ್ಟು ಬಲಗೊಳ್ಳಲಿ ಎಂದು ಆಶಿಸಿದರು.
ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರಮಿತಾ ಲೋಬೊ ಅವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಪಾದುವಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೋಷನ್ ವಿನ್ನಿ ಸಂತುಮಯೋರ್ ಅವರು ಶಿಬಿರದಲ್ಲಿ ಭಾಗವಹಿಸಿರುವ 83 ಸ್ವಯಂಸೇವಕರಿಗೆ ಎನ್ಎಸ್ಎಸ್ ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ರೀನಾ ಮಸ್ಕರೇನ್ಹಸ್, ಶಿಬಿರದ ಸಹ ಯೋಜನಾಧಿಕಾರಿ ಲೋರೆಟ್ ಅಂಥೋನಿ, ಘಟಕ ನಾಯಕ ಶ್ರವಣಕುಮಾರ್ ಹಾಗೂ ಘಟಕ ನಾಯಕಿ ಸ್ಫೂರ್ತಿ ಉಪಸ್ಥಿತರಿದ್ದರು. ಶಿಬಿರದ ಯೋಜನಾಧಿಕಾರಿ ಯತಿರಾಜ್ ಸ್ವಾಗತಿಸಿದರು. ಸಹ ಯೋಜನಾಧಿಕಾರಿ ಅನಿಲ್ ಡಿಮೆಲ್ಲೊ ವಂದಿಸಿದರು. ತನೀಷ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.



