ವೈದ್ಯಕೀಯ ನಿರ್ಲಕ್ಷ್ಯದ ಆರೋಪ ತಳ್ಳಿಹಾಕಿದ ಮಂಗಳೂರಿನ SCS ಆಸ್ಪತ್ರೆ
ರೋಗಿಯ ಸ್ಥಿತಿ ಸ್ಥಿರವಾಗಿತ್ತು – ಕುಟುಂಬಸ್ಥರಿಂದ ಬಿಲ್ ರಿಯಾಯಿತಿಗೆ ಒತ್ತಾಯಿಸಿದ ಆರೋಪ

ಮಂಗಳೂರಿನ ಬೆಂದೂರು SCS ಆಸ್ಪತ್ರೆಯಲ್ಲಿ ರೋಗಿಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ನೀಡಲಾಗಿಲ್ಲ ಹಾಗೂ ವೈದ್ಯಕೀಯ ನಿರ್ಲಕ್ಷ್ಯ ನಡೆದಿದೆ ಎಂಬ ಆರೋಪವನ್ನು ಆಸ್ಪತ್ರೆಯ ಆಡಳಿತ ಮಂಡಳಿ ತಳ್ಳಿಹಾಕಿದ್ದು, ಈ ಕುರಿತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಶಾಲಿನಿ ಎಸ್. ರಾವ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕುತ್ತಿಗೆ ನೋವಿನ ಸಮಸ್ಯೆಯಿಂದ ಲಿನೆಟ್ ಡಯಾಸ್ ಅವರು ಡಾ. ನಿತೇಶ್ ಭಂಡಾರಿ ಅವರ ಮೂಲಕ SCS ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಬೆನ್ನುಮೂಳೆ ತಜ್ಞ ಡಾ. ಈಶ್ವರ ಕೀರ್ತಿ ಅವರ ಸಲಹೆಗೆ ಒಳಪಡಿಸಲಾಗಿತ್ತು. ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿರಲಿಲ್ಲ ಹಾಗೂ ಸ್ಥಿರವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಮೆಡಿಕಲ್ ಇಂಟೆನ್ಸಿವ್ ಕೇರ್ ಯೂನಿಟ್‌ಗೆ ದಾಖಲಿಸದೆ ಖಾಸಗಿ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಗತ್ಯ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ನೀಡಲಾಗಿದ್ದು, ವೈದ್ಯರು, ನರ್ಸ್‌ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ರೋಗಿಯ ಆರೈಕೆಯನ್ನು ಸಮರ್ಪಕವಾಗಿ ನಡೆಸಿದ್ದಾರೆ ಎಂದು ಡಾ. ಶಾಲಿನಿ ಎಸ್. ರಾವ್ ತಿಳಿಸಿದ್ದಾರೆ.


ಆಸ್ಪತ್ರೆಯ ನಿಯಮಗಳ ಪ್ರಕಾರ, ಸ್ಥಿರ ಸ್ಥಿತಿಯಲ್ಲಿರುವ ರೋಗಿಗಳನ್ನು ಸಂದರ್ಶಕ ತಜ್ಞ ವೈದ್ಯರು ತಮ್ಮ ಲಭ್ಯತೆ ಹಾಗೂ ಕರ್ತವ್ಯದ ಅನುಸಾರ ಸೂಕ್ತ ಸಮಯದಲ್ಲಿ ಭೇಟಿ ಮಾಡಿ ಪರಿಶೀಲಿಸುತ್ತಾರೆ. ಆದರೆ, ಆ ದಿನ ಬೆನ್ನುಮೂಳೆ ತಜ್ಞ ಡಾ. ಈಶ್ವರ ಕೀರ್ತಿ ಅವರು ತುರ್ತು ಶಸ್ತ್ರಚಿಕಿತ್ಸೆಗಳಲ್ಲಿ ನಿರತರಾಗಿದ್ದ ಕಾರಣ ತಕ್ಷಣ ಆಸ್ಪತ್ರೆಗೆ ಬಂದು ರೋಗಿಯನ್ನು ಪರೀಕ್ಷಿಸಲು ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನು ರೋಗಿಯ ಕುಟುಂಬಸ್ಥರಿಗೆ ಕ್ಯಾಸ್ವಾಲಿಟಿಯಲ್ಲಿಯೇ ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು ಆಸ್ಪತ್ರೆ ತಿಳಿಸಿದೆ.
ಇದೇ ವೇಳೆ, ರೋಗಿಯ ಸಂಬಂಧಿಕರಾದ ಓಸ್ಕರ್ ಲೂವಿಸ್ ಅವರು ಆಸ್ಪತ್ರೆಯ ಬಿಲ್‌ನಲ್ಲಿ ರಿಯಾಯಿತಿ ನೀಡುವಂತೆ ಒತ್ತಾಯಿಸಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದರು ಎಂದು ಆಸ್ಪತ್ರೆ ಆರೋಪಿಸಿದೆ. ಆರಂಭದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿ ಬಿಲ್ ಪಾವತಿಸಲು ನಿರಾಕರಿಸಲಾಗಿತ್ತು. ರಾತ್ರಿ ಪಾಳಿಯಲ್ಲಿದ್ದ ನರ್ಸ್‌ಗಳು ಹಾಗೂ ಸ್ವಾಗತ ವಿಭಾಗದ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಕೂಗಾಡಿ ಜಗಳವಾಡಿದ್ದಲ್ಲದೆ, ಬಳಿಕ ನೇರ ವಿಡಿಯೋ ಮಾಡಲು ಪ್ರಾರಂಭಿಸಿದ್ದರು ಎಂದು ಸ್ಪಷ್ಟನೆಯಲ್ಲಿ ಹೇಳಲಾಗಿದೆ.


ಕುಟುಂಬಸ್ಥರ ಮನವಿಯನ್ನು ಪರಿಗಣಿಸಿ ಆಸ್ಪತ್ರೆಯ ವತಿಯಿಂದ ಬಿಲ್‌ನಲ್ಲಿ ಸೂಕ್ತ ರಿಯಾಯಿತಿ ನೀಡಲಾಗಿದ್ದು, ಬಳಿಕ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಚಿಕಿತ್ಸೆಯಲ್ಲಿ ಯಾವುದೇ ವೈದ್ಯಕೀಯ ಲೋಪವಾಗಿಲ್ಲ ಎಂದು ವೈದ್ಯಕೀಯ ಅಧೀಕ್ಷಕಿ ಸ್ಪಷ್ಟಪಡಿಸಿದ್ದಾರೆ.
ತುರ್ತು ಹಾಗೂ ಗಂಭೀರ ಪ್ರಕರಣಗಳಲ್ಲಿ ತಜ್ಞ ವೈದ್ಯರು ತಕ್ಷಣ ಚಿಕಿತ್ಸೆ ನೀಡುತ್ತಾರೆ. ಆದರೆ ಸ್ಥಿರ ಸ್ಥಿತಿಯಲ್ಲಿರುವ ರೋಗಿಗಳ ವಿಚಾರದಲ್ಲಿ ತಜ್ಞ ವೈದ್ಯರ ಭೇಟಿ ಅವರ ಕರ್ತವ್ಯ ಹಾಗೂ ಲಭ್ಯತೆಗೆ ಅನುಗುಣವಾಗಿ ನಡೆಯುತ್ತದೆ. ತುರ್ತು ಶಸ್ತ್ರಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರು ತಕ್ಷಣ ಆಸ್ಪತ್ರೆಗೆ ಹಾಜರಾಗಲು ಸಾಧ್ಯವಾಗದಿರುವುದಕ್ಕೆ ಆಸ್ಪತ್ರೆಯನ್ನು ಹೊಣೆಗಾರರನ್ನಾಗಿ ಮಾಡಲಾಗದು ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಯಾವುದೇ ರೋಗಿಗೆ ತಮ್ಮ ವೈದ್ಯರನ್ನು ಬದಲಾಯಿಸುವಂತೆ ಮನವಿ ಮಾಡುವ ಹಕ್ಕು ಇದೆ. ಅಂತಹ ಮನವಿಯನ್ನು ಆಸ್ಪತ್ರೆ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಡಾ. ಶಾಲಿನಿ ಎಸ್. ರಾವ್, ವೈದ್ಯಕೀಯ ಅಧೀಕ್ಷಕಿ, SCS ಆಸ್ಪತ್ರೆ, ಬೆಂದೂರು, ಮಂಗಳೂರು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



